ಗುರುಕುಲದಲ್ಲಿ ಸಂಗೀತ ಹೇಳುವ ವಿದ್ವಾಂಸರಿಗೆ ಸಂಬಳವೇ ಇಲ್ಲ!

| Published : Aug 09 2024, 12:47 AM IST

ಸಾರಾಂಶ

ಗುರುಕುಲವು ಮೈಸೂರಿನ ಸಂಗೀತ ವಿವಿಗೆ ಸೇರ್ಪಡೆಯಾದ ಮೇಲೆ ವಿವಿ ಕುಲಪತಿ ಸಂಗೀತ ಕಲಿಸುವ ಗುರುಗಳಿಗೆ ನಾವು ನಿಮ್ಮನ್ನು ಉಳಿಸಿಕೊಳ್ಳುತ್ತೇವೆ, ಆತಂಕ ಪಡಬೇಕಾಗಿಲ್ಲ ಎಂದು ಅಭಯ ನೀಡಿದ್ದರು. ಬಳಿಕ ಹೊರಹಾಕಿದ್ದಾರೆ.

ಶಿವಾನಂದ ಅಂಗಡಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಲ್ಲಿಯ ಗುರುಕುಲದಲ್ಲಿ 8-10 ವರ್ಷಗಳಿಂದ ಶಾಸ್ತ್ರೀಯ ಸಂಗೀತ ಕಲಿಸಿದ ರಾಷ್ಟ್ರಮಟ್ಟದ ಸಂಗೀತ ವಿದ್ವಾಂಸರಿಗೆ ಎರಡ್ಮೂರು ತಿಂಗಳ ಸಂಬಳವನ್ನೇ ಕೊಟ್ಟಿಲ್ಲ. ಸಾಲದ್ದಕ್ಕೆ ಒಂದು ನೋಟಿಸ್‌ ಸಹ ಕೊಡದೇ ಅವರನ್ನು ಗುರುಕುಲದಿಂದ ಹೊರಹಾಕಲಾಗಿದೆ!

ಉಸ್ತಾದ್‌ ಫಯಾಜ್ ಖಾನ್‌, ಪಂಡಿತ ಗಣಪತಿ ಭಟ್ ಹಾಸಣಗಿ, ಪಂಡಿತ ಕೈವಲ್ಯಕುಮಾರ ಗುರವ, ವಿದೂಷಿ ಅಕ್ಕಮಹಾದೇವಿ ಮಠ, ವಿದೂಷಿ ವಿಜಯಾ ಜಾಧವ ಗಾಟಲೇವಾರ್‌ ಹೀಗೆ ಹಲವಾರು ಸಂಗೀತ ವಿದ್ವಾಂಸರು ಹಾಗೂ ತಬಲಾ ಗುರುಗಳು ವಿದ್ಯಾರ್ಥಿಗಳಿಗೆ ಗುರುಮನೆಯಲ್ಲಿ ಶಾಸ್ತ್ರೀಯ ಸಂಗೀತದ ಒಂದೊಂದು ಘರಾಣೆ ಪ್ರಕಾರ ಅಭ್ಯಾಸ ಮಾಡಿಸುತ್ತಿದ್ದರು. ಈ ವರೆಗೆ ಇಲ್ಲಿ 90ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಸಂಗೀತ ಕಲಿತಿರುವುದು ವಿಶೇಷ. ಇಂಥ ವಿದ್ವಾಂಸರಿಗೆ ಕಳೆದ ಅವಧಿಯಲ್ಲೇ ಎರಡ್ಮೂರು ತಿಂಗಳಿನ ಸಂಬಳ ಪಾವತಿಯಾಗಿಲ್ಲ.

ವಿವಿ ಅಭಯವೂ ಹುಸಿ:

ಗುರುಕುಲವು ಮೈಸೂರಿನ ಸಂಗೀತ ವಿವಿಗೆ ಸೇರ್ಪಡೆಯಾದ ಮೇಲೆ ವಿವಿ ಕುಲಪತಿಯವರು ಸಂಗೀತ ಕಲಿಸುವ ಗುರುಗಳಿಗೆ ನಾವು ನಿಮ್ಮನ್ನು ಉಳಿಸಿಕೊಳ್ಳುತ್ತೇವೆ, ಆತಂಕ ಪಡಬೇಕಾಗಿಲ್ಲ ಎಂದು ಅಭಯ ನೀಡಿದ್ದಾರೆ. ಆದರೆ, ಬಳಿಕ ಗುರುಕುಲದ ಅಧಿಕಾರಿಗಳ ಮೂಲಕ ನಮ್ಮನ್ನು ನೋಟಿಸ್‌ ನೀಡದೇ ಗುರುಮನೆಯಿಂದ ಹೊರಹಾಕಲಾಯಿತು. ನಮ್ಮನ್ನು ನೇಮಕ ಮಾಡಿಕೊಳ್ಳಬೇಕಾದರೆ ಡಿಸಿಯಿಂದ ಪತ್ರ ಬಂತು. ಆದರೆ ಈಗಿನ ಘಟನಾವಳಿಗಳಿಂದ ನಮಗೆ ತೀವ್ರ ಅವಮಾನ ಆಗಿದೆ ಎಂದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ವಾನ್‌ ಉಸ್ತಾದ್‌ ಫಯಾಜ್‌ ಖಾನ್‌ ಅವರು ''''ಕನ್ನಡಪ್ರಭ''''ಎದುರು ನೊಂದು ನುಡಿದರು.

ರಾಜ್ಯ ಸರ್ಕಾರ ಹಾಗೂ ವಿವಿ ಕುಲಪತಿಗೆ ಸಹ ಎಷ್ಟೇ ಮನವಿ ಮಾಡಿಕೊಂಡರೂ ನಮ್ಮ ಸಂಬಳ ನೀಡಿಲ್ಲ. ಈಗ ಇರುವ ಬ್ಯಾಚ್‌ ಇನ್ನು ಎರಡು ವರ್ಷ ಪೂರೈಸಬೇಕು. ಅವರ ಭವಿಷ್ಯದ ಚಿಂತೆ ನಮಗೆ ಕಾಡುತ್ತಿದ್ದು, ಸರ್ಕಾರಕ್ಕೆ ಈ ಕುರಿತು ಕಾಳಜಿ ಇಲ್ಲ ಸಚಿವ ಎಚ್‌.ಕೆ. ಪಾಟೀಲ, ಶಿವರಾಜ್‌ ತಂಗಡಗಿ ಅವರು ಗುರುಕುಲ ಉಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದರು. ಆದರೆ ಸರ್ಕಾರದ ಮಟ್ಟದಲ್ಲಿ ಏನ್‌ ನಡ್ಯಾಕತ್ತೈತಿ ಗೊತ್ತಿಲ್ಲ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ:

ಸರ್ಕಾರಿ ಗುರುಕುಲ ಮಾದರಿ ಶಿಕ್ಷಣ ಕೇಂದ್ರ ದೇಶದಲ್ಲಿ ಬೇರೆಲ್ಲೂ ಇಲ್ಲ. ಹೀಗಾಗಿ ಇದನ್ನು ಉಳಿಸಿಕೊಳ್ಳಬೇಕು. ಯಾವುದೇ ವಿವಿಗೆ ಸೇರ್ಪಡೆ ಮಾಡುವುದರಿಂದ ಪ್ರಯೋಜನವಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಗುರುಕುಲ ಸೇರ್ಪಡೆ ಮಾಡಬೇಕು. ಶಾಲೆ-ಕಾಲೇಜುಗಳಿಂದ ಶಿಕ್ಷಣ ಪಡೆಯಬಹುದೇ ಹೊರತು, ನಿಜವಾದ ಸಂಗೀತ ಶಿಕ್ಷಣ ಗುರು ಮುಖೇನ ಕಲಿಯುವ ವಿದ್ಯೆಯಾಗಿದ್ದು, ಇಂಥ ಗುರುಕುಲದಿಂದ ಮಾತ್ರ ಸಾಧ್ಯ ಎಂಬುದು ಸಂಗೀತ ಗುರುಗಳ ಅಭಿಪ್ರಾಯವಾಗಿದೆ.

ಸರ್ಕಾರಕ್ಕೆ ಪ್ರತಿ ವರ್ಷ ಅಂದಾಜು ಗುರುಕುಲದ ವೆಚ್ಚ ರು. 1.40 ಕೋಟಿ ಖರ್ಚು ಮಾಡುವುದು ಕಷ್ಟವಾದರೆ ಇನ್ನು ಸಂಗೀತ ವಿವಿ ಇದನ್ನು ಹೇಗೆ ನಿಭಾಯಿಸುತ್ತದೆ ಎಂದು ಪ್ರಶ್ನಿಸುತ್ತಾರೆ ಸಂಗೀತ ವಿದ್ವಾಂಸರು.

6 ಮಂದಿ ವಿದ್ಯಾಗುರುಗಳು, ಪ್ರತಿಯೊಂದು ಗುರುವಿಗೆ ಆರು ಜನ ವಿದ್ಯಾರ್ಥಿಗಳು, ಆ ಪ್ರಕಾರ 36 ಜನ ಇದ್ದರು. ಕೆಲವರು ಕೋರ್ಸ್‌ ಮುಗಿದು ಹೋಗಿದ್ದಾರೆ. ಹೊಸದಾಗಿ ಪ್ರವೇಶಕ್ಕೆ 36 ವಿದ್ಯಾರ್ಥಿಗಳಿಗೆ ಅವಕಾಶವಿದೆ. ಅಷ್ಟರಲ್ಲಿ ಪ್ರವೇಶಾತಿ ನಿಲ್ಲಿಸಿ ಇರುವ ಹುಡುಕರು ಅತಂತ್ರ ಮಾಡ್ಯಾರ, ಮನಸ್ಸಿಗೆ ದುಃಖ ಆಗಿದೆ. ಇಂಥ ಗುರುಕುಲ ಸರ್ಕಾರಿ ಮಟ್ಟದಲ್ಲಿ ಎಲ್ಲೂ ಇಲ್ಲ, ಗಂಗಮ್ಮನ ಹೆಸರಿನಲ್ಲಿ ಮಾಡಿದ್ದು, ಅವರ ಹೆಸರಿಗೆ ಅಪಮಾನ ಮಾಡಿದಂಗಾ ಆತಲ್ಲ, ಕಲಾವಿದರಿಗೆ ಬೆಲೆ ಇಲ್ಲ ಎಂದು ಫಯಾಜ್‌ ಖಾನ್‌ ಅವರು ಕಳವಳ ವ್ಯಕ್ತಪಡಿಸುತ್ತಾರೆ.

ಕೋಟ್‌

ಗುರುಕುಲಕ್ಕೆ ನಾವು ಕೇಳಿದ್ದು ಬರೀ 1.40 ಕೋಟಿ ರು. ಇವರಿಗೆ ಅದು ಕೊಡಾಕ್‌ ಆಗಂಗಿಲ್ಲ ಅಂತ ಮೈಸೂರು ಸಂಗೀತ ವಿವಿಗೆ ಕೊಟ್ಟಾರ್, ಯಾವ ಮಂತ್ರಿಗೂ ಸಂಗೀತದ ಕಿಮ್ಮತ್ತು ಗೊತ್ತಿಲ್ಲ. ನಿಮ್ಮ ಸಂಬಳ ವಿವಿದವರು ಕೊಡ್ಬೇಕ್‌, ನಾವ್ಯಾಕ್‌ ಕೊಡೂನು ಅಂತಾರ್, ಸರ್ಕಾರನೂ ಕೊಡಲಿಲ್ಲ, ಅದಕ್‌ ಸುಮ್ಮನ್‌ ನೀರ್‌ ಹಣಸಿ ಕುಂತೇವಿ.

ಕೈವಲ್ಯಕುಮಾರ ಗುರವ, ಗುರುಕುಲದ ಗುರುಗಳುಪೋಟೋ

ಗುರುಕುಲದ ಗುರುಮನೆಯಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಅಭ್ಯಾಸ ಮಾಡಿಸುತ್ತಿರುವ ಉಸ್ತಾದ್ ಫಯಾಜ್‌ ಖಾನ್.