ಮಕ್ಕಳನ್ನು ಸ್ವಾಗತಿಸಲು ಸಿಂಗಾರಗೊಳ್ಳುತ್ತಿರುವ ಶಾಲೆಗಳು

| Published : May 29 2024, 12:47 AM IST

ಮಕ್ಕಳನ್ನು ಸ್ವಾಗತಿಸಲು ಸಿಂಗಾರಗೊಳ್ಳುತ್ತಿರುವ ಶಾಲೆಗಳು
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳ ಬೇಸಿಗೆ ರಜೆ ಮುಗಿದು ಮೇ 31 ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದು, ಹಬ್ಬದ ರೀತಿಯಲ್ಲಿ ಶಾಲೆಯನ್ನು ಅಲಂಕರಿಸಿ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲು ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳನ್ನು ಸಿಂಗಾರಗೊಳಿಸಲಾಗುತ್ತಿದೆ

ಕನ್ನಡಪ್ರಭ ವಾರ್ತೆ ತುಮಕೂರು

ಮಕ್ಕಳ ಬೇಸಿಗೆ ರಜೆ ಮುಗಿದು ಮೇ 31 ರಂದು ಶಾಲೆಗಳು ಪ್ರಾರಂಭವಾಗುತ್ತಿದ್ದು, ಹಬ್ಬದ ರೀತಿಯಲ್ಲಿ ಶಾಲೆಯನ್ನು ಅಲಂಕರಿಸಿ ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಲು ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳನ್ನು ಸಿಂಗಾರಗೊಳಿಸಲಾಗುತ್ತಿದೆ ಎಂದು ತುಮಕೂರು ಶೈಕ್ಷಣಿಕ ಜಿಲ್ಲೆಯ ಉಪನಿದೇಶಕ ಸಿ. ರಂಗಧಾಮಯ್ಯ ಹಾಗೂ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪರ್ದೇಶಕ ಎಂ.ಆರ್. ಮಂಜುನಾಥ್ ಜಂಟಿಯಾಗಿ ತಿಳಿಸಿದ್ದಾರೆ.ಮಕ್ಕಳಿಗೆ ಶಾಲಾ ಪ್ರಾರಂಭದ ಮೊದಲ ದಿನ ಮದ್ಯಾಹ್ನದ ಬಿಸಿಯೂಟದಲ್ಲಿ ವಿಶೇಷವಾಗಿ ಸಿಹಿಯೂಟ ನೀಡಲು ಹಾಗೂ ಪಠ್ಯ ಪುಸ್ತಕ, ಸಮವಸ್ತ್ರ ವಿತರಿಸಲು ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಾಲಾ ಕೊಠಡಿಗಳು, ಆಟದ ಮೈದಾನ ಮತ್ತು ಕುಡಿಯುವ ನೀರು, ಶೌಚಾಲಯ ಹಾಗೂ ಬಿಸಿಯೂಟ ತಯಾರಿಸುವ ಪಾತ್ರೆ ಪರಿಕರಗಳ ಸ್ವಚ್ಛತೆಗೆ ಆದ್ಯತೆ ನೀಡುವುದರ ಮೂಲಕ ಮೇ ೩೧ರಂದು ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಗುವುದು ಎಂದರು.ಜಿಲ್ಲೆಯಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಬುಧವಾರದಿಂದ ಪ್ರಾರಂಭವಾಗುತ್ತಿದ್ದು, ಮೇ 30 ರಂದು ಶಾಲೆಯ ಸ್ವಚ್ಛತೆ, ಪರಿಸರ ಸ್ವಚ್ಛತೆ ಮತ್ತಿತರ ಪೂರ್ವ ಸಿದ್ಧತಾ ಕಾರ್ಯಗಳನ್ನು ಕೈಗೊಳ್ಳಲು ಎಲ್ಲ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಸೂಚಿಸಲಾಗಿದ್ದು, ಮೇ 31 ರಂದು ಪೋಷಕರು, ಎಸ್.ಡಿ.ಎಂ.ಸಿ. ಪದಾಧಿಕಾರಿಗಳು ಹಾಗೂ ಸ್ಥಳೀಯರ ಸಹಯೋಗದೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಆಚರಿಸಲಾಗುವುದು ಎಂದು ಹೇಳಿದರು.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಅವರು ಶಾಲಾ ಪ್ರಾರಂಭೋತ್ಸವಕ್ಕೆ ಸಂಬಂಧಿಸಿದಂತೆ ನೀಡಿರುವ ಮಾರ್ಗದರ್ಶನದಂತೆ ಶಾಲೆಗೆ ಸೇರಲು ಅರ್ಹರಿರುವ ಎಲ್ಲಾ ಮಕ್ಕಳನ್ನು ಸಮೀಪದ ಶಾಲೆಗೆ ಕಡ್ಡಾಯವಾಗಿ ದಾಖಲು ಮಾಡಲು ಶಿಕ್ಷಣ ಇಲಾಖೆಯಿಂದ ಪೋಷಕರಲ್ಲಿ ವಿನಂತಿ ಮಾಡಲಾಗಿದೆ. ಬರುವ ಮೇ 31 ರಿಂದ ಒಂದು ವಾರದವರೆಗೆ ದಾಖಲಾತಿ ಅಂದೋಲನವನ್ನು ನಡೆಸಿ ಎಲ್ಲಾ ಮಕ್ಕಳು ಶಾಲೆಗೆ ಹಾಜರಾಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಆಂದೋಲನದಲ್ಲಿ ಯಾವುದೇ ಅರ್ಹ ಮಗು ಶಾಲೆಯಿಂದ ಹೊರಗುಳಿಯಬಾರದೆಂಬ ಆಶಯದಿಂದ ಭಿತ್ತಿ ಪತ್ರ ಹಾಗೂ ಬ್ಯಾನರ್‌ಗಳ ಮೂಲಕ ಜಾಥಾ, ಮನೆ-ಮನೆ ಭೇಟಿ ನೀಡಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರಲಾಗುವುದು. ಪ್ರಸ್ತುತ ಮಳೆಗಾಲವಾಗಿರುವುದರಿಂದ ಯಾವುದಾದರೂ ಶಾಲಾ ಕೊಠಡಿಗಳು ದುಸ್ಥಿತಿಯಲ್ಲಿದ್ದಲ್ಲಿ ಅವುಗಳನ್ನು ಬಳಸದಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ಶಾಲೆಯ ಪ್ರಾರಂಭದ ದಿನಗಳಲ್ಲಿ ಸೇತುಬಂಧ ಕಾರ್ಯಕ್ರಮದ ಮೂಲಕ ಹಿಂದಿನ ತರಗತಿಯಲ್ಲಿ ಕಲಿತಿರುವ ಅಂಶಗಳು ಮತ್ತು ಪ್ರಸ್ತುತ ತರಗತಿಯಲ್ಲಿ ಕಲಿಯುವ ಅಂಶಗಳ ಸಹ ಸಂಬಂಧದೊಂದಿಗೆ ಪ್ರಸಕ್ತ ಸಾಲಿನ ಬೋಧನಾ ಕಲಿಕಾ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ಜೂನ್ 14 ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ನಡೆಯಲಿದ್ದು, ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಮತ್ತು ಇನ್ನೂ ಹೆಚ್ಚಿನ ಅಂಕ ಗಳಿಸ ಬಯಸುವ ವಿದ್ಯಾರ್ಥಿಗಳಿಗಾಗಿ ಬುಧವಾರದಿಂದ ಜೂನ್ 13ರವರೆಗೆ ಆಯಾ ಶಾಲೆಗಳಲ್ಲಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ನಡೆಸಲಾಗುವುದು. ಬೇರೆ ಶಾಲೆಗಳಲ್ಲಿ ಓದಿದ್ದರೂ ಪ್ರಸ್ತುತ ವಾಸವಿರುವ ಸ್ಥಳಕ್ಕೆ ಸಮೀಪವಿರುವ ಪ್ರೌಢ ಶಾಲೆಯಲ್ಲಿ ಹಾಜರಾಗಿ ಪರಿಹಾರ ಬೋಧನೆಯ ಸೌಲಭ್ಯ ಪಡೆಯಬಹುದಾಗಿದೆ. ಪೋಷಕರು ಮತ್ತು ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.