ಸ್ಕೌಟ್ಸ್ ಗೈಡ್ಸ್‌ನಿಂದ ಸಹಕಾರ ಮನೋಭಾವ ಬೆಳೆಯುತ್ತದೆ

| Published : Apr 07 2025, 12:30 AM IST

ಸ್ಕೌಟ್ಸ್ ಗೈಡ್ಸ್‌ನಿಂದ ಸಹಕಾರ ಮನೋಭಾವ ಬೆಳೆಯುತ್ತದೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಾಮುಖ್ಯತೆ ಎಂದರೆ ನಿನ್ನ ಶಕ್ತಿ ಇದ್ದಷ್ಟು ಕರ್ತವ್ಯ ನಿರ್ವಹಿಸು ಇದು ನಮ್ಮ ಗುರಿ, ಸದಾ ಸಿದ್ಧನಾಗಿರು ಇದು ನಮ್ಮ ಧ್ಯೇಯ, ಸೇವೆಯೇ ನಮ್ಮ ಚರಮ ವಾಕ್ಯವಾಗಿದೆ. ಇಲ್ಲಿನ ಶಿಕ್ಷಣ ವಿಧಾನವು ಸ್ವಯಂ ಶಿಕ್ಷಣದ ಮೂಲಕ ಹಂತಹಂತವಾಗಿ ಮುಂದುವರಿಯುತ್ತದೆ. ಪ್ರತಿಜ್ಞೆ, ವಚನ ಸ್ವೀಕಾರ ಮತ್ತು ನಿಯಮಗಳನ್ನು ಅನುಸರಿಸುವುದರ ಮೂಲಕ ಸನ್ನಡತೆಯ ಮುನ್ನಡೆ, ಉತ್ತಮ ಸಾಮರ್ಥ್ಯ, ಸ್ವಾವಲಂಬನೆ, ಭರವಸೆಯುಳ್ಳ ವ್ಯಕ್ತಿತ್ವ, ಸಹಕಾರ ಮನೋಭಾವ,ಗುಣ ಕಲಿಯುತ್ತಾರೆ.

ಕನ್ನಡಪ್ರಭ ವಾರ್ತೆ ಆಲೂರು

ಸ್ಕೌಟ್ಸ್ ಚಳವಳಿ ವಿಶ್ವವ್ಯಾಪಿಯಾಗಿರುವ ಒಂದು ಯುವ ಜನಾಂಗದ ಕೂಟ. ಯುವ ಪೀಳಿಗೆಯ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯೇ ಇದರ ಮುಖ್ಯ ಉದ್ದೇಶವಾಗಿದೆ ಎಂದು ಕರ್ವ್‌ಸ್‌ ಲೀಡರ್ ಚಂದ್ರಮತಿ ಅಭಿಪ್ರಾಯಪಟ್ಟರು.ಅವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಹಾಸನ, ತಾಲ್ಲೂಕು ಸಂಸ್ಥೆ ಆಲೂರು ವತಿಯಿಂದ ಭೈರಾಪುರದ ಎಸ್.ವಿ.ಪಬ್ಲಿಕ್ ಶಾಲೆಯಲ್ಲಿ ನೂತನ ಸ್ಕೌಟ್ಸ್, ಗೈಡ್ಸ್‌ಗಾಗಿ ಹಮ್ಮಿಕೊಂಡಿರುವ ಏಳು ದಿನಗಳ ಕಾಲದ ಮೂಲ ತರಬೇತಿ ಶಿಬಿರದಲ್ಲಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್‌ನ ಪ್ರಾಮುಖ್ಯತೆ ಎಂದರೆ ನಿನ್ನ ಶಕ್ತಿ ಇದ್ದಷ್ಟು ಕರ್ತವ್ಯ ನಿರ್ವಹಿಸು ಇದು ನಮ್ಮ ಗುರಿ, ಸದಾ ಸಿದ್ಧನಾಗಿರು ಇದು ನಮ್ಮ ಧ್ಯೇಯ, ಸೇವೆಯೇ ನಮ್ಮ ಚರಮ ವಾಕ್ಯವಾಗಿದೆ. ಇಲ್ಲಿನ ಶಿಕ್ಷಣ ವಿಧಾನವು ಸ್ವಯಂ ಶಿಕ್ಷಣದ ಮೂಲಕ ಹಂತಹಂತವಾಗಿ ಮುಂದುವರಿಯುತ್ತದೆ. ಪ್ರತಿಜ್ಞೆ, ವಚನ ಸ್ವೀಕಾರ ಮತ್ತು ನಿಯಮಗಳನ್ನು ಅನುಸರಿಸುವುದರ ಮೂಲಕ ಸನ್ನಡತೆಯ ಮುನ್ನಡೆ, ಉತ್ತಮ ಸಾಮರ್ಥ್ಯ, ಸ್ವಾವಲಂಬನೆ, ಭರವಸೆಯುಳ್ಳ ವ್ಯಕ್ತಿತ್ವ, ಸಹಕಾರ ಮನೋಭಾವ,ಗುಣ ಮತ್ತು ಮುನ್ನೆಡೆಸುವ ಗುಣವನ್ನು ಕಲಿಯುತ್ತಾರೆ. ಮಕ್ಕಳು ಧರ್ಮಾತೀತವಾಗಿ, ಜಾತ್ಯತೀತವಾಗಿ, ಲಿಂಗಾತೀತವಾಗಿ ವಿಕಸನ ಹೊಂದುತ್ತವೆ. ಪ್ರಾದೇಶಿಕ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹೊಣೆಗಾರಿಕೆಯುಳ್ಳ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ ಎಂದರು.ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ ಮಾತನಾಡಿ, ಸ್ಕೌಟ್ಸ್ ಅಂಡ್‌ ಗೈಡ್ಸ್ ಚಳವಳಿಯಲ್ಲಿ ಜೀವನ ಕೌಶಲಗಳನ್ನು ಉನ್ನತೀಕರಿಸುವ ನಿಟ್ಟಿನಲ್ಲಿ ತನ್ನದೇಯಾದ ಚಟವಟಿಕೆಯುಕ್ತ ಪಠ್ಯವನ್ನು ಹೊಂದಿದೆ. ಮಗು ನಮ್ಮ ಚಳವಳಿಗೆ ಪ್ರವೇಶ ಮಾಡುವುದಕ್ಕಿಂತ ಮುಂಚೆಯೇ ಇಲ್ಲಿನ ಸಂಕ್ಷಿಪ್ತ ಇತಿಹಾಸ, ಪ್ರಾರ್ಥನಾಗೀತೆ, ಧ್ವಜ ಗೀತೆ, ರಾಷ್ಟ್ರಗೀತೆ, ನಿಯಮಗಳನ್ನು ಕಲಿಯಬೇಕಾಗುತ್ತದೆ. ಮುಂದೆ ಶಾಲಾ ಹಂತದಲ್ಲಿ ಪ್ರಥಮ ಸೋಪಾನ ಪರೀಕ್ಷೆ ಆರು ತಿಂಗಳ ನಂತರ ತಾಲೂಕು ಹಂತದ ಧ್ವಿತೀಯ ಸೋಪಾನ ಪರೀಕ್ಷೆ, ನಂತರ ಜಿಲ್ಲಾ ಹಂತದ ತೃತೀಯ ಸೋಪಾನ ಪರೀಕ್ಷೆ, ನಂತರ ರಾಜ್ಯಹಂತದ ರಾಜ್ಯ ಪುರಸ್ಕಾರ್, ಅಂತಿಮವಾಗಿ ರಾಷ್ಟ್ರ ಹಂತದ ರಾಷ್ಟ್ರಪತಿ ಪುರಸ್ಕಾರ್ ಪರೀಕ್ಷೆಗಳು ನಡೆಯುತ್ತವೆ. ಮಗು ಚಳವಳಿಗೆ ಸೇರಿ ೩-೪ ವರ್ಷಗಳಲ್ಲಿ ಇಲ್ಲಿನ ಶಿಕ್ಷಣವನ್ನು ಸಂಪೂರ್ಣವಾಗಿ ಪಡೆಯಬಹುದಾಗಿದೆ. ಪ್ರತಿ ಹಂತದ ಪರೀಕ್ಷೆಯ ಸಿದ್ಧತೆಯ ಮುನ್ನ ಸೈಕ್ಲಿಂಗ್, ಕರಾಟೆ, ಸಮುದಾಯ ಸೇವೆ, ಕಾವ್ಯ ರಚನೆ, ನೃತ್ಯ, ಹಾಡುವುದು, ಟೈಲರಿಂಗ್, ಕುಕ್ಕಿಂಗ್, ರೀಡಿಂಗ್, ಪ್ರಥಮ ಚಿಕಿತ್ಸೆ ಮುಂತಾದ ನಿರ್ಧಿಷ್ಟ ಕೆಲವು ಬ್ಯಾಡ್ಜ್ ಅಥವಾ ಪ್ರಾವಿಣ್ಯತೆಯ ಪದಕಗಳನ್ನು ಗಳಿಸಬೇಕಾಗುತ್ತದೆ. ಇವೆಲ್ಲಾ ನಮ್ಮ ಬದುಕಿನಲ್ಲಿ ಅಗ್ತಯವಿರುವ ಜೀವನ ಕೌಶಲಗಳನ್ನು ಕಲಿಸುತ್ತವೆ ಎಂದರು.ಹಿರಿಯ ಗೈಡರ್ ಎಚ್.ಜಿ.ಕಾಂಚನಮಾಲ ಮಾತನಾಡಿ, ಸಾಮಾನ್ಯವಾಗಿ ಸ್ಕೌಟ್ಸ್ ಗೈಡ್ಸ್ ಪಠ್ಯ ವಿಷಯಗಳನ್ನು ಆಟ ಮತ್ತು ಹಾಡು, ಘರ್ಜನೆ, ಘೋಷಣೆ ಇವುಗಳನ್ನು ಜೊತೆಗೂಡಿಸಿಕೊಂಡು ಕಲಿಸಲಾಗುತ್ತದೆ. ಲಾಠಿ, ಹಗ್ಗ, ಚಾಕು ಇಲ್ಲಿನ ಅಗತ್ಯ ಸಾಮಗ್ರಿಗಳು. ನಾವು ನಿಸರ್ಗದ ಮಧ್ಯದಲ್ಲಿ ಕ್ಯಾಂಪ್ ಮಾಡಿದಾಗ ದಿನವಿಡೀ ಅನೇಕ ಬಗೆಯ ಆಯಾ ಸೋಪಾನಕ್ಕೆ ತಕ್ಕಂತೆ ತರಗತಿಗಳು ನಡೆಯುತ್ತವೆ. ಬೆಳಿಗ್ಗೆ ಹೊರಟು ಸಂಜೆ ಹಿಂತಿರುಗಿ ಬರುವ ಲಘು ಪ್ರವಾಸದ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ಇದನ್ನು ಹೈಕಿಂಗ್ ಎಂಥಲೂ ಕರೆಯುತ್ತೇವೆ ಎಂದರು.

ಈ ಸಂದರ್ಭದಲ್ಲಿ ೪೦ ಶಿಬಿರಾರ್ಥಿಗಳು ಸೇರಿದಂತೆ ಎಸ್. ವಿ. ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಬಿ. ಜಿ. ಗಿರೀಶ್, ಪ್ರಾಂಶುಪಾಲೆ ನಳಿನಾಗಿರೀಶ್, ತಾಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಕಬ್ ಮಾಸ್ಟರ್ ದೇವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.