ಕುದ್ಮಾರು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಎಸ್‌ಡಿಎಂಸಿ ವತಿಯಿಂದ ನಡೆದ ಶೈಕ್ಷಣಿಕ-ಸಂಕಲನ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪುತ್ತೂರು: ಕೇವಲ ಅಂಕ ಗಳಿಕೆಯೊಂದೇ ಕಲಿಕೆಯಲ್ಲ. ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಬದುಕು ಕಟ್ಟಿಕೊಡುವ ಶಿಕ್ಷಣದೊಂದಿಗೆ ಸತ್‌ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಣದ ಅವಶ್ಯವಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸ್ಫೂರ್ತಿದಾಯಕ ಕಥೆಗಳನ್ನು ತಿಳಿಸಿಕೊಡುವ ಕಾರ್ಯವಾಗಬೇಕು ಎಂದು ರಾಷ್ಟ್ರೀಯ ವಿಕಸನ ತರಬೇತಿದಾರ ರಾಜೇಂದ್ರ ಭಟ್ ಕೆ. ಅಭಿಪ್ರಾಯಪಟ್ಟರು. ಶನಿವಾರ ಕುದ್ಮಾರು ಶಾಲೆಯ ಹಿರಿಯ ವಿದ್ಯಾರ್ಥಿ ಸಂಘ ಹಾಗೂ ಎಸ್‌ಡಿಎಂಸಿ ವತಿಯಿಂದ ನಡೆದ ಶೈಕ್ಷಣಿಕ-ಸಂಕಲನ ಸರಣಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ವ್ಯಕ್ತಿತ್ವ ವಿಕಸನದ ಕುರಿತು ಕಾರ್ಯಾಗಾರ ನಡೆಸಿಕೊಟ್ಟ ರಾಷ್ಟ್ರೀಯ ವಿಕಸನ ತರಬೇತಿದಾರರಾದ ನಿವೃತ್ತ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾರಣ ಶಾಲೆಯಲ್ಲಿರುವುದು ಸಂತಸದ ವಿಚಾರ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುದ್ಮಾರು ಶಾಲಾ ನಿವೃತ್ತ ಮುಖ್ಯಗುರು ಕೆ. ಸುಶೀಲಾ ಮೋಹನ್, ಶಾಲಾ ಪ್ರಗತಿಯ ಹೆಜ್ಜೆ ಹೆಸರಲ್ಲಿ ಸರಣಿ ಕಾರ್ಯಾಗಾರ ನಡೆಸುತ್ತಿರುವುದು ಅತ್ಯುತ್ತಮ ವಿಚಾರ. ಇದೊಂದು ಮಾದರಿ ಯೋಜನೆಯಾಗಿದ್ದು, ಸರಕಾರಿ ಶಾಲೆಗಳ ಅಭಿವೃದ್ಧಿಗೆ ಮೇಲ್ಪಂಕ್ತಿ ಹಾಕಲಿದೆ ಎಂದರು.

ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಶಿವರಾಮ ಏನೆಕಲ್ಲು, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ ಮಾತನಾಡಿದರು. ಶಾಲಾ ಮುಖ್ಯ ಶಿಕ್ಷಕಿ ಮಿನಿ ವರ್ಗೀಸ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ ಸ್ವಾಗತಿಸಿದರು. ಪ್ರೌಢಶಾಲೆ ಸಹ ಶಿಕ್ಷಕಿ ಶ್ರೀಲತಾ ನಿರೂಪಿಸಿ, ಶಿಕ್ಷಕಿ ವೀಣಾ ಕೆ. ಅತಿಥಿಗಳ ಪರಿಚಯ ಮಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗೇಶ್ ಕೆಡೆಂಜಿ ವಂದಿಸಿದರು.