ಅಳ್ನಾವರ:
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಆಸಕ್ತಿ ಹುಟ್ಟು ಹಾಕಲು ಹಾಗೂ ಸರಳ ಪ್ರಯೋಗಗಳ ಮೂಲಕ ನೇರ ಅನುಭವದ ಕಲಿಕೆಗೆ ಒತ್ತು ನೀಡಿ, 20 ಪ್ರಯೋಗಳನ್ನೊಳಗೊಂಡ ವಿಜ್ಞಾನ ಉದ್ಯಾನವನ ನಿರ್ಮಿಸಲಾಗಿದೆ ಎಂದು ಸ್ವಾಮಿ ವಿವೇಕಾನಂದ ಯೂತ್‌ಮೂವಮೆಂಟ್ ಸಂಸ್ಥೆಯ ಉತ್ತರ ಕರ್ನಾಟಕ ಭಾಗದ ಪ್ರಾದೇಶಿಕ ಮುಖ್ಯಸ್ಥ ಕೆ.ಎಸ್. ಜಯಂತ ಹೇಳಿದರು.ಸ್ವಾಮಿ ವಿವೇಕಾನಂದ ಯೂತ್ ಮೂವಮೆಂಟ್ ಸಂಸ್ಥೆ ಗ್ರಾಮೀಣ ಸಮುದಾಯಗಳಿಗೆ ಸಮಾನ ಶಿಕ್ಷಣ ಪ್ರಕಲ್ಪದಡಿ ಬೆಣಚಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ನಿರ್ಮಿಸಿದ ನೂತನ ವಿಜ್ಞಾನ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ನಮ್ಮ ಸಂಸ್ಥೆ ಶಿಕ್ಷಣ ವ್ಯವಸ್ಥೆ ಬಲಪಡಿಸುವಲ್ಲಿ ತನ್ನದೆ ಆದ ಕೊಡುಗೆ ನೀಡುತ್ತಿದೆ. ಈ ಉದ್ಯಾನವನವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಇನ್ನೂಳಿದ ಸರ್ಕಾರಿ ಶಾಲೆಯ ಮಕ್ಕಳಿಗೂ ಅನುಕೂಲ ಆಗುವಂತೆ ನಿರ್ವಹಣೆ ಮಾಡಬೇಕು ಎಂದರು.ಮುಂಬೈನ ಕೋಟಕ್ ಮಹಿಂದ್ರ ಪ್ರೈ. ಲಿ. ಸಿಎಸ್‌ಆರ್ ವಿಭಾಗದ ಅಧಿಕಾರಿ ಮಾಳವಿಕಾ ಕಲ್ಯಾಣಸುಂದರಮ್ ಮಾತನಾಡಿ, ಗ್ರಾಮೀಣ ಮಕ್ಕಳು ವಿಜ್ಞಾನ ವಿಷಯ ಸುಲಭವಾಗಿ ಅರ್ಥ ಮಾಡಿಕೊಳ್ಳಲು ₹ 7 ಲಕ್ಷ ವೆಚ್ಚದಲ್ಲಿ ಸಂಸ್ಥೆಯ ಸಿಎಸ್‌ಆರ್ ನಿಧಿ ಬಳಸಿ ನಿರ್ಮಿಸಿದ ಉದ್ಯಾನವನದ ಪ್ರಯೋಗ ಮಾದರಿ ಸದುಪಯೋಗ ಮಾಡಿಕೊಳ್ಳಬೇಕು. ಗ್ರಾಮೀಣ ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಆಸಕ್ತಿ ಹೊಂದಬೇಕು ಎಂದು ಕರೆ ನೀಡಿದರು.
ಬೆಣಚಿ ಗ್ರಾಪಂ ಮಾಜಿ ಅಧ್ಯಕ್ಷ ಸಂದೀಪ ಪಾಟೀಲ ಹಾಗೂ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಎಸ್. ಬೆನಕನಾಳ ಮಾತನಾಡಿದರು. ಉಮೇಶ ಕದಂ, ಎಸ್.ಎಫ್. ಸೋಜ, ಅವಿತ್ ಆನಂದರಾಜು, ಚಂದ್ರಶೇಖರ ಸೊಪ್ಪಿಮಠ, ಸುರೇಶ ಗುಂಡುಪಕರ, ಹನೀಫ್ ದೊಡಮನಿ, ಫಕ್ಕೀರ ದಬಾಲಿ, ರಘೋತ್ತಮ ಜೋಸಿ, ಫಕ್ಕೀರ್ ದುಬ್ಬನಮರಡಿ, ಆನಂದ ಹುಣಚವಾಡ ಹಾಗೂ ಪ್ರಕಲ್ಪದ ಸಿಬ್ಬಂದಿ ಇದ್ದರು.