- ಜಿಲ್ಲಾ ಎಸ್‌ಪಿ ಸೂಚನೆಯಂತೆ ಎಎಸ್‌ಐ ಅಶೋಕ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಮಂಗಳವಾರ ಬೆಳಗ್ಗೆಯಿಂದ ಹೊನ್ನಾಳಿ ಪೊಲೀಸರು ನ್ಯಾಮತಿ ರಸ್ತೆಯಲ್ಲಿ ಅನೇಕ ಶಾಲಾ- ಕಾಲೇಜುಗಳನ್ನು ತಡೆದು ವಾಹನಗಳ ದಾಖಲೆಗಳು, ಚಾಲಕರ ಡ್ರೈವಿಂಗ್ ಲೇಸನ್ಸ್, ಚಾಲಕ ಮದ್ಯ ಸೇವಿಸಿದ್ದಾನೆಯೇ ಎಂಬುದು ಪರಿಶೀಲಿಸುವ ಕಾರ್ಯಾಚರಣೆ ನಡೆಸಿದರು.

ಈ ಸಂದರ್ಭ ಶಾಲಾ ವಾಹನಗಳ ಚಾಲಕರಿಗೆ ಮತ್ತು ಸಿಬ್ಬಂದಿ ಸುರಕ್ಷಿತವಾಗಿ ಚಾಲನೆ ಮಾಡಬೇಕು, ಬಸ್‌ ಮತ್ತಿತರ ವಾಹನಗಳು ಸುಸ್ಥಿತಿಯಲ್ಲಿರಬೇಕು, ಚಾಲನಾ ಪರವಾನಗಿ, ವಾಹನ ದಾಖಲೆ ಪತ್ರಗಳು ಕಾನೂನು ರೀತಿ ಕ್ರಮಬದ್ಧವಾಗಿ ಇಟ್ಟಿರಬೇಕು ಎಂದು ಜಾಗೃತಿ ಮೂಡಿಸಿದರು. ಪೊಲೀಸರ ಈ ಕಾಳಜಿ ಪಟ್ಟಣದ ಸಾರ್ವಜನಿಕರು, ಮಕ್ಕಳ ಪೋಷಕರಿಂದ ಶ್ಲಾಘನೆಗೆ ಪಾತ್ರವಾಯಿತು.


ಎ.ಎಸ್.ಐ. ಅಶೋಕ್ ರೆಡ್ಡಿ ಈ ಸಂದರ್ಭದಲ್ಲಿ ಮಾತನಾಡಿ, ಪೊಲೀಸರೂ ಕೂಡ ಮನುಷ್ಯರೇ. ಅ‍ವರಿಗೂ ಹೃದಯ, ಮನಸ್ಸು ಇರುತ್ತದೆ. ಯಾವುದೇ ಅಪಘಾತ, ಸಾವು ಸಂಭವಿಸಿದಾಗ ಹೀಗಾಗಬಾರದಿತ್ತು ಎಂದು ಪೊಲೀಸರಿಗೂ ಅನಿಸುತ್ತದೆ. ಆದರೆ ವಿಶೇಷವಾಗಿ ಶಾಲಾ ಬಸ್‌ಗಳು ಅಪಘಾತಕ್ಕೀಡಾಗಿ ಮುಗ್ದ, ಅಮಾಯಕ ಮಕ್ಕಳ ಮರಣವಾದರೆ ಈ ನೋವನ್ನು ಯಾರಿಂದಲೂ ಸಹಿಸಲಾಗುವುದಿಲ್ಲ. ಅರಳುವ ಮುನ್ನ ಬಾಡಿಹೋಗುವ ಪರಿಸ್ಥಿತಿ ಯಾರಿಗೂ ಬರಬಾರದು. ಆದ್ದರಿಂದ ಜಿಲ್ಲಾ ಪೊಲೀಸ್ ಅಡಳಿತ ಸ್ಥಳೀಯ ಅಧಿಕಾರಿಗಳ ಮೂಲಕ ಕಡ್ಡಾಯವಾಗಿ ಶಾಲಾ ವಾಹನಗಳನ್ನು ಚೆಕ್ ಮಾಡುವಂತೆ ಸೂಚನೆ ನೀಡಿದೆ. ಅದರಂತೆ ಮಂಗಳವಾರದಿಂದ ಪಟ್ಟಣದ ಶಾಲಾ ವಾಹನಗಳನ್ನು ಪರಿಶೀಲಿಸುವ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಪೊಲೀಸ್ ತಂಡದಲ್ಲಿ 112 ವಾಹನದ ಸಿಬ್ಬಂದಿ ಎ.ಎಸ್.ಐ. ಮಾರುತಿ ರಾವ್, ಸಿಬ್ಬಂದಿ ಸುರೇಶ್ ನಾಯ್ಕ ಇದ್ದರು. ಪಟ್ಟಣದ ಸುಮಾರು 10ಕ್ಕೂ ಹೆಚ್ಚಿನ ಶಾಲಾ ವಾಹನಗಳನ್ನು ಪರಿಶೀಲನೆ ನಡೆಸಲಾಯಿತು. ಎಲ್ಲ ವಾಹನಗಳಲ್ಲಿ ದಾಖಲೆ, ಚಾಲಕರ ಡಿ.ಎಲ್.ಗಳನ್ನು ಚಾಲಕರು ಪರಿಶೀಲನೆ ವೇಳೆ ಹಾಜರುಪಡಿಸಿದರು.

- - -

-16ಎಚ್.ಎಲ್.ಐ2:

ಜಿಲ್ಲಾ ಎಸ್‌ಪಿ ಸೂಚನೆಯಂತೆ ಹೊನ್ನಾಳಿ ಪಟ್ಟಣದ ಪೊಲೀಸ್ ಅಧಿಕಾರಿಗಳು ಮಂಗಳವಾರದಿಂದ ಶಾಲಾ ವಾಹನಗಳ ದಾಖಲೆ ಪತ್ರಗಳನ್ನು ಪರಿಶೀಲನೆ ಕಾರ್ಯಾಚರಣೆ ಆರಂಭಿಸಿದರು.