ಮೇಲುಕೋಟೆ: ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣ ಮೇಲುಕೋಟೆಯಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿತರಲು ಸಂಘಟಿತರಾಗಿ ಶ್ರಮಿಸಬೇಕು ಎಂದು ಮನ್ಮುಲ್ ನಿರ್ದೇಶಕ ಶಿವಕುಮಾರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶಾಲಾ, ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ, ಮಹತ್ವ ಕುರಿತು ಅರಿವು ಮೂಡಿಸಬೇಕಿದೆ ಎಂದು ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ತಿಳಿಸಿದರು.ಇಲ್ಲಿನ ಶತಮಾನದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ, ಇಕೋ ಕ್ಲಬ್, ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ವಿಶ್ವಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪರಿಸರ ಕಾಳಜಿ ಕುರಿತು ಚಿಕ್ಕಮಕ್ಕಳಿಂದ ಎಲ್ಲರಲ್ಲೂ ಜಾಗೃತರಾಗಬೇಕು. ಪರಿಸರ ನಾಶದಿಂದ ಹಲವು ರೀತಿಯ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಯೊಬ್ಬರೂ ಮನೆ ಹಾಗೂ ಶಾಲಾ ಹಂತದಲ್ಲಿ ಜಾಗೃತರಾಗಿ ಪರಿಸರವನ್ನು ಸಂರಕ್ಷಿಸಬೇಕು. ಶಾಲೆ, ಮನೆ ಗ್ರಾಮಗಳ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳಬೇಕು. ಮರಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು.ಉತ್ತಮ ಪರಿಸರದಲ್ಲಿರುವ ಮೇಲುಕೋಟೆ ಶತಮಾನದ ಸರ್ಕಾರಿ ಶಾಲೆ ಅಭಿವೃದ್ಧಿಗಾಗಿ ಮನ್ಮುಲ್ ಹಾಗೂ ವೈಯುಕ್ತಿಕವಾಗಿ ಸಂಪೂರ್ಣ ಸಹಕಾರ ನೀಡುತ್ತೇನೆ. ಶಿಕ್ಷಣ ಪ್ರೇಮಿ ಅರವಿಂದ ರಾಘವನ್ ಮೂಲಕ ಶಾಲೆ ಸಮಗ್ರ ಅಭಿವೃದ್ಧಿ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಪರಿಸರ ತಜ್ಞ ಸಂತೋಷ್ ಕೌಲಗಿ ಮಾತನಾಡಿ, ಅಂದು ಪರಿಸರ ಉತ್ತಮವಾಗಿದ್ದ ಕಾರಣ ಕೊಳಗಳು ಹಾಗೂ ಕೆರೆ ನೀರನ್ನು ನೇರವಾಗಿ ಕುಡಿಯುತ್ತಿದ್ದೆವು. ಇಂದು ಕಲುಷಿತ ಪರಿಸರದಿಂದ ನೀರಿನ ಮೂಲಗಳ ನೀರನ್ನು ಶುದ್ಧೀ ಕರಿಸಿಯೇ ಕುಡಿಯಬೇಕಾದ ಪರಿಸ್ಥಿತಿಗೆ ತಲುಪಿದ್ದೇವೆ. ಇದು ಎಚ್ಚರಿಕೆಯ ಸಂಕೇತ ಎಂದರು.ಈಗಿನಿಂದಲೇ ಪರಿಸರ ಸಂರಕ್ಷಣೆ ಮಾಡದಿದ್ದರೆ ಅಪಾಯವಾಗಲಿದೆ. ಬಾಲ್ಯದಲ್ಲಿ ಕಾಣುತ್ತಿದ್ದ ಗಿಡ,ಮರ, ಪಕ್ಷಿಗಳ ಪರಿಸರ ತುಂಬಾ ಕಡಿಮೆಯಾಗಿದೆ. ಆಧುನಿಕತೆ ಮತ್ತು ಅಭಿವೃದ್ಧಿ ಹೆಸರಲ್ಲಿ ಪರಿಸರ ಸಂರಕ್ಷಣೆ ಮರೆಯುತ್ತಿದ್ದೇವೆ. ಪ್ಲಾಸ್ಟಿಕ್ ತ್ಯಾಜ್ಯದ ಬಳಕೆ ಹೆಚ್ಚಾಗಿ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮತ್ತು ಅತಿಥಿಗಳು ಶಾಲಾ ಆವರಣದಲ್ಲಿ ಹೂವಿನ ಸಸಿಗಳನ್ನು ನೆಟ್ಟು ಪರಿಸರ ಪ್ರೇಮದ ಜಾಗೃತಿ ಮೂಡಿಸಿದರು. ಮಕ್ಕಳಿಗೆ ನಂದಿನಿ ಕುಕ್ಕೀಸ್ ವಿತರಿಸಲಾಯಿತು. ಪರಿಸರ ಕಾಳಜಿ ಚಿತ್ರಬಿಡಿಸಿದ್ದ ಮಕ್ಕಳನ್ನು ಅಭಿನಂದಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಭವಾನಿ ಹರಿಧರ್ ಅಧ್ಯಕ್ಷತೆ ವಹಿಸಿದ್ದರು ಉಪಾಧ್ಯಕ್ಷ ಜಯರಾಮೇಗೌಡ, ಸದಸ್ಯರಾದ ವಾದ್ಯಾರ್ ತಿರುಮಲೈ, ಲಕ್ಷ್ಮಮ್ಮ, ಮಣಿಮುರುಗನ್, ಜಿ.ಕೆ.ಕುಮಾರ್,ಪಿಡಿಒ ರಾಜೇಶ್ವರ್, ಕಾಲಭೈರವೇಶ್ವರ ಕಲಾತಂಡದ ಜಯಲಕ್ಷ್ಮೀ ಪುಟ್ಟರಾಜು, ಪರಿಸರ ತಜ್ಞ ಸಂತೋಷ್‌ಕೌಲಗಿ, ಈಶಮುರಳಿ, ಪುಳಿಯೋಗರೆ ರವಿ, ಬಾಲಕರ ಶಾಲೆ ಮುಖ್ಯಶಿಕ್ಷಕ ಸಂತಾನರಾಮನ್ ಸಹಶಿಕ್ಷಕರಾದ ಜಯಂತಿ, ಪೂರ್ಣಿಮ, ಶೃತಿ, ಚಂದ್ರಿಕಾ ಮಕ್ಕಳಮನೆ ಶಿಕ್ಷಕಿ ಕವಿತಾ ಭಾಗವಹಿಸಿದ್ದರು.
ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸಿ - ಶಿವಕುಮಾರ್ಮೇಲುಕೋಟೆ: ಜಿಲ್ಲೆಯ ಪ್ರಖ್ಯಾತ ಪ್ರವಾಸಿ ತಾಣ ಮೇಲುಕೋಟೆಯಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿತರಲು ಸಂಘಟಿತರಾಗಿ ಶ್ರಮಿಸಬೇಕು ಎಂದು ಮನ್ಮುಲ್ ನಿರ್ದೇಶಕ ಶಿವಕುಮಾರ್ ತಿಳಿಸಿದರು.
ಈ ಬಗ್ಗೆ ಮನವಿ ಆಲಿಸಿ ಮಾತನಾಡಿದ ಅವರು, ಜಿಪಂ, ಜಿಲ್ಲಾಡಳಿತ ದೇವಾಲಯ ವತಿಯಿಂದ ಆಸಕ್ತರ ತಂಡ ರಚಿಸಿ ಭಕ್ತರಲ್ಲೂ ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ಜಾಗೃತಿ ಮೂಡಿಸಬೇಕು. ನಿರಂತರವಾಗಿ ನಿಗಾವಹಿಸಲು ಅಧಿಕಾರಿಗಳ ತಂಡ ನಿಯೋಜಿಸಬೇಕು ಎಂದರು.ಮೇಲುಕೋಟೆಯಲ್ಲಿ ಪರಿಸರ ಉಳಿವಿಗಾಗಿ ಗಿಡಮರಗಳನ್ನು ನೆಡಲು ಅರಣ್ಯ ಇಲಾಖೆ ಮತ್ತು ಸಂಘ ಸಂಸ್ಥೆಗಳು ಮುಂದಾಗಬೇಕು. ಪ್ಲಾಸ್ಟಿಕ್ ನಿಷೇಧ ಜಾರಿಗೆ ಬಂದರೆ ರಾಜ್ಯಾದ್ಯಂತ ಬರುವ ಭಕ್ತರಲ್ಲೂ ಜಾಗೃತಿ ಮೂಡಿಸಿದಂತಾಗುತ್ತದೆ. ಇದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.