ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಭಾವ ಬೀರಿದೆ. ಆರೋಗ್ಯ, ಶಿಕ್ಷಣ, ಸಾರಿಗೆ, ಟೆಲಿ ಕಮ್ಯುನಿಕೇಷನ್, ಕೃಷಿ, ಉತ್ಪಾದನೆ ವಲಯ, ಕಾರ್ಮಿಕ ವಲಯಗಳ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನ ಅವಲಂಬಿತವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.
ಹಾವೇರಿ: ಜಗತ್ತಿನಲ್ಲಿ ಯಾವುದು ಬಲಿಷ್ಠವಾದ ರಾಷ್ಟ್ರ ಎಂದು ಕರೆಸಿಕೊಂಡಿದೆಯೋ ಆ ರಾಷ್ಟ್ರ ಹೇರಳವಾಗಿ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುತ್ತದೆ. ಇದು ಆ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ ಹೇಳಿದರು.
ನಗರದ ವಿದ್ಯಾಶಿಲ್ಪ ಇಂಟರ್ ನ್ಯಾಷನಲ್ ಸ್ಕೂಲ್‍ನಲ್ಲಿ ಬುಧವಾರ ಆಯೋಜಿಸಿದ್ದ ಜಿಗ್ಯಾಸ ವಿಜ್ಞಾನಿ ವಿದ್ಯಾರ್ಥಿ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ವಿಜ್ಞಾನ ಮತ್ತು ತಂತ್ರಜ್ಞಾನ ಮನುಷ್ಯನ ಜೀವನ ಭಾಗದ ಅಂಗವಾಗಿದೆ. ಮುಂದಿನ ದಿನಮಾನಗಳಲ್ಲಿಯೂ ನಮ್ಮ ಜೀವನ ಶೈಲಿ ಹೇಗಿರುತ್ತದೆ ಎನ್ನುವುದನ್ನು ವಿಜ್ಞಾನ ಮತ್ತು ತಂತ್ರಜ್ಞಾನ ನಿರ್ಧರಿಸುತ್ತದೆ ಎಂದರು.ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಪ್ರತಿಯೊಂದು ಕ್ಷೇತ್ರದಲ್ಲಿಯೂ ಪ್ರಭಾವ ಬೀರಿದೆ. ಆರೋಗ್ಯ, ಶಿಕ್ಷಣ, ಸಾರಿಗೆ, ಟೆಲಿ ಕಮ್ಯುನಿಕೇಷನ್, ಕೃಷಿ, ಉತ್ಪಾದನೆ ವಲಯ, ಕಾರ್ಮಿಕ ವಲಯಗಳ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನ ಅವಲಂಬಿತವಾಗಿದೆ. ಇದು ಪ್ರತಿ ಮನುಷ್ಯನ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಿ ಜೀವಣಮಟ್ಟವನ್ನು ಸುಧಾರಣೆ ಮಾಡುತ್ತದೆ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಭಾವ ಬೀರಿದೆ. ಆರೋಗ್ಯ ಕ್ಷೇತ್ರದಲ್ಲಿ ಎಂಐಆರ್, ರೋಬೊಟಿಕ್ ಸರ್ಜರಿ, ಲಸಿಕೆ ಸಂಶೋಧನೆ ಮುಂತಾದವು ಮನುಷ್ಯನ ಆಯುಷ್ಯ ಹೆಚ್ಚಿಸಲು ಸಹಕರಿಯಾಗಿದೆ. ಮೊದಲು ಮಾನವನ ಜೀವಿತಾವಧಿಯು 35 ವರ್ಷಕ್ಕೆ ಸೀಮಿತವಾಗಿತ್ತು. ಇಂದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಆರೋಗ್ಯ ಕ್ಷೇತ್ರದಲ್ಲಿ ಬಳಕೆ ಮಾಡಿಕೊಂಡಿರುವ ಪರಿಣಾಮ ಮಾನವನ ಜೀವಿತಾವಧಿಯನ್ನು 70 ವರ್ಷಕ್ಕೆ ಹೆಚ್ಚಿಸಿದೆ. ಆರೋಗ್ಯ ಕ್ಷೇತ್ರದಲ್ಲಿ ಕೈಕೊಂಡ ಸಂಶೋಧನೆಗಳು ಇದಕ್ಕೆ ಮೂಲ ಕಾರಣವಾಗಿದೆ ಎಂದರು.ಸಾರಿಗೆ ಕ್ಷೇತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಹೆಚ್ಚಾಗಿದೆ. ಆಟೋನಮಿ ಟೆಕ್ನಾಲಜಿ, ಹೈಪರ್ ಟೆಕ್ನಾಲಜಿ ಮೂಲಕ ಎಲೆಕ್ಟ್ರಿಕಲ್ ಬೈಕ್ ಮತ್ತು ಬಸ್ ಗಳು ಬಂದಿದ್ದು ಸಾರಿಗೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವನ್ನು ಸಾಕಾರಗೊಳಿಸಿವೆ. ಇಂದು ಅಮೆರಿಕಾದವರು ನಾಸಾದ ಮೂಲಕ ಚಂದ್ರನಲ್ಲಿ ವಾಸಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ದೇಶ ಹೆಚ್ಚಿನ ಪ್ರಮಾಣದಲ್ಲಿ ಇಂದು ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದೆ. ಇದು ದೇಶದ ಅಭಿವೃದ್ಧಿಗೆ ಪೂರವಾಗಿದೆ. ಕೃಷಿ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಕ್ರಾಂತಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಲ್ಲವನ್ನು ಬದಲಾಯಿಸಿದೆ. ಇದಿಲ್ಲದಿದ್ದರೆ ಜಗತ್ತು ಯಾವ ರೀತಿ ಇರಬಹುದು ಎಂದು ಅಂದಾಜಿಸಲು ಕಷ್ಟ ಸಾಧ್ಯ ಎಂದರು.
ಸಿಎಸ್ಐಆರ್- ಎನ್ಎಎಲ್ನ ಮುಖ್ಯ ವಿಜ್ಞಾನಿ ಡಾ. ಗೀರಿಶ ಯಂಮಾಶೆಟ್ಟಿ ಮಾತನಾಡಿ, ಜಿಗ್ಯಾಸ ಅತ್ಯಂತ ವಿಶಿಷ್ಟವಾದ ಕೇಂದ್ರ ಸರ್ಕಾರದ ಮಹತ್ವದ ಕಾರ್ಯಕ್ರಮವಾಗಿದೆ. ವಿಜ್ಞಾನಿ ಎಂದರೆ ಯಾರು? ಒಂದು ನಿಗದಿತ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಂಡು ಸಾಕಾರಗೊಳಿಸುವುದಾಗಿದೆ. ವಿದ್ಯಾರ್ಥಿಗಳು ಪರಿಶ್ರಮ, ಪ್ರಾಮಾಣಿಕತೆ ಮತ್ತು ವಿನಮ್ರತೆ ಇವುಗಳನ್ನು ಅಳವಡಿಸಿಕೊಂಡರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ. ಜಿಗ್ಯಾಸ ಮುಖ್ಯ ಉದ್ದೇಶ ವಿಜ್ಞಾನಿಗಳ ಜೊತೆ ವಿದ್ಯಾರ್ಥಿಗಳನ್ನು ಬೆರೆಸುವುದು. ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆ ಬೆಳೆಸುವುದಾಗಿದೆ. ಜಿಗ್ಯಾಸ ಮೂಲಕ ವಿವಿಧ ಪ್ರಯೋಗಾಲಯ, ವಸ್ತು ಪ್ರದರ್ಶನ ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಪ್ರಯೋಗದ ಮಹತ್ವವನ್ನು ತೋರಿಸಿ, ಅವರಲ್ಲಿ ವಿಜ್ಞಾನದ ಕುರಿತು ಅರಿವು ಮೂಡಿಸುವುದಾಗಿದೆ. ಇದರಿಂದ ವಿಜ್ಞಾನದ ಬಗ್ಗೆ ವಿದ್ಯಾರ್ಥಿಗಳಿಗೆ ಕುತೂಹಲ ಬರಲಿದೆ. ಮುಖ್ಯವಾಗಿ 6 -12ನೇ ತರಗತಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ವಿಜ್ಞಾನದ ಕುರಿತು ಉತ್ತೇಜನ ನೀಡುತ್ತೇವೆ ಎಂದರು.ಸಿಎಸ್ಐಆರ್ - ಎನ್ಎಎಲ್ನ ಮುಖ್ಯ ವಿಜ್ಞಾನಿ ಡಾ. ವಿಪಿಎಸ್ ನಾಯ್ಡು, ಡಾ. ಶಿವರಾಮ ಬಿ.ಎಸ್., ಡಿಡಿಪಿಐ ಮೋಹನ್ ದಂಡಿನ, ಬಿಇಒ ಎಂ.ಎಚ್. ಪಾಟೀಲ್, ವಿದ್ಯಾಶಿಲ್ಪ ಶಾಲೆಯ ಕಾರ್ಯದರ್ಶಿ ಸೌಮ್ಯಾ ಮಾಳಿ ಇತರರು ಇದ್ದರು.