ಸಾರಾಂಶ
ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿಭಾಗಕ್ಕೆ ಪ್ರವೇಶ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಶಾಲಾ ಅಭಿವೃದ್ಧಿ ಸಮಿತಿಯವರು ದಾಖಲಾತಿ ಆಂದೋಲನವನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ನೆರವೇರಿಸಿದರು.
ಪ್ರಾರಂಭೋತ್ಸವ ಕಾರ್ಯಕ್ರಮ । ಸರ್ಕಾರಿ ಶಾಲೆಯಲ್ಲಿ ಮಕ್ಕಳ ಪ್ರವೇಶ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ । ಪ್ರಮುಖ ಬೀದಿಗಳಲ್ಲಿ ಮೆರವಣಿಗೆ
ಕನ್ನಡಪ್ರಭ ವಾರ್ತೆ ಬೇಲೂರು
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರೌಢಶಾಲಾ ವಿಭಾಗಕ್ಕೆ ಪ್ರವೇಶ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕ ವೃಂದದವರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ದಾಖಲಾತಿ ಆಂದೋಲನವನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ನೆರವೇರಿಸಿದರು.ನಂತರ ಪ್ರೌಢಶಾಲೆಗೆ ಹೊಸದಾಗಿ ಪ್ರವೇಶ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಹೂಗಳನ್ನು ನೀಡುವ ಮೂಲಕ ಶಿಕ್ಷಕ ವೃಂದದವರು ಹಾಗೂ ಶಾಲಾ ಅಭಿವೃದ್ಧಿ ಸಮಿತಿಯವರು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶುಭ ಕೋರುವ ಮೂಲಕ ಪಠ್ಯ ಪುಸ್ತಕ ಹಾಗೂ ಸಮವಸ್ತ್ರಗಳನ್ನೂ ವಿತರಿಸಲಾಯಿತು. ಈ ವೇಳೆ ಮುಖ್ಯ ಶಿಕ್ಷಕರಾದ ಶಿವಕುಮಾರ್ ಮಾತನಾಡಿ, ‘ನಮ್ಮ ಸರ್ಕಾರಿ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುವುದರೊಂದಿಗೆ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣದ ನಿರ್ಮಿಸುವ ಕೊಠಡಿಗಳು, ಆಟದ ಮೈದಾನ, ತರಬೇತಿ ಪಡೆದು ಅನುಭವ ಹೊಂದಿರುವ ಕನ್ನಡ ಮತ್ತು ಆಂಗ್ಲ ಭಾಷೆಯ ನುರಿತ ಶಿಕ್ಷಕ ವೃಂದದವರು, ಯುವ ವಿಜ್ಞಾನಿಗಳನ್ನು ಪ್ರೋತ್ಸಾಹಿಸುವ ವಿಜ್ಞಾನ ಲ್ಯಾಬ್, ಕಂಪ್ಯೂಟರ್ ಲ್ಯಾಬ್, ಭೌಗೋಳಿಕ ವಾತಾವರಣ ಹಾಗೂ ವಿಶ್ವದಲ್ಲಿರುವ ಯಾವುದೇ ವಿಷಯ ಅಥವಾ ವಸ್ತುಗಳ ಬಗ್ಗೆ ನೈಜವಾಗಿ ಕ್ಷಣಮಾತ್ರದಲ್ಲಿ ತಿಳಿದುಕೊಳ್ಳಲು ಆಧುನಿಕ ತಂತ್ರಜ್ಞಾನದ ಸ್ಮಾರ್ಟ್ ಟಿವಿಗಳ ಭೋದನೆ ಸೇರಿದಂತೆ ಎಲ್ಲಾ ಮೂಲ ಸೌಲಭ್ಯವೂ ಇದ್ದು ಎಲ್ಲಾ ವಿದ್ಯಾರ್ಥಿಗಳು, ಪೋಷಕರು ಇದರ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.‘ನಮ್ಮ ಶಾಲೆಯ 4 ವಿದ್ಯಾರ್ಥಿಗಳು ಕಳೆದ ಹಾಗೂ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಾಲೂಕು ಮಟ್ಟದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಉಚಿತವಾಗಿ ಲ್ಯಾಪ್‌ಟಾಪ್ ಪಡೆದುಕೊಂಡು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ’ ಎಂದು ಹೇಳಿದರು.
ಇದೆ ವೇಳೆ ಖಾಸಗಿ ಶಿಕ್ಷಣಕ್ಕೆ ಒತ್ತು ನೀಡುವ ಪೋಷಕರ ಕುರಿತು ವಿವರಣೆ ನೀಡಿದ ಅವರು, ‘ನೀವು ನಿಮ್ಮ ಜೇಬಿನಲ್ಲಿರುವ ಹಣವನ್ನು ನೀಡುವ ಮೂಲಕ ಖಾಸಗಿ ಶಿಕ್ಷಣ ಪಡೆಯುತ್ತೀರಿ. ಆದರೆ ಸರ್ಕಾರವು ನಿಮ್ಮಿಂದ ಹಾಗೂ ಸಾರ್ವಜನಿಕರಿಂದ ಪಡೆದ ತೆರಿಗೆ ರೂಪದ ಹಣದಲ್ಲಿ ನಿಮ್ಮ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ವಿವಿಧ ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಔಷಧಿಗಳು ಹಾಗೂ ಇನ್ನಿತರ ಅವಶ್ಯಕ ಮೂಲಸೌಕರ್ಯಗಳನ್ನು ಒದಗಿಸಲು ನಮ್ಮ ಶಾಲೆಗೆ ಪ್ರತಿ ವರ್ಷಕ್ಕೆ ಸರಾಸರಿ ಅಂದಾಜು ಒಂದು ಕೋಟಿ ಮೂವತ್ತು ಲಕ್ಷ ರು.ನೀಡುತ್ತದೆ .ಇವುಗಳನ್ನು ನೀವು ಸದುಪಯೋಗಿಸಿಕೊಂಡರೆ ಉಚಿತ ಶಿಕ್ಷಣದ ಜೊತೆಗೆ ಉತ್ತಮ ಫಲಿತಾಂಶ ದೊರೆಯುತ್ತದೆ. ನಿಮ್ಮ ಹಣ ನಿಮ್ಮಲ್ಲಿಯೇ ಉಳಿಯುತ್ತದೆ’ ಎಂದು ಹೇಳಿದರು.ಈ ವೇಳೆ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಯುವರಾಜ್, ಸಹಾ ಶಿಕ್ಷಕರಾದ ಜ್ಯೋತಿ, ನಖಾತ್ ಸುಲ್ತಾನ, ಮಂಜುನಾಥ್, ಪ್ರವೀಣ್, ಬೀಬಿ, ನಾಜಿಯ ಹುಸೇನ್ ಸೇರಿ ಇತರರು ಇದ್ದರು.