ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಪಠ್ಯೇತರ ಚಟುವಟಿಕೆಗಳಾದ ಎನ್‌ಸಿಸಿ, ಸ್ಕೌಟ್ಸ್, ಗೈಡ್ಸ್, ಎನ್‌ಎಸ್‌ಎಸ್ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಜೀವನದ ಅನುಭವಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಇವು ಪ್ರತಿಯೊಬ್ಬರ ವೈಯಕ್ತಿಕ ಜೀವನದಲ್ಲಿ ಬಳಕೆಯಾಗಲಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ತಂಡ (ಎಸ್‌ಡಿಆರ್‌ಎಫ್) ದಾವಣಗೆರೆ ಜಿಲ್ಲಾ ವಿಭಾಗದ ಇನ್‌ಸ್ಪೆಕ್ಟರ್ ಕಿರಣ್‌ಕುಮಾರ ತಿಳಿಸಿದರು.ನಗರದ ತರಳಬಾಳು ವಸತಿಯುತ ಶಾಲೆಯ ಆವರಣದಲ್ಲಿ ಭಾನುವಾರ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್, ಕರ್ನಾಟಕ, ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯಿಂದ ಸಂಸ್ಥೆ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ನೇತೃತ್ವದಲ್ಲಿ ಸ್ಕೌಟ್ಸ್, ಗೈಡ್ಸ್ ರಾಜ್ಯ ಮತ್ತು ರಾಷ್ಟ್ರಪತಿ ಪುರಸ್ಕಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತ ಕಾರ್ಯಾಗಾರ, ಅಣಕು ಪ್ರದರ್ಶನದಲ್ಲಿ ಮಾತನಾಡಿದರು.
ಓದಿನಲ್ಲಿ ಅಂಕಗಳಿಸಿದ ಪ್ರಮಾಣ ಪತ್ರಗಳ ಜೊತೆಗೆ ಸ್ಕೌಟ್ಸ್-ಗೈಡ್ಸ್‌ನಲ್ಲಿ ಭಾಗವಹಿಸಿದ ಪ್ರಮಾಣ ಪತ್ರಗಳು ನಿಮ್ಮ ಜೀವನದಲ್ಲಿ ಉಪಯೋಗವಾಗಲಿವೆ. ವಿಪತ್ತು ನಿರ್ವಹಣಾ ತಂಡ ಕೇವಲ ವಿಪತ್ತು, ಅಪಾಯಗಳು, ದುರ್ಘಟನೆಗಳು ಸಂಭವಿಸಿದಾಗ ಮಾತ್ರವಲ್ಲ. ಜೀವನವನ್ನು ಹೇಗೆ ನಿರ್ವಹಣೆ ಮಾಡಬೇಕು ಎನ್ನುವುದನ್ನು ಕಲಿಸಿಕೊಡಲಿದೆ. ಏನಾದರೂ ದುರ್ಘಟನೆಗಳು ಸಂಭವಿಸಿದರೆ ಹೇಗೆ ನಿರ್ವಹಣೆ ಮಾಡುವುದನ್ನು ಇಂತಹ ಪ್ರದರ್ಶನಗಳಲ್ಲಿ ತಿಳಿಸುತ್ತಿದ್ದೇವೆ. ಕಾರ್ಯಾಗಾರದಲ್ಲಿ 96 ವಿದ್ಯಾರ್ಥಿಗಳು ಭಾಗವಹಿಸಿರುವುದು ಶ್ಲಾಘನೀಯ ಎಂದರು.ರಾಜ್ಯ ವಿಪತ್ ನಿರ್ವಹಣಾ ತಂಡ ದಾವಣಗೆರೆ ಜಿಲ್ಲಾ ವಿಭಾಗದ ಸಬ್‌ಇನ್ಸ್ ಪೆಕ್ಟರ್ ಇಮ್ರಾನ್ ಖುರೇಷಿ ಮಾತನಾಡಿ, ವಿಪತ್ತುಗಳಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತು ಎಂಬ ಎರಡು ವಿಪತ್ತುಗಳಿವೆ. ರಾಜ್ಯ, ದೇಶದಲ್ಲಿ ಹಲವಾರು ರೀತಿಯಲ್ಲಿ ವಿಪತ್ತುಗಳು ಸಂಭವಿಸಿವೆ. ಆಕಸ್ಮಿಕವಾಗಿ ನಡೆದ ಘಟನೆಯಿಂದ ಮನುಷ್ಯರ ಜೀವನಕ್ಕೆ, ಆಸ್ತಿ ಪಾಸ್ತಿಗಳಿಗೆ ಹಾನಿಯಾಗುತ್ತದೆ. ಅದರಿಂದ ನಾವು ಹೊರ ಬರಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತೇವೆ. ಇಂತಹ ದುರ್ಘಟನೆ ಆಗುವುದಕ್ಕೆ ವಿಪತ್ತು ಎಂದು ಕರೆಯುತ್ತೇವೆ. ನೈಸರ್ಗಿಕವಾಗಿ, ಪರಿಸರಕ್ಕೆ, ಮಾನವನ ನಿತ್ಯ ಚಟುವಟಿಕೆಗಳನ್ನು ನಡೆಸಲು ಬಹಳಷ್ಟು ಅಡೆತಡೆ ಉಂಟಾಗುತ್ತದೆ. ಇದರಿಂದ ಹೊರ ಬರುವುದು, ಗಾಯಾಳುಗಳನ್ನು ರಕ್ಷಿಸುವುದು, ಅವರಿಗೆ ಚಿಕಿತ್ಸೆ ನೀಡುವುದು, ಅವರನ್ನು ಮರು ಜೀವನಕ್ಕೆ ಕರೆತರುವ ಕ್ರಿಯೆಗಳನ್ನು ನಡೆಯುವುದಕ್ಕೆ ನಿರ್ವಹಣೆ ಎಂದು ಕರೆಯುತ್ತೇವೆ ಎಂದರು.
ಭೂ ಕುಸಿತ, ಭೂಕಂಪ, ಕಾಳ್ಗಿಚ್ಚು, ಸುನಾಮಿ, ಚಂಡಮಾರುತ, ಅತಿ ಮಳೆಯಿಂದಾಗುವ ಪ್ರವಾಹದಿಂದ ಮನುಷ್ಯನ ಆಸ್ತಿ ಪಾಸ್ತಿ ಹಾನಿಯಾಗಿದ್ದರೆ ಅದನ್ನು ನೈಸರ್ಗಿಕ ವಿಪತ್ತು ಎಂದು ಕರೆಯುತ್ತೇವೆ. ಮರ ಕಡಿಯುವುದು, ಕಾಲ್ತುಳಿತ, ಅಪಘಾತಗಳು, ಸಂಚಾರದಲ್ಲಿ ಕಾನೂನು ನಿಯಮಗಳನ್ನು ಪಾಲಿಸದೇ ಇರುವುದು, ಅಗ್ನಿ ಅನಾಹುತ, ಬಾಂಬ್ ಬ್ಲಾಸ್ಟ್, ಸಾಂಕ್ರಾಮಿಕ ರೋಗಗಳು, ಕಟ್ಟಡ ಬೀಳುವುದು, ಬಯಾಲಜಿಕಲ್, ಇಂಡಸ್ಟ್ರಿಯಲ್, ರೇಡಿಯೋಲಾಜಿಕಲ್ ಇವುಗಳು ಮಾನವನ ಕೃತ್ಯದಿಂದ ಆದ ವಿಪತ್ತುಗಳಾಗಿವೆ ಎಂದರು.ಜಿಲ್ಲಾ ಸಹಾಯಕ ಆಯುಕ್ತ ಎನ್.ಕೆ.ಕೊಟ್ರೇಶ್, ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಟಿ.ಎಂ.ರವೀಂದ್ರಸ್ವಾಮಿ, ಸ್ಕೌಟ್ಸ್ ಶಿಕ್ಷಕರಾದ ಶಶಿಕುಮಾರ, ವಿಜಯಕುಮಾರ, ಗೈಡ್ಸ್ ಕ್ಯಾಪ್ಟನ್ ಅನಿತಾ, ಸುಜಾತಾ, ತರಳಬಾಳು ಶಾಲೆ ಸಿಬಿಎಸ್‌ಇ ವಿಭಾಗದ ಮುಖ್ಯಸ್ಥ ಪ್ರವೀಣ್‌ಕುಮಾರ, ಸ್ಕೌಟ್ಸ್, ಗೈಡ್ ಮಕ್ಕಳು, ಪೋಷಕರು ಇದ್ದರು. ನಂತರ ರಾಜ್ಯ ವಿಪತ್ತು ನಿರ್ವಹಣಾ ತಂಡ ದಾವಣಗೆರೆ ಜಿಲ್ಲಾ ವಿಭಾಗದವರು ಪ್ರಾತ್ಯಕ್ಷಿಕೆ ನೀಡಿದರು.