ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸುತ್ತದೆ

| Published : Jan 18 2024, 02:08 AM IST

ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಸುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸಂಯಮ ಕಲಿಸುವುದರ ಜೊತೆಗೆ ಸೇವಾ ಮನೋಭಾವವನ್ನು ವೃದ್ಧಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ತಾಲೂಕು ಅಧ್ಯಕ್ಷ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಸಂಯಮ ಕಲಿಸುವುದರ ಜೊತೆಗೆ ಸೇವಾ ಮನೋಭಾವವನ್ನು ವೃದ್ಧಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ತಾಲೂಕು ಅಧ್ಯಕ್ಷ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.

ಆಲೂರು ತಾಲೂಕು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಹಮ್ಮಿಕೊಂಡಿದ್ದ ೨೦೨೩-೨೪ ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನಗೊಳಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಮಹತ್ತರ ಪಾತ್ರ ವಹಿಸುತ್ತದೆ. ದಿನಚರಿಯ ನಿರ್ವಹಣೆ ನಮ್ಮನ್ನು ಕ್ರಿಯಾಶೀಲವಾಗಿಡುತ್ತದೆ. ಈ ಹಿನ್ನೆಲೆಯಲ್ಲಿ ಕ್ಯಾಲೆಂಡರ್ ಪ್ರಮುಖವಾದುದು. ಕ್ಯಾಲೆಂಡರ್ ನಮ್ಮನ್ನು ಸದಾ ಎಚ್ಚರಿಕೆಯಿಂದ ಮುನ್ನಡೆಯಲು ಹಾಗೂ ಸದಾ ಜಾಗೃತರಾಗಿರಲು ತಿಳಿಸುತ್ತದೆ. ನಮ್ಮ ತಾಲೂಕಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ಉತ್ತಮೋತ್ತಮ ಕಾರ್ಯಗಳು ಜರುಗುತ್ತಿವೆ. ಈ ಸಂಸ್ಥೆ ಹೀಗೆ ಮಕ್ಕಳ ಅಭ್ಯುದಯಕ್ಕಾಗಿ ಸದಾ ಕೆಲಸ ಮಾಡಲೆಂದು ಆಶಿಸುತ್ತೇನೆಂದು ನುಡಿದರು. ನ್ಯಾಯವಾದಿಗಳು ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಸನ ಜಿಲ್ಲಾ ಉಪಾಧ್ಯಕ್ಷರಾದ ಎಂ.ಬಿ. ಗಿರಿಜಾಂಬಿಕ ಮಾತನಾಡಿ, ಸೇವೆಯೇ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ನಮ್ಮ ಸಂಸ್ಥೆಯು ಶ್ರವಣಬೆಳಗೊಳ ಮಹಾಮಸ್ತಕಾಭಿಷೇಕ, ಹಾಸನಾಂಬ ಜಾತ್ರ ಮಹೋತ್ಸವ, ಕಲ್ಯಾಣಿಗಳ ಪುನರುಜ್ಜೀವನ, ಅರಣ್ಯೀಕರಣ ಹೀಗೆ ಹಲವಾರು ಸಂದರ್ಭಗಳಲ್ಲಿ ನಮ್ಮ ನೂರಾರು, ಸಾವಿರಾರು ಮಕ್ಕಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಆಲೂರು ತಾಲೂಕು ಘಟಕ ಶ್ಲಾಘನೀಯ ಸೇವೆ ಸಲ್ಲಿಸುತ್ತಿದೆ. ಪಠ್ಯದ ಜೊತೆಗೆ ಪಠ್ಯೇತರ ವಿಷಯಗಳಲ್ಲೂ ಯಶ ಕಂಡಾಗ ಮಾತ್ರ ಸರ್ವಾಂಗೀಣ ಪ್ರಗತಿ ಕಾಣಲು ಸಾಧ್ಯ. ಮಕ್ಕಳನ್ನು ಮಾನಸಿಕವಾಗಿ, ಶಾರೀರಿಕವಾಗಿ ಸದೃಢಗೊಳಿಸುವಲ್ಲಿ ನಮ್ಮ ಸ್ಕೌಟ್ಸ್, ಗೈಡ್ಸ್ ಚಳುವಳಿ ಮಹತ್ತರ ಪಾತ್ರ ವಹಿಸುತ್ತಿದೆ ಎಂದರು. ಹಾಸನದ ಮಿಡ್ ಟೌನ್ ರೋಟರಿಯ ಅಧ್ಯಕ್ಷೆ ಮಮತಾ ಪಾಟೀಲ್ ಮಾತನಾಡಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳಲ್ಲಿ ಬಾಲ್ಯದಿಂದಲೇ ಸ್ವಯಂ ಶಿಸ್ತನ್ನು ಬೆಳೆಸುತ್ತದೆ. ಧೈರ್ಯಶೀಲತೆಯನ್ನು ಕಲಿಸುತ್ತದೆ. ಸಮಾಜಮುಖಿಯಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ಮಕ್ಕಳು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ನಿಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಿ ಎಂದು ಸಲಹೆ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಾಯಕ ಆಯುಕ್ತ ಎಂ.ಬಾಲಕೃಷ್ಣ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಜೆ.ಪೃಥ್ವಿ, ತಾಲೂಕು ಸಮನ್ವಯಾಧಿಕಾರಿ ಬಿ.ಬಿ.ರವಿ, ಶಿಕ್ಷಣ ಸಂಯೋಜಕರಾದ ತಿಮ್ಮಶೆಟ್ಟಿ, ಮಂಜುಳಾ, ರುದ್ರೇಶ್, ತಾಲೂಕು ಉಪಾಧ್ಯಕ್ಷರಾದ ಸಿ.ಎಸ್.ಪೂರ್ಣಿಮಾ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಟಿ.ಕೆ.ನಾಗರಾಜ್, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್, ಭೈರಾಪುರ ಶಾಲಾ ಮುಖ್ಯ ಶಿಕ್ಷಕಿ ಎಲಿಜಬೆಥ್, ಗೈಡ್ಸ್ ಶಿಕ್ಷಕರುಗಳಾದ ಭಾಗ್ಯಲಕ್ಷ್ಮೀ, ಮಹೇರಾಬಾನು, ರೇಷ್ಮಾ, ಸುನೀತಾ, ಪ್ರಿಯಾಂಕ, ಶಿಲ್ಪಕೃತಿ, ಕ್ಲಬ್ ಮಾಸ್ಟರ್ ವೆಂಕಟರಂಗಯ್ಯ ಶಿಕ್ಷಕರಾದ ನಾಗರತ್ನ, ಜ್ಯೋತಿ ಇತರರು ಹಾಜರಿದ್ದರು.