ಮನೆ ಬಳಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಶಾಲಾ ಬಾಲಕ ನಾಪತ್ತೆಯಾಗಿ ಆತಂಕ ಸೃಷ್ಟಿಸಿದ್ದು, ಗಂಗೊಳ್ಳಿಯ ಪೊಲೀಸರು ಹಾಗೂ ಸಾರ್ವಜನಿಕರ ಸತತ ಕಾರ್ಯಾಚರಣೆಯ ಬಳಿಕ ಪತ್ತೆಯಾಗಿದ್ದಾನೆ.

ಕುಂದಾಪುರ: ಮನೆಯ ಬಳಿ ಮಕ್ಕಳೊಂದಿಗೆ ಆಟವಾಡುತ್ತಿದ್ದ ಶಾಲಾ ಬಾಲಕನೋರ್ವ ಇದ್ದಕ್ಕಿದ್ದಂತೆ ಸಂಜೆ ಬಳಿಕ ನಾಪತ್ತೆಯಾಗಿ ಕೆಲ ಕಾಲ ಮನೆಯವರಿಗೆ ಆತಂಕ ಸೃಷ್ಟಿಸಿದ್ದು, ಗಂಗೊಳ್ಳಿಯ ಪೊಲೀಸರು ಹಾಗೂ ಸಾರ್ವಜನಿಕರ ಸತತ ಕಾರ್ಯಾಚರಣೆಯ ಬಳಿಕ ಬಾಲಕ ಪತ್ತೆಯಾದ ಘಟನೆ ಗಂಗೊಳ್ಳಿಯ ಗುಜ್ಜಾಡಿ ಬೆಣ್ಣೆರೆ ಎಂಬಲ್ಲಿ ಬುಧವಾರ ನಡೆದಿದೆ.

ಮನೆ ಸಮೀಪದ ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಬಾಲಕ ಶಾಲೆ ಬಿಟ್ಟು ಮನೆಗೆ ಬಂದ ಬಳಿಕ ಸಮೀಪದ ಮನೆಯ ಮಕ್ಕಳೊಂದಿಗೆ ಆಟವಾಡಿಕೊಂಡಿದ್ದನು. ಸಂಜೆಯಾದರೂ ಮನೆಗೆ ವಾಪಾಸಾಗದನ್ನು ಗಮನಿಸಿದ ಮನೆಯಯವರು ಹುಡುಕಾಟ ಆರಂಭಿಸಿದ್ದರು. ರಾತ್ರಿಯಾದರೂ ಪತ್ತೆಯಾಗದ ಕಾರಣ ಗಾಬರಿಗೊಂಡ ಮನೆಯವರು ಗಂಗೊಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ದೂರು ದಾಖಲಿಸಿಕೊಂಡ ಪೊಲೀಸರು ಬಾಲಕನ ಪತ್ತೆಗಾಗಿ ಸ್ಥಳೀಯರೊಂದಿಗೆ ಕಾರ್ಯಾಚರಣೆ ಆರಂಭಿಸಿದ್ದರು. ತಡರಾತ್ರಿ 12:40ರ ಸುಮಾರಿಗೆ ಮನೆ ಪಕ್ಕದ ಎತ್ತರದ ಕಲ್ಲು ಬಂಡೆಯ ಕೆಳಭಾಗದಲ್ಲಿ ಕುಳಿತುಕೊಂಡಿದ್ದ ಬಾಲಕನನ್ನು ಗಂಗೊಳ್ಳಿ ಠಾಣೆಯ ಪಿಎಸ್ಐ ಪವನ್ ನಾಯ್ಕ್ ಪತ್ತೆ ಹಚ್ಚಿ ಬಾಲಕನನ್ನು ಮನೆಯವರಿಗೆ ಒಪ್ಪಿಸಿದ್ದಾರೆ.

ಆಟವಾಡುತ್ತಿದ್ದ ವೇಳೆ ಬಿದ್ದು ಗಾಯ ಮಾಡಿಕೊಂಡಿದ್ದ ಬಾಲಕ ಮನೆಗೆ ಹೋದರೆ ಮನೆಯವರು ಬಯ್ಯುತ್ತಾರೆ ಎಂದು ಹೆದರಿ ಮನೆಗೆ ತೆರಳದೆ ಮನೆಯ ಮೇಲಿನ ಬಂಡೆಕಲ್ಲಿನ ಕೆಳಗೆ ಅಡಗಿ ಕುಳಿಕೊಂಡಿದ್ದನು ಎನ್ನುವ ಮಾಹಿತಿ ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಗಂಗೊಳ್ಳಿ ಪೊಲೀಸರ ತಡರಾತ್ರಿ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.