ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದೇಶದ ಎಲ್ಲ ಕೇಂದ್ರೀಯ ವಿಶ್ವವಿದ್ಯಾಲಯಗಳ ಮಾದರಿಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಆಯಾ ವಿಭಾಗದ ಎಲ್ಲ ಕೋರ್ಸ್‌ಗಳು ಒಂದೇ ಸೂರಿನಡಿ ಸಿಗುವಂತಾಗಲು 2025-26ನೇ ಶೈಕ್ಷಣಿಕ ಸಾಲಿನಲ್ಲಿ ‘ಸ್ಕೂಲ್ ಸಿಸ್ಟಮ್’ ಎಂಬ ಹೊಸ ಪರಿಕಲ್ಪನೆಯಡಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದ್ದಾರೆ.ಮಂಗಳೂರು ವಿವಿ ಆಡಳಿತ ಸೌಧದ ರಾಣಿ ಅಬ್ಬಕ್ಕ ಸಭಾಂಗಣದಲ್ಲಿ ಮಂಗಳವಾರ ಶೈಕ್ಷಣಿಕ ಮಂಡಳಿಯ ದ್ವಿತೀಯ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಆರಂಭಿಕ ಹಂತದಲ್ಲಿ ಬಯೋ ಸಾಯನ್ಸ್‌ನ್ನು ‘ಸ್ಕೂಲ್ ಆಫ್ ಬಯೋಲಾಜಿಕಲ್ ಸಾಯನ್ಸ್’ ಆಗಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗುವುದು. ಇದರ ಅಡಿಯಲ್ಲಿ ಬಯೋ ಸಾಯನ್ಸ್‌ಗೆ ಸಂಬಂಧಿಸಿದ ಎಲ್ಲ ಆನ್ವಯಿಕ ವಿಭಾಗಗಳು ಒಂದಾಗಿ ಕಾರ್ಯನಿರ್ವಹಿಸಲಿವೆ. ಇದರಿಂದಾಗಿ ವಿಭಾಗದ ಎಲ್ಲ ಉಪನ್ಯಾಸಕರಿಗೆ ಬೋಧನೆಗೆ ಅವಕಾಶ ಲಭಿಸುತ್ತದೆ ಅಲ್ಲದೆ, ಹಿರಿಯ ಪ್ರಾಧ್ಯಾಪಕರ ಅನುಭವ ಪಡೆಯಲೂ ಸಾಧ್ಯವಾಗುತ್ತದೆ. ಆದರೆ ಮೂಲ ಪಠ್ಯ, ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಅರ್ಥಶಾಸ್ತ್ರ ಮರು ಸೇರ್ಪಡೆ ಪ್ರಸ್ತಾಪ:ಪ್ರಸಕ್ತ ಪದವಿ ತರಗತಿಗಳಲ್ಲಿ ಕಲಾ ವಿಭಾಗದಲ್ಲಿ ಮಾತ್ರ ಅರ್ಥಶಾಸ್ತ್ರ ಕಲಿಕೆಗೆ ಅವಕಾಶ ಇದೆ. ಆದರೆ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ಕಲಿಕೆಗೆ ಈ ಹಿಂದೆ ಅವಕಾಶ ಇತ್ತು. ಈಗ ಪಠ್ಯ ಕ್ರಮವನ್ನು ಬದಲಾಯಿಸಿರುವುದರಿಂದ ಅರ್ಥಶಾಸ್ತ್ರ ಉಪನ್ಯಾಸಕರಿಗೆ ಕೆಲಸವಿಲ್ಲದಂತಾಗಿದೆ. ಈ ಬಗ್ಗೆ ಅರ್ಥಶಾಸ್ತ್ರ ಉಪನ್ಯಾಸಕರ ಸಂಘಟನೆ ಜನಪ್ರತಿನಿಧಿಗಳು ಹಾಗೂ ವಿವಿಗೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಮಾವೀಯತೆ ನೆಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಅರ್ಥಶಾಸ್ತ್ರ ಸೇರ್ಪಡೆಗೆ ಪರಸ್ಪರರು ಚರ್ಚೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬಂದರೆ ಉತ್ತಮ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.
ಅರ್ಥಶಾಸ್ತ್ರ ಉಪನ್ಯಾಸಕರಿಗೆ ವಾಣಿಜ್ಯ ಪದವಿಯಲ್ಲಿ ಬೋಧನೆಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪ್ರಥಮ ಸೆಮಿಸ್ಟರ್ ಪಠ್ಯಕ್ಕೆ ಮಾತ್ರ ಅನುಮೋದನೆ ನೀಡಲಾಯಿತು.ಇದೇ ಸಂದರ್ಭ ಕಳೆದ ಎರಡು ಸೆಮಿಸ್ಟರ್‌ಗಳ ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಹಾಗೂ ಈ ಸಾಲಿಗೆ ರಾಜ್ಯ ಶಿಕ್ಷಣ ನೀತಿ(ಎಸ್‌ಇಪಿ) ಪರಿಷ್ಕೃತ ಪಠ್ಯಗಳಿಗೆ ಅನುಮೋದನೆ ಪಡೆಯಲಾಯಿತು.
ಬಿಎಡ್ ಮರು ಮೌಲ್ಯಮಾಪನಕ್ಕೆ ಅಸ್ತು:ಇನ್ನು ಮುಂದೆ ಬಿಎಡ್ ಪದವಿ ಕಾರ್ಯಕ್ರಮದಡಿ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನಕ್ಕೆ ಸಂಬಂಧಿಸಿ ಕರಡು ಮಾರ್ಗಸೂಚಿಗೆ ಅನುಮೋದನೆ ಪಡೆಯಲಾಯಿತು.
ಈ ಕುರಿತಂತೆ ಬಿಎಡ್ ಕಾಲೇಜು ಪ್ರಾಂಶುಪಾಲರ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಅಜೆಂಡಾದಲ್ಲಿ ಪ್ರಸ್ತಾಪಿಸಲಾಯಿತು. ಬಿಎಡ್ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ, ವೈಯಕ್ತಿಕ ವೀಕ್ಷಣೆ, ಪರಿಷ್ಕರಣಾ ಸಮಿತಿ ಭೇಟಿ ಇತ್ಯಾದಿಗಳನ್ನು ಅನುಮೋದಿಸಲಾಯಿತು.ಪರೀಕ್ಷಾಂಗ ಕುಲಸಚಿವ ಡಾ.ದೇವೇಂದ್ರಪ್ಪ, ಆಡಳಿತ ವಿಭಾಗ ಕುಲಸಚಿವ ರಾಜು ಮೊಗವೀರ ಇದ್ದರು.
19.04 ಕೋಟಿ ರು.ಗಳ ಕೊರತೆ ಬಜೆಟ್ಹಣಕಾಸು ವಿಭಾಗದ ಅಧಿಕಾರಿ ಪ್ರೊ.ಸಂಗಪ್ಪ ಅವರು 2024-25ನೇ ಸಾಲಿನ ಆಯವ್ಯಯ ಮಂಡಿಸಿದ್ದು, ಕಳೆದ ಸಾಲಿನ ಪರಿಷ್ಕೃತ ಬಜೆಟ್‌ಗೆ ಅನುಮೋದನೆ ಪಡೆಯಲಾಯಿತು.
ಈ ಸಾಲಿನಲ್ಲಿ 177.03 ಕೋಟಿ ರು. ಆದಾಯ ನಿರೀಕ್ಷಿಸಿದ್ದು, 197.82 ಕೋಟಿ ರು. ಖರ್ಚು ಅಂದಾಜಿಸಲಾಗಿದೆ. ಕಳೆದ ಸಾಲಿನಲ್ಲಿ 1.75 ಕೋಟಿ ರು. ಕೊರತೆಯಾಗಿದ್ದು, ಈ ಸಾಲಿನಲ್ಲಿ 19.04 ಕೋಟಿ ರು. ಕೊರತೆ ಹೆಚ್ಚಳವಾಗಿದೆ ಎಂದರು.ಡಿಜಿ ಲಾಕರ್ ಅಂಕಪಟ್ಟಿ ಬದಲಿಲ್ಲ
ಎನ್‌ಇಪಿ ಅಡಿಯಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಡಿಜಿ ಲಾಕರ್ ಮೂಲಕ ಗ್ರೇಡ್ ಆಧಾರಿತ ಅಂಕಪಟ್ಟಿ ನೀಡಲಾಗುತ್ತಿದೆ. ಇದು ಕೇಂದ್ರ ಸರ್ಕಾರದ ನಿರ್ದೇಶನವಾಗಿದ್ದು, ಇದನ್ನು ಮೀರಿ ಕೈಬರಹದ ಅಂಕ ಪಟ್ಟಿ ನೀಡಲು ಅವಕಾಶ ಇಲ್ಲ. ಈಗಾಗಲೇ ಒಬ್ಬರಿಗೆ ಅಂಕಪಟ್ಟಿ ನೀಡಿದ ವಿಚಾರದ ಬಗ್ಗೆ ಆಂತರಿಕ ಸಮಿತಿಯಿಂದ ತನಿಖೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು. ಆ.12ರಂದು ಪದವಿ ತರಗತಿ ಆರಂಭಮಂಗಳೂರು ವಿವಿ ವ್ಯಾಪ್ತಿಯಲ್ಲಿ ಈ ಶೈಕ್ಷಣಿಕ ಸಾಲಿನಲ್ಲಿ ಎಲ್ಲ ಪದವಿ ತರಗತಿಗಳು ಆ.12ರಿಂದ ಆರಂಭವಾಗಲಿದೆ. ಪ್ರಸಕ್ತ ಕೊನೆ ಸೆಮಿಸ್ಟರ್ ಪರೀಕ್ಷೆಗಳ ಮೌಲ್ಯಮಾಪನ ಶೇ.70ರಷ್ಟು ಪೂರ್ಣಗೊಂಡಿದೆ. ಕಳೆದ ಸಾಲಿನಲ್ಲಿ ಬಾಕಿಯಾದ ಮೌಲ್ಯಮಾಪಕರ ಗೌರವಧನ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಈ ಬಾರಿ ಸ್ನಾತಕೋತ್ತರ ಪದವಿ ತರಗತಿಗಳು ಸೆಪ್ಟೆಂಬರ್ 9ರಿಂದ ಆರಂಭವಾಗಲಿದೆ ಎಂದು ಕುಲಪತಿ ಪ್ರೊ.ಪಿ.ಎಲ್.ಧರ್ಮ ಹೇಳಿದರು.