ಸಾರಾಂಶ
-ಎನ್ಎಸ್ಎಸ್ ಶಿಬಿರದಲ್ಲಿ ಬಸವರಾಜಗೆ ಸನ್ಮಾನ
-----ಕನ್ನಡಪ್ರಭ ವಾರ್ತೆ ಬೀದರ್
ಪ್ರಾಚೀನ ವೇದಗಳು ನಮ್ಮ ದೇಶಕ್ಕೆ ಮಾರ್ಗದರ್ಶಕವಾಗಿವೆ. ಆದರೆ, ವೇದಗಳಿಗಿಂತ ವಚನಗಳಲ್ಲಿ ಅದ್ಭುತ ವಿಚಾರಗಳಿವೆ ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಹೇಳಿದರು.ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಬಿ.ವಿ. ಭೂಮರಡ್ಡಿ ಮಹಾವಿದ್ಯಾಲಯ ವತಿಯಿಂದ ನಡೆದ ಎನ್ಎಸ್ಎಸ್ ಶಿಬಿರದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಇಂದಿನ ಜಾಗತಿಕ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಹಾರವಿದೆ. 12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಹೇಳಿದ ವಚನಗಳು ಜಾಗತಿಕ ಶಾಂತಿಗೆ ಪ್ರಸ್ತುತವಾಗಿವೆ ಎಂದರು.
ವಚನಗಳಲ್ಲಿ ಖಗೋಳಶಾಸ್ತ್ರ, ಅಂತರಿಕ್ಷದ ಗ್ಯಾಲಕ್ಸಿಗಳ ಬಗ್ಗೆ ಮಾಹಿತಿ ಇದೆ. ಅಂದಿನ ದಿನಮಾನಗಳಲ್ಲಿ ವಚನಗಳಲ್ಲಿ ಶಾಂತಿಯ ಸಂಕೇತವಿದೆ ಎಂದ ಅವರು ಇಂದಿನ ಶಿಬಿರಾರ್ಥಿಗಳು ಶರಣರ ವಚನಗಳನ್ನು ಪಾಲಿಸಿದರೆ ಜೀವನ ಪರಿಶುದ್ಧವಾಗುತ್ತದೆ ಎಂದು ಹೇಳಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರೆಡ್ಡಿ ಅಧ್ಯಕ್ಷತೆವಹಿಸಿ ಮಾತನಾಡಿ, ಜಗತ್ತಿನ ಜ್ವಲಂತ ಸಮಸ್ಯೆಗಳಿಗೆ ವಚನಗಳಲ್ಲಿ ಪರಿಶುದ್ಧವಾದ ಅಂಶಗಳು ಅಡಕವಾಗಿವೆ. ವಿಶ್ವ ಸಂಸ್ಥೆಯು ಸಹ ನಮ್ಮ ಶಿವಶರಣ ತತ್ವಗಳನ್ನು ಅಳವಡಿಸಿಕೊಂಡು ಜಾಗತಿಕ ಶಾಂತಿಗೆ ಪ್ರಯತ್ನಿಸುತ್ತಿದ್ದಾರೆ. ನಾವು ಕೇವಲ ಮೂರ್ತಿ ಪೂಜೆ ಮಾಡದೆ ವಿಶ್ವಗುರು ಬಸವಣ್ಣನವರ ಆದರ್ಶಗಳಾದ ಕಾಯಕ ಮತ್ತು ದಾಸೋಹ ಇವೆರಡು ಪಾಲಿಸಿದಾಗ ನಮ್ಮ ಜೀವನ ಸಾರ್ಥಕವಾಗಿ ಗಾಂಧೀಜಿಯವರ ಕನಸು ನನಸಾಗಲು ಸಾಧ್ಯವಾಗುತ್ತದೆ. ಬಸವಣ್ಣನವರ ವಚನಗಳಿಂದ ಹಾಗೂ ಆದರ್ಶಗಳಿಂದ ರಾಮ ರಾಜ್ಯವಾಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಎನ್‌ಎಸ್‌ಎಸ್ ‘ಅ’ ಘಟಕದ ಅಧಿಕಾರಿ ಡಾ. ದೀಪಾ ರಾಗ ಹಾಗೂ ಎನ್‌ಎಸ್‌ಎಸ್ ‘ಬ’ ಘಟಕದ ಅಧಿಕಾರಿ ಬಸವರಾಜ ಬಿರಾದಾರ, ಶೈಲಜಾ ಸಿದ್ಧವೀರ ಉಪಸ್ಥಿತರಿದ್ದರು.--
ಫೋಟೊ: 26ಬಿಡಿಆರ್58ಬಿ.ವಿ.ಬಿ ಮಹಾವಿದ್ಯಾಲಯದಿಂದ ನಗರದ ಪ್ರತಿಷ್ಠಿತ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಎನ್ಎಸ್ಎಸ್ ಶಿಬಿರದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಡಾ. ಬಸವರಾಜ ಬಲ್ಲೂರ ಅವರನ್ನು ಸನ್ಮಾನಿಸಲಾಯಿತು.