ಸಾರಾಂಶ
ನಿಯಮ ಇದ್ದರೂ ಕೈ ತುಂಬು ತೋಳಿನ ಉಡುಪು ತೊಟ್ಟುಕೊಂಡು ಬಂದವರ ಫಜೀತಿ
ಕಿವಿಯ ಓಲೆ, ಇತರ ಒಡವೆ ತೆಗೆಸಿದರುಗ್ರಾಮ ಆಡಳಿತಾಧಿಕಾರಿಗಳ ಪರೀಕ್ಷೆಯಲ್ಲಿ ಗೊಂದಲ
ಕನ್ನಡಪ್ರಭ ವಾರ್ತೆ ಕೊಪ್ಪಳಗ್ರಾಮ ಆಡಳಿತಾಧಿಕಾರಿಗಳ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಗಳ ಅಂಗಿಯ ಉದ್ದ ತೋಳು ಕತ್ತರಿಸಿ ಒಳಗೆ ಪ್ರವೇಶ ನೀಡಲಾಯಿತು. ಪರೀಕ್ಷೆಗೆ ಹಾಜರಾಗಲು ಕಡ್ಡಾಯ ಸೂಚನೆ ನೀಡಿದ್ದರೂ ಸೂಚನೆ ಪಾಲಿಸದ ನೂರಾರು ವಿದ್ಯಾರ್ಥಿಗಳ ಉದ್ದ ತೋಳಿನ ಅಂಗಿ, ಟಾಪ್‌ನ ತೋಳುಗಳನ್ನು ಕತ್ತರಿಸಲಾಯಿತು.
ರಾಜ್ಯಾದ್ಯಂತ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ಕೊಪ್ಪಳ ನಗರದಾದ್ಯಂತ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆ ಬರೆದರು.ಶ್ರೀ ಗವಿಸಿದ್ಧೇಶ್ವರ ಪದವಿ ಕಾಲೇಜು ಸೇರಿದಂತೆ ಹಲವಾರು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳಿಗೆ ಆಗಮಿಸಲು ಧರಿಸಬೇಕಾದ ಡ್ರೆಸ್ ಬಗ್ಗೆ ನಿಖರ ಮಾಹಿತಿ ನೀಡಿದಾಗ್ಯೂ ವಿದ್ಯಾರ್ಥಿಗಳು ಉದ್ದನ ತೋಳಿನ ಅಂಗಿಗಳನ್ನು, ಟಾಪ್‌ಗಳನ್ನು ಹಾಕಿಕೊಂಡು ಬಂದಿದ್ದರು. ಅವರೆಲ್ಲರನ್ನು ಪರೀಕ್ಷಾ ಕೇಂದ್ರದ ಹೊರಗೆ ನಿಲ್ಲಿಸಿ, ಕತ್ತರಿಯಿಂದ ಕತ್ತರಿಸಿಯೇ ಆನಂತರ ಒಳಗೆ ಕಳುಹಿಸಲಾಯಿತು.
ಇದಲ್ಲದೆ ನಿಷೇಧಿತ ಒಡೆವೆಗಳು, ಶೂ ಸೇರಿದಂತೆ ಯಾವುದೇ ಆಭರಣಗಳನ್ನು ಧರಿಸಿಕೊಂಡು ಹೋಗುವುದಕ್ಕೆ ಅವಕಾಶ ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಫಜೀತಿ ಎದುರಿಸುವಂತೆ ಆಯಿತು. ಇದು, ಕೆಲಕಾಲ ಗೊಂದಲಕ್ಕೆ ಕಾರಣವಾಯಿತಾದರೂ ವಿದ್ಯಾರ್ಥಿಗಳು ಏನೇ ತಿಪ್ಪರಲಾಗ ಹಾಕಿದರೂ ವಿನಾಯಿತಿ ನೀಡದೆ ನಿಯಮಾನುಸಾರವೇ ವಿದ್ಯಾರ್ಥಿಗಳನ್ನು ಒಳಗೆ ಕಳುಹಿಸಲಾಯಿತು.ಜಿಲ್ಲಾದ್ಯಂತ 35 ಪರೀಕ್ಷಾ ಕೇಂದ್ರಗಳಿದ್ದು, ಎಲ್ಲ ಪರೀಕ್ಷಾ ಕೇಂದ್ರದಲ್ಲಿಯೂ ಪರೀಕ್ಷಾ ಪ್ರಾರಂಭವಾಗುವ ಮುನ್ನ ಗೊಂದಲ ಉಂಟಾಯಿತು. 13,060 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ನೂರಾರು ವಿದ್ಯಾರ್ಥಿಗಳು ನಿಯಮ ಮೀರಿ ಉಡುಪು-ಆಭರಣ ಧರಿಸಿ ಹಾಗೆ ಬಂದಿದ್ದರು.
ವಿದ್ಯಾರ್ಥಿಗಳ ಆಕ್ಷೇಪ: ವಿದ್ಯಾರ್ಥಿಗಳ ಈ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಮೊದಲೇ ನಿಖರವಾಗಿ ಮಾಹಿತಿ ನೀಡಬೇಕಾಗಿತ್ತು. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಮಾಹಿತಿ ನೀಡಲಾಗಿದೆ. ಇದನ್ನು ನಾವು ಗಮನಿಸಿಯೇ ಇಲ್ಲ ಎಂದರು. ಆದರೆ, ಪ್ರವೇಶ ಪತ್ರದಲ್ಲಿಯೇ ಈ ಕುರಿತು ಸೂಚನೆ ನೀಡಲಾಗಿದೆ. ಆದರೂ ವಿದ್ಯಾರ್ಥಿಗಳು ಗಮನಿಸಿಲ್ಲ. ಕ್ರಮ ಅನಿವಾರ್ಯ ಎಂದು ಪರೀಕ್ಷಾ ಮೇಲ್ವಿಚಾರಕರು ಸಮರ್ಥಿಸಿಕೊಂಡರು.ಕಟ್ಟುನಿಟ್ಟಿನ ಕ್ರಮವಾಗುತ್ತಿದ್ದರೂ ವಿದ್ಯಾರ್ಥಿಗಳು ಮತ್ತೆ ನಿಯಮಾವಳಿ ಉಲ್ಲಂಘನೆ ಮಾಡುತ್ತಿರುವುದರಿಂದ ಅನಿವಾರ್ಯವಾಗಿ ನಾವು ಕತ್ತರಿಯನ್ನು ಸಹ ಪರೀಕ್ಷಾ ಕೇಂದ್ರದಲ್ಲಿ ಇರಿಸಿದ್ದೇವೆ. ಪರೀಕ್ಷೆಗೆ ಉದ್ದನೆಯ ತೋಳು ತೊಟ್ಟು ಬಂದವರನ್ನು ಬಿಡದೆ ಅದನ್ನು ಕತ್ತರಿಸಿಯೇ ಒಳಕಳುಹಿಸುತ್ತೇವೆ ಎಂದರು.