ಸಾರಾಂಶ
ಭದ್ರಾವತಿ ನಗರದ ಟೈಮ್ಸ್ ಸ್ಫೂರ್ತಿ ಇಂಟರ್ ನ್ಯಾಷನಲ್ ಶಾಲೆಯ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಿಳಿಕಿ ಕ್ರಾಸ್ ಬಳಿ ಪಲ್ಟಿಯಾಗಿದೆ. ಈ ವೇಳೆ ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಬೈಪಾಸ್ ರಸ್ತೆಯಲ್ಲಿ ಖಾಸಗಿ ಶಾಲೆ ಬಸ್ ಪಲ್ಟಿಯಾಗಿದ್ದು, ಸುಮಾರು 20ಕ್ಕೂ ಹೆಚ್ಚು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.ಬೈಪಾಸ್ ರಸ್ತೆ ವಿಶ್ವೇಶ್ವರಯ್ಯ ನಗರದ ಟೈಮ್ಸ್ ಸ್ಫೂರ್ತಿ ಇಂಟರ್ ನ್ಯಾಷನಲ್ ಶಾಲೆಯ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಗಾಯಾಳು ಮಕ್ಕಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶನಿವಾರ ಮಧ್ಯಾಹ್ನ ಶಾಲೆಯಿಂದ ಮಕ್ಕಳನ್ನು ಮನೆಗಳಿಗೆ ಕರೆದುಕೊಂಡು ಹೋಗುವಾಗ ಬಿಳಿಕಿ ಕ್ರಾಸ್ ನಿಂದ ಸ್ವಲ್ಪ ಮುಂದೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ ಯಾಗಿದೆ. ವಾಹನದಲ್ಲಿ ಸುಮಾರು 35 ಮಕ್ಕಳು ಇದ್ದು, ಈ ಪೈಕಿ ಸುಮಾರು 20 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಎದುರುನಿಂದ ಕಾರೊಂದು ಬರುತ್ತಿತ್ತು, ಅಪಘಾತ ತಪ್ಪಿಸಲು ಹೋಗಿ ಬಸ್ ಪಲ್ಟಿಯಾಗಿದೆ ಎಂದೂ ಹೇಳಲಾಗಿದೆ. ಈ ಸಂಬಂಧ ಶಾಲಾ ಆಡಳಿತ ಮಂಡಳಿಯಾಗಲಿ, ಮಕ್ಕಳ ಪೋಷಕರಾಗಲಿ ಇದುವರೆಗೂ ದೂರು ದಾಖಲಿಸಿಲ್ಲ. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ತೆರಳಿದ್ದಾಗ ಕಾರು ಚಾಲಕ ಸಹ ಸ್ಥಳದಲ್ಲಿ ಇರಲಿಲ್ಲ. ಇದರಿಂದಾಗಿ ಪೊಲೀಸರು ಆಡಳಿತ ಮಂಡಳಿಗೆ ದೂರು ದಾಖಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.ಕಳೆದ ಎರಡು ಮೂರು ವರ್ಷಗಳಿಂದ ಬೈಪಸ್ ರಸ್ತೆಯಲ್ಲಿ ಹೆದ್ದಾರಿ ಪ್ರಾಧಿಕಾರದಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಈ ನಡುವೆ ವಾಹನಗಳ ದಟ್ಟಣೆ ಅಧಿಕವಾಗಿದ್ದು, ಅಪಘಾತಗಳು ಹೆಚ್ಚಾಗುತ್ತಿವೆ. ಹೆದ್ದಾರಿ ಪ್ರಾಧಿಕಾರವು ಹೆಚ್ಚಿನ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.