ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ನೂರಾರು ಹರಿಜನ ಕುಟುಂಬಗಳು ಗಂಜಿಗುಂಟೆ ಗ್ರಾಮದ ರಿಜಿಸ್ಟರ್ ಸರ್ವೇ ನಂ. ೧೦೫ರ ಸರ್ಕಾರಿ ಗೋಮಾಳದ ಪ್ರದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ವಾಸವಿದ್ದು, ಅಲ್ಲಿನ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.ಆ.೭ರಿಂದ ಪ್ರತಿಭಟನೆ ಆರಂಭವಾಗಿದ್ದು, ೮ರಂದು ತಹಸೀಲ್ದಾರ್ ಮತ್ತು ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಭೂಮಾಪನ ಇಲಾಖೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭರವಸೆ ನೀಡಿದ್ದರು. ಆದರೂ ಸಹ ಮುಷ್ಕರ ನಿರತ ಕುಟುಂಬಗಳು ನಿವೇಶನದ ಹಕ್ಕು ಪತ್ರ ನೀಡುವ ತನಕ ಪ್ರತಿಭಟನೆ ಮುಂದುವರೆಸುವುದಾಗಿ ತಿಳಿಸಿದ್ದರು.
ಗಂಜಿಕುಂಟೆ ಗ್ರಾಮದ ಹರಿಜನ ಕುಟುಂಬದವರು ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದ ಬಗ್ಗೆ ಮಾಹಿತಿ ಪಡೆದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಶನಿವಾರ ತಹಸೀಲ್ದಾರ್ ಮತ್ತು ಇಒ ಹಾಗೂ ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಪ್ರಸ್ತುತ ಗ್ರಾಮದಲ್ಲಿರುವ ರಿ.ಸ. ನಂ. ೧೦೫ರ ಸುಮಾರು ಐದು ಎಕರೆ ಭೂಮಿಯನ್ನು ಸರ್ಕಾರ ಈಗಾಗಲೇ ಮಂಜೂರು ಮಾಡಿದ್ದು, ಅಲ್ಲಿನ ನಿವಾಸಿಗಳೊಂದಿಗೆ ಸಮಸ್ಯೆ ತೀರ್ವತೆ ಬಗ್ಗೆ ಚರ್ಚಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಸದರಿ ಜಮೀನಿನಲ್ಲಿ ಕೆಲ ವ್ಯಕ್ತಿಗಳು ಕಳದ ಕೆಲ ವರ್ಷಗಳಿಂದ ಮನೆ ನಿರ್ಮಿಸಿಕೊಂಡಿದ್ದು, ಅದನ್ನು ಹೊರತುಪಡಿಸಿ ಉಳಿದ ಯಾರಾದರು ಒತ್ತುವರಿ ಮಾಡಿಕೊಂಡಿದ್ದಲ್ಲಿ ಕಾನೂನು ಕ್ರಮ ಕೈಗೊಂಡು ತೆರವು ಮಾಡಿಸಬೇಕು. ಆ.೧೨ರ ಸೋಮವಾರದಿಂದ ಆನ್‌ಲೈನ್‌ನಲ್ಲಿ ಅರ್ಜಿ ಪಡೆದು ಪರಿಶೀಲನೆ ನಂತರ ಅರ್ಹರಿಗೆ ಮಾತ್ರ ನಿವೇಶನ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಹಸೀಲ್ದಾರ್ ರೇಹಾನ್‌ಪಾಷ, ತಾಪಂ ಇಒ ಶಶಿಧರ, ಕಂದಾಯಾಧಿಕಾರಿ ತಿಪ್ಪೇಸ್ವಾಮಿ, ಗ್ರಾಮಲೆಕ್ಕಿಗ ಕೇಶವಚಾರಿ, ಪಿಡಿಒ ಶಿವಣ್ಣ ಮುಂತಾದವರು ಉಪಸ್ಥಿತರಿದ್ದರು.