ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಹ ಪಾಲ್ಗೊಳ್ಳಲು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಸಹಾಯಕಾರಿಯಾಗಿದೆ. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿನಿಯರಿಗೆ ಆತ್ಮಸ್ಥೈರ್ಯ ಬಹಳ ಅಗತ್ಯವಾಗಿದ್ದು, ಸ್ಕೌಟ್ಸ್ ಮತ್ತು ಗೈಡ್ಸ್‌ನಿಂದ ಆತ್ಮಬಲ ಹೆಚ್ಚಳವಾಗುತ್ತದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಸ್. ಎಸ್. ದಳವಾಯಿ ಹೇಳಿದರು.

ನಗರದ ಬಿವಿವಿ ಸಂಘದ ಅಕ್ಕಮಹಾದೇವಿ ಮಹಿಳಾ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್‌ ಅಕ್ಕಮಹಾದೇವಿ ರೇಂಜರ್ ಘಟಕದಿಂದ ನಾಲ್ಕು ದಿನಗಳ ಬೇಸಿಗೆ ಶಿಬಿರದ ಉದ್ಘಾಟಿಸಿ ಮಾತನಾಡಿ, ಅವರು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಲ್ಲಿ ಸತತವಾಗಿ ಭಾಗವಹಿಸುವುದರಿಂದ ಅವರ ಆತ್ಮಬಲ ವೃದ್ಧಿಸಿಕೊಳ್ಳಲು ಈ ಘಟಕ ಸಹಾಯಕವಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಸಂಘಟನಾ ಶಿಕ್ಷಕರಾದ ಎನ್. ಬಿ. ಎಳ್ಳಿಗುತ್ತಿ ಮಾತನಾಡಿ, ರೇಂಜರ್ ವಿದ್ಯಾರ್ಥಿನಿಯರಲ್ಲಿ ನಾಯಕತ್ವ, ಸ್ವಾವಲಂಬನೆ ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬಹುದು. ವಿದ್ಯಾರ್ಥಿನಿಯರು ನಾಲ್ಕು ಗೋಡೆಗಳ ಮಧ್ಯೆ ಕಲಿಕೆಯ ಜೊತೆಗೆ ಹೊರಗಿನ ಸಮಾಜ ಸಂಪರ್ಕದಿಂದಲೂ ಕಲಿಕೆ ಪಡೆಯಬೇಕು. ಈ ಘಟಕ ಅಂತಹ ಕಲಿಕೆಗೆ ಅವಕಾಶ ಕಲ್ಪಿಸುತ್ತಿದ್ದು, ಎಲ್ಲರೂ ಇಂತಹ ಶಿಬಿರಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಬಾಗಲಕೋಟೆ ಜಿಲ್ಲಾ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್‌ ಜಿಲ್ಲಾ ಸಂಘಟಕ ಪಿ ಕೆ. ಚೌಗುಲೆ ಮಾತನಾಡಿ, ಸೇವಾ ಮನೋಭಾವ ಬೆಳೆಸುವ ಈ ಸಂಸ್ಥೆಯ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ತಮ್ಮ ಕೈಲಾದಷ್ಟು ದೇಶಸೇವೆ ಸಲ್ಲಿಸಿ ದೇಶದ ಋಣ ತೀರಿಸಬೇಕು. ಸ್ಕೌಟ್ಸ್ ಮತ್ತು ಗೈಡ್ಸ್‌ ನಲ್ಲಿರುವ ವಿವಿಧ ಅವಕಾಶ ಬಳಸಿಕೊಳ್ಳಬೇಕೆಂದರು.


ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್. ಜೆ. ಒಡೆಯರ್ ಮಾತನಾಡಿ, ಕಲಿಕೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಾಗ ಮಾತ್ರ ಅದು ಪರಿಪೂರ್ಣವಾಗುತ್ತದೆ. ಶಿಬಿರದಲ್ಲಿ ಶಿಸ್ತು ಮತ್ತು ಸ್ಕೌಟ್ಸ್ ಹಾಗೂ ಗೈಡ್ಸ್‌ ನಿಯಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಶಿಬಿರದಲ್ಲಿ ಕಲಿತ ಪಾಠಗಳು ನಿಮ್ಮ ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು. ವಿದ್ಯಾರ್ಥಿನಿಯರು ಮನೆ, ಸಮಾಜ ಹಾಗೂ ದೇಶಕ್ಕೆ ಕೀರ್ತಿ ತರುವಂತಾಗಬೇಕೆಂದರು.

ಕಾರ್ಯಕ್ರಮದಲ್ಲಿ ಸ್ಕೌಟ್ ಗೈಡ್ ಘಟಕದ ರೇಂಜರ್ ಲೀಡರ್ ವಂದನಾ ಸತ್ತಿಗೇರಿ ಹಾಗೂ ಐಕ್ಯೂಎಸಿ ಸಂಯೋಜಕರಾದ ಪಿ.ಕೆ. ಚೌಗುಲಾ ಉಪಸ್ಥಿತರಿದ್ದರು. ರೇಂಜರ್ ವಿದ್ಯಾರ್ಥಿನಿಯಾದ ಕೀರ್ತಿ ಪಾಟೀಲ ಹಾಗೂ ಉಮಾ ಸಾಲಿಮಠ ನಿರೂಪಿಸಿ ವಂದಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.