ಆನೆ-ಮಾನವ ಸಂಘರ್ಷದಿಂದ ನಮ್ಮ ಜಿಲ್ಲೆ ತತ್ತರಿಸುತ್ತಿದೆ. ಇಂದು ಬೆಳಗ್ಗೆ ಕೂಡ ಬೆಳೆಗಾರರೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದು, ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಕ್ರಮ ಅಗತ್ಯ. ಆದ್ದರಿಂದ ಸಂಪುಟ ಸಭೆ ನಡೆಸಿ ಪರಿಹಾರಕ್ಕೆ ಮುಂದಾಗಬೇಕೆಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮನವಿ ಮಾಡಿದ್ದಾರೆ.
ಮಡಿಕೇರಿ: ಆನೆ-ಮಾನವ ಸಂಘರ್ಷದಿಂದ ನಮ್ಮ ಜಿಲ್ಲೆ ತತ್ತರಿಸುತ್ತಿದೆ. ಇಂದು ಬೆಳಗ್ಗೆ ಕೂಡ ಬೆಳೆಗಾರರೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದು, ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ವೈಜ್ಞಾನಿಕ ಕ್ರಮ ಅಗತ್ಯ. ಆದ್ದರಿಂದ ಸಂಪುಟ ಸಭೆ ನಡೆಸಿ ಪರಿಹಾರಕ್ಕೆ ಮುಂದಾಗಬೇಕೆಂದು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಮನವಿ ಮಾಡಿದ್ದಾರೆ. ವಿಧಾನಸಭೆ ಅಧಿವೇಶನದಲ್ಲಿ ಗುರುವಾರ ಮಾತನಾಡಿದ ಅವರು, ಕೊಡಗಿನಲ್ಲಿ ಕಳೆದ ಹತ್ತು ದಿನದಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ. ಕುಶಾಲನಗರದ ಬಾಳೆಗುಂಡಿಯಲ್ಲಿ ಮಹಿಳೆ, ಮದೆನಾಡು ಸಮೀದಪಲ್ಲಿ ಯುವತಿಯೊಬ್ಬಳು ಹಾಗೂ ಸಿದ್ದಾಪುರದಲ್ಲಿ ಬೆಳೆಗಾರರೊಬ್ಬರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಆನೆ, ಚಿರತೆ, ಹುಲಿಯಿಂದ ನಾವು ಬದುಕು ಸಾಗಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಶಾಶ್ವತ ಪರಿಹಾರ ಮಾಡಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಜನ ವಸತಿ ಸಾಧ್ಯವಾಗುವುದಿಲ್ಲ. ಗದ್ದೆಗಳಲ್ಲಿ ಭತ್ತ ಬೆಳೆಯುವುದನ್ನೇ ನಿಲ್ಲಿಸಲಾಗಿದೆ. ಇದರಿಂದ ಜನರು ಕಾನೂನನ್ನು ಕೈಗೆತ್ತಿಕೊಂಡರೆ ತಪ್ಪು ಎನ್ನಲಾಗುವುದಿಲ್ಲ. ಜನರ ಬದುಕು ಸಂಕಷ್ಟದಲ್ಲಿದೆ. ಆದ್ದರಿಂದ ಈ ಸಂಘರ್ಷಕ್ಕೆ ವೈಜ್ಞಾನಿಕ ಕ್ರಮ ತೆಗೆದುಕೊಳ್ಳಬೇಕೆಂದು ಪೊನ್ನಣ್ಣ ಒತ್ತಾಯಿಸಿದರು. ಮಾನವ-ಆನೆ ಸಂಘರ್ಷ ತಡೆಯಲು 1500 ಕೋಟಿ ರು. ಅನುದಾನ ನೀಡುವ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿ ಘೋಷಣೆ ಮಾಡಿದ್ದು, ಇದರಲ್ಲಿ ಬಹುಪಾಲು ಹಣವನ್ನು ಕೊಡಗಿಗೆ ನೀಡಬೇಕು ಎಂದು ಒತ್ತಾಯಿಸಿದರು.ಕ್ರೀಡೆಗೆ ಪ್ರೋತ್ಸಾಹ, ಪೊನ್ನಣ್ಣ ಸ್ವಾಗತ: ರಾಜ್ಯದಲ್ಲಿ ಅತಿ ಹೆಚ್ಚು ಒಲಂಪಿಯನ್ ಗಳನ್ನು ನೀಡಿದ ಪುಟ್ಟ ಜಿಲ್ಲೆ ಕೊಡಗು ಜಿಲ್ಲೆಯಾಗಿದೆ. ಇದನ್ನು ಗುರುತಿಸಿ ನನ್ನ ಮನವಿಯನ್ನು ಪರಿಗಣಿಸಿ ವಿರಾಜಪೇಟೆಯಲ್ಲಿ ಈಗಾಗಲೇ 11.5 ಎಕರೆ ಜಾಗ ಗುರುತಿಸಿದ್ದು, ಇದರಲ್ಲಿ ಕ್ರೀಡಾ ತರಬೇತಿ ವಸತಿ ಕೇಂದ್ರವನ್ನು ಸ್ಥಾಪಿಸಲು ಕ್ರಮ ಜರುಗಿಸುವ ಘೋಷಣೆಗಳನ್ನು ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವುದು ಬಹಳ ಮುಖ್ಯವಾದ ವಿಚಾರವಾಗಿದೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಿಎಂ ತೆಗೆದುಕೊಂಡ ದಿಟ್ಟ ನಿರ್ಧಾರವನ್ನು ಸ್ವಾಗತಿಸುವುದಾಗಿ ಅವರು ಬಜೆಟ್ ಚರ್ಚೆ ಸಂದರ್ಭ ಸ್ವಾಗತಿಸಿದರು.
