ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರವಿದ್ಯಾರ್ಥಿಗಳು ಟಿ.ವಿ., ಮೊಬೈಲ್ ನಿಂದ ದೂರವಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಂಡು ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ. ಶಿವಮೂರ್ತಿ ಹೇಳಿದರು. ತಾಲೂಕಿನ ಸೋಸಲೆಯಲ್ಲಿರುವ ಜ್ಞಾನೋದಯ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸದಲ್ಲಿ ಅವರು ಮಾತನಾಡಿದರು.ಪೋಷಕರು ಪರೀಕ್ಷಾ ಸಮಯದಲ್ಲಿ ಮನೆಯಲ್ಲಿ ಧಾರಾವಾಹಿಗಳನ್ನು ನೋಡಲು ಟಿ.ವಿ. ಹಾಕಬಾರದು ವಿದ್ಯಾರ್ಥಿಗಳ ಸಾಧನೆಗೆ ಪೂರಕವಾದ ಪರಿಸರವನ್ನು ನಿರ್ಮಾಣ ಮಾಡಿಕೊಡಬೇಕು. ಖಾಸಗಿ ಶಾಲೆಯವರು ಎಲ್ಲವನ್ನು ಕಲಿಸುತ್ತಾರೆ ಎಂಬ ಮನೋಭಾವ ಬಿಡಬೇಕು. ಶಾಲೆಗೆ ಆಗಾಗ್ಗೆ ಭೇಟಿ ನೀಡಿ ನಿಮ್ಮ ಮಕ್ಕಳ ಪ್ರಗತಿಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಬೇಕು. ಈ ಶಾಲಾ ವಾರ್ಷಿಕೋತ್ಸವದಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯ ಅನಾವರಣವಾಗುತ್ತದೆ ಎಂದರು. ಜಿಲ್ಲಾ ಆಸ್ಪತ್ರೆಯ ನರ್ಸಿಂಗ್ ಅಧೀಕ್ಷಕಿ ಕೆ. ಸೆಲಿನಾ ಮಾತನಾಡಿ, ಜ್ಞಾನೋದಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧವಾದ ಶಿಕ್ಷಣವನ್ನು ನೀಡುತ್ತಿದೆ. ನರ್ಸಿಂಗ್ ಕೆಲಸ ಪವಿತ್ರವಾದ ಕೆಲಸವಾಗಿದ್ದು, ಸೇವಾ ಮನೋಭಾವದಿಂದ ಕೆಲಸ ಮಾಡಿಗುಣಮಟ್ಟದ ಶಿಕ್ಷಣ ಪಡೆದು ಉತ್ತಮವಾದ ಜ್ಞಾನ ಬೆಳೆಸಿಕೊಂಡರೆ ಉತ್ತಮ ಚಿಕಿತ್ಸೆ ನೀಡಬಹುದು. ಸೇವೆ ಮಾಡಲು ಆತ್ಮ ಬಲವಿರಬೇಕು. ರೋಗಿಗಳ ಬಾಳಿನಲ್ಲಿ ನೀವೇ ಬೆಳಕಾಗಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ಎಸ್. ಮೋಹನ್ ರಾಜ್ ಮಾತನಾಡಿ, ನಮ್ಮ ಸಂಸ್ಥೆ ಕಳೆದ 15 ವರ್ಷದಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಕಡಿಮೆ ಹಣ ಪಡೆದು ನೀಡುತ್ತಿದ್ದೇವೆ. ಶಿಕ್ಷಣದ ಜೊತೆಗೆ ಸಂಗೀತಾ, ಕರಾಟೆ, ಚಿತ್ರಕಲೆ, ನೃತ್ಯದ ತರಬೇತಿಯನ್ನು ನೀಡಲು ಶಿಕ್ಷಕರನ್ನು ನೇಮಿಸಿದ್ದೇವೆ. ಈಜುಕೊಳ ನಿರ್ಮಾಣ ಮಾಡಲು ಯೋಜನೆ ಇದ್ದು, ಪೋಷಕರು ಸಹಕಾರ ನೀಡಬೇಕು ಎಂದರು. ಸಂಸ್ಥೆಯ ನಿರ್ದೇಶಕ ಡಾ.ಕೆ. ವಿಜಯಲಕ್ಷ್ಮಿ, ಪ್ರೊ. ನಂಜರಾಜಅರಸ್, ಸಿ.ಜೆ. ಸ್ಯಾಮುಯಲ್, ಡಿ. ಆಶೀರ್ವತಮ್, ಸಿದ್ದರಾಜು, ಚಂದ್ರಮ್ಮ, ಮುರಳಿ, ಮುಖ್ಯಶಿಕ್ಷಕರಾದ ಕೆ. ಹರ್ಷಿತಾ, ವೆಂಕಟೇಶ್, ಆರೋಗ್ಯ ಮೇರಿ, ಸಲ್ಮಾ, ಪುಷ್ಪ, ನೀತು, ಎಸ್ತಾರ್ ಕೃಪಾರಾಜ್, ಶ್ಯಾಮ್ ರಾಜ್ ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.