ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಮಾಲೂರು ತಾಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳನ್ನು ಶೌಚ ಗುಂಡಿಗೆ ಇಳಿಸಿ ಸ್ವಚ್ಛತೆಗೆ ಬಳಸಿದ ಬೆನ್ನಲ್ಲೇ ಅಲ್ಲಿ ಓದುತ್ತಿರುವ ಬಾಲಕಿಯರ ಖಾಸಗಿ ವಿಡಿಯೋ ಮಾಡಿರುವ ಆರೋಪವೂ ಇದೀಗ ಕೇಳಿಬಂದಿದೆ. 16 ವರ್ಷದ ವಿದ್ಯಾರ್ಥಿನಿಯೊಬ್ಬಳು ಮಾಧ್ಯಮದ ಎದುರೇ ಈ ಆರೋಪ ಮಾಡಿದ್ದು, ಈ ಸಂಬಂಧ ತನಿಖೆಗೂ ಆದೇಶಿಸಲಾಗಿದೆ.ವಸತಿ ಶಾಲೆಯಲ್ಲಿ ಹೆಣ್ಣುಮಕ್ಕಳ ಖಾಸಗಿ ಫೋಟೋ ತೆಗೆಯಲಾಗಿದೆ ಎಂಬ ವಿಚಾರ ಪ್ರಾಥಮಿಕ ತನಿಖೆ ವೇಳೆ ನನ್ನ ಗಮನಕ್ಕೆ ಬಂದಿಲ್ಲ. ಪೋಷಕರನ್ನು ಕೇಳಿದರೂ ಯಾರೂ ಫೋಟೋ ಕುರಿತು ಸ್ಪಷ್ಟನೆ ನೀಡಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ಶ್ರೀನಿವಾಸ್ ಹೇಳಿದರೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಕಾರ್ಯನಿರ್ವಾಹಕ ನಿರ್ದೇಶಕ ನವೀನ್ ಕುಮಾರ್ ರಾಜು ಮಾತ್ರ ಈ ವಿಚಾರ ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.ಯಾರು ಅಂಥ ವಿಡಿಯೋ, ಫೋಟೋ ತೆಗೆದಿದ್ದಾರೆ ಎಂದು ತನಿಖೆ ಮಾಡಲಾಗುವುದು. ಇದರ ಹಿಂದಿರುವ ಜಾಲ ಪತ್ತೆಗೆ ಪೊಲೀಸರು ನಡೆಸಲಿದ್ದಾರೆ. ಮಕ್ಕಳು ಮತ್ತು ಪೋಷಕರು ಆತಂಕಪಡುವ ಅಗತ್ಯವಿಲ್ಲ ಎಂದು ಧೈರ್ಯ ಹೇಳಿದ್ದಾರೆ.ವಿಡಿಯೋ ಮಾಡಿದ್ದಾರೆ- ಕಣ್ಣೀರಿಟ್ಟ ಬಾಲಕಿ:ವಸತಿಗೃಹದಲ್ಲಿ ಬಟ್ಟೆ ಬದಲಾಯಿಸುವ ದೃಶ್ಯ ಹಾಗೂ ಸ್ನೇಹಿತರ ಜತೆಗೆ ಓಡಾಡುವ ದೃಶ್ಯವನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ ಎಂದು ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಲಕಿಯರ ವಸತಿ ಗೃಹದಲ್ಲಿರುವ ಹದಿನಾರು ವರ್ಷದ ವಿದ್ಯಾರ್ಥಿನಿಯೊಬ್ಬಳು ದೂರಿದ್ದಾಳೆ.ಮಾಧ್ಯಮದ ಮುಂದೆ ಈ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿರುವ ವಿದ್ಯಾರ್ಥಿನಿ, ವಿಡಿಯೋ ಚಿತ್ರೀಕರಣ ಯಾರು ಮಾಡಿದ್ದಾರೆಂಬುದು ಗೊತ್ತಿಲ್ಲ. ಇಂಥದ್ದೊಂದು ವಿಡಿಯೋ ಇದೆಯೆಂದು ಹೇಳಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ತೋರಿಸಿದರು ಎಂದು ನೋವು ತೋಡಿಕೊಂಡಿದ್ದಾಳೆ.ಘಟನೆ ಕುರಿತು ಮಕ್ಕಳ ಪೋಷಕರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಲ್ಲಿ ಹೆಣ್ಣು ಮಕ್ಕಳು ಬಟ್ಟೆ ಬದಲಾಯಿಸುವ ಹಾಗೂ ಸ್ನಾನ ಮಾಡುವಾಗಿನ ಫೋಟೋ ತೆಗೆದುಕೊಂಡಿದ್ದಾರೆ. ಈ ವಿಚಾರವನ್ನು ಮಕ್ಕಳು ನಮ್ಮ ಬಳಿ ಹೇಳಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ. ವಸತಿ ಶಾಲೆಯ ಕೆಲ ಶಿಕ್ಷಕರೇ ಈ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಜತೆಗೆ, ಈ ವಿಚಾರವನ್ನು ಸಿಡಿಪಿಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.