ಸಾರಾಂಶ
ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರೀಕ್ಷೆ ಎದುರಿಸಿ ಅತ್ಯುತ್ತಮ ಸಾಧನೆ ಮಾಡಿ ರಾಜ್ಯಕ್ಕೆ ಹೆಸರು ತರಬೇಕು. ಕ್ಷೇತ್ರದಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮಾಡುತ್ತೇನೆ ಎಂದು ಶಾಸಕ ಎನ್. ಶ್ರೀನಿವಾಸ್ ತಿಳಿಸಿದರು.ಪಟ್ಟಣದ ಶಿವಗಂಗೆ ರಸ್ತೆಯಲ್ಲಿರುವ ಬಿಆರ್ ಟಿ ಭವನದಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಭಾವಿ ಮಾರ್ಗದರ್ಶನ, ಒತ್ತಡ ನಿವಾರಣೆ, ಆತ್ಮಸ್ಥೈರ್ಯ ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಮುಖವಾಗಿದ್ದು, ಆತಂಕ ಬಿಟ್ಟು ಸಮಯವನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಅಂಕಗಳಿಸಿ ರಾಜ್ಯಮಟ್ಟದಲ್ಲಿ ತಾಲೂಕಿಗೆ ಕೀರ್ತಿ ಬರುವಂತೆ ಮಾಡಬೇಕು. ಹಿಂದಿನ ದಿನಗಳಲ್ಲಿ ಸೌಲಭ್ಯಗಳಿರಲಿಲ್ಲ. ಆದರೆ, ಈಗ ಎಲ್ಲ ಸೌಲಭ್ಯಗಳಿದ್ದೂ ಸಾಧನೆಗೆ ಮುಂದಡಿಯಿಡಬೇಕು. ಪರೀಕ್ಷೆಯ ದಿನಗಳು ಸಮೀಪಿಸುತ್ತಿದ್ದು, ಪರೀಕ್ಷೆ ಭಯ ಬಿಟ್ಟು ಆತ್ಮಸ್ಥೆರ್ಯದಿಂದ ಎಲ್ಲಾ ವಿಷಯಗಳ ಬಗ್ಗೆ ಗಮನವಹಿಸಿ ಶಿಕ್ಷಕರ ಮಾರ್ಗದರ್ಶನ ಪಡೆದುಕೊಳ್ಳಿ, ವಿದ್ಯಾರ್ಥಿಗಳು ನಿರಂತರ ಪರಿಶ್ರಮಪಟ್ಟರೆ ಯಶಸ್ಸು ಸಾಧ್ಯವಾಗಲಿದೆ. ಕಲಿಕೆಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ್ ಮಾತನಾಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಶಾಸಕರ ಮಾರ್ಗದರ್ಶನದಲ್ಲಿ ಕಾರ್ಯಾಗಾರ ಮಾಡಲಾಗಿದೆ. ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಶಾಸಕರ ಮಾರ್ಗದರ್ಶನದಲ್ಲಿ ಜ್ಞಾಪಕ ಶಕ್ತಿವೃದ್ಧಿ, ಒತ್ತಡ ನಿವಾರಣೆ, ಸಮಾಜ ವಿಜ್ಞಾನ, ಗಣಿತ, ವಿಜ್ಞಾನ, ಇಂಗ್ಲಿಷ್ ವಿಭಾಗಗಳ ಬಗ್ಗೆ ವಿಶೇಷ ಉಪನ್ಯಾಸಕರ ಮೂಲಕ ಕಾರ್ಯಾಗಾರ ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಿದೆ ಎಂದರು.
ವಿಶೇಷ ಕಾರ್ಯಾಗಾರ: ಗ್ರಾಮೀಣ ಪ್ರದೇಶದ 34 ಶಾಲೆಯ 1600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರ ಆಯೋಜಿಸುವುದರ ಜೊತೆಗೆ ಶಾಸಕ ಎನ್.ಶ್ರೀನಿವಾಸ್ ಸಹಕಾರದೊಂದಿಗೆ ಮಧ್ಯಾಹ್ನದ ಬಿಸಿಯೂಟ ವ್ಯವಸ್ಥೆ ಮಾಡಲಾಗಿತ್ತು.ಉಚಿತ ಪರೀಕ್ಷಾ ಪರಿಕರಣ ವಿತರಣೆ:
ಕಳೆದ ವರ್ಷದಂತೆ ಈ ವರ್ಷವೂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಉಪಕರಣಗಳನ್ನು ವೈಯಕ್ತಿಕವಾಗಿ ನೀಡುತ್ತೇನೆ ಎಂದು ಘೋಷಿಸಿದರು.ಕಾರ್ಯಕ್ರಮದಲ್ಲಿ ಮುಖಂಡ ಅಗಳಕುಪ್ಪೆ ಗೋವಿಂದರಾಜು, ಗ್ರಾಪಂ ಅಧ್ಯಕ್ಷೆ ಶೋಭಾ ಗಂಗರಾಜು, ಸದಸ್ಯರಾದ ವನಿತ, ವೆಂಕಟಾಚಲಯ್ಯ, ಮಾಜಿ ಅಧ್ಯಕ್ಷರಾದ ಶಿವಕುಮಾರ್, ಹೊಸಳಯ್ಯ, ಗಂಗರುದ್ರಯ್ಯ, ನಾರಾಯಣಸ್ವಾಮಿ, ಮುಖಂಡರಾದ ಪಾರ್ಥರಾಜು, ಕುಮಾರಸ್ವಾಮಿ, ಸಿದ್ದರಾಜು, ಚಿಕ್ಕಣ್ಣ, ನಯಾಜ್ ಖಾನ್, ಬೈಲಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ.ಕೆ.ರವಿಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಕುಮಾರ್, ಸಮನ್ವಯಾಧಿಕಾರಿಗಳಾದ ಸುಚಿತ್ರ, ಗಿರೀಶ್, ಸಿದ್ದರಾಮೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಉಮಾ ಮಹೇಶ್, ಗುಲ್ಜಾರ್ ಐ ಡಂಬಳಾ, ಭಾಸ್ಕರ್ ಮತ್ತಿತರರಿದ್ದರು.