ಕನ್ನಡಪ್ರಭ ವಾರ್ತೆ ಮುಧೋಳರಾಜ್ಯ ಸರ್ಕಾರ ಎಸ್ಇಪಿ ರದ್ದುಗೊಳಿಸಿ, ಎನ್ಇಪಿಯನ್ನು ಒಪ್ಪಿಕೊಂಡು ಜಾರಿಗೆ ತರಬೇಕೆಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ವಿದ್ಯಾರ್ಥಿಗಳ ಪರವಾಗಿ ತಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ರಾಜ್ಯ ಸರ್ಕಾರ ಎಸ್ಇಪಿ ರದ್ದುಗೊಳಿಸಿ, ಎನ್ಇಪಿಯನ್ನು ಒಪ್ಪಿಕೊಂಡು ಜಾರಿಗೆ ತರಬೇಕೆಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ವಿದ್ಯಾರ್ಥಿಗಳ ಪರವಾಗಿ ತಾವು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು.ಶನಿವಾರ ನಗರದ ಬಿಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎಸ್.ಆರ್.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಅಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ ಸಮಗ್ರ ಶಿಕ್ಷಕರ ಶಿಕ್ಷಣ ಯೋಜನೆ (ಐಟಿಇಪಿ) ಬಿಎ, ಬಿ.ಎಡ್ (ಮಿಡಲ್), ಬಿಎಸ್ಸಿ,ಬಿ.ಎಡ್ (ಸೆಕಂಡರಿ) ಶಿಕ್ಷಕರ ತರಬೇತಿ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ದೇಶದಲ್ಲಿ ಒಂದೇ ರೀತಿಯ ಶಿಕ್ಷಣ ಪದ್ಧತಿ ಜಾರಿಗೆ ಬರಲಿ ಎಂಬ ಸದುದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು, ಎನ್ಇಪಿ ಜಾರಿಗೆ ತಂದರು. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಇಲ್ಲಿಯೂ ರಾಜಕೀಯ ಮಾಡುವುದರ ಮೂಲಕ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಒಳಗಾಗುವಂತೆ ಮಾಡಿದ್ದಾರೆ. ರಾಜ್ಯ ಸರ್ಕಾರ ಎಸ್ಇಪಿ ರದ್ದುಪಡಿಸಿ ಎನ್ಇಪಿ ಒಪ್ಪಿಕೊಳ್ಳಬೇಕು. ಎನ್ಇಪಿ ಒಪ್ಪಿಕೊಳ್ಳುವಂತೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಬೇಕು. ಇದರಿಂದ ಅಸಮಾನತೆ ಹೋಗಲಾಡಿಸಲು ಸಾಧ್ಯ ಎಂದರು.ಬಾಗಲಕೋಟ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು, ಬಿವಿವಿ ಸಂಘದಡಿಯಲ್ಲಿ ಪ್ರಸ್ತುತ 190 ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಈ ಸಂಸ್ಥೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಜತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನೀಡಲಾಗುತ್ತದೆ. ಡಾ.ವೀರಣ್ಣ ಚರಂತಿಮಠ ಅವರು ಶಿಸ್ತು, ಸ್ವಚ್ಛತೆ, ದಕ್ಷತೆ ಮತ್ತು ಬದ್ಧತೆಗೆ ಪ್ರಥಮ ಆದ್ಯತೆ ನೀಡುತ್ತಾರೆ. ಅವರು ತಮಗಾಗಿ ಏನನ್ನೂ ಮಾಡಿಕೊಳ್ಳಲಿಲ್ಲ. ಶಿಕ್ಷಣದ ಮೂಲಕ ಸಮಾಜಕ್ಕೆ ದೊಡ್ಡ ಆಸ್ತಿ ಮಾಡಿದ್ದಾರೆ. ಅವರು ಮಾಡಿರುವ ಕಾರ್ಯವು ಸೂರ್ಯಚಂದ್ರರು ಇರುವವರೆಗೂ ಶಾಶ್ವತವಾಗಿರುತ್ತದೆ. ಮುಧೋಳ ತಾಲೂಕಿನಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮೂಲಕ ಈ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದಾರೆ ಎಂದು ಬಣ್ಣಿಸಿದರು.
ಬಾಗಲಕೋಟೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾನು ಮುಧೋಳ ತಾಲೂಕಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಸಂಘದ ಅಡಿ ಸಾಕಷ್ಟು ಶಾಲೆ-ಕಾಲೇಜುಗಳನ್ನು ಆರಂಭಿಸಿದ್ದೇವೆ. 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನಮ್ಮ ಸಂಘದ ಶಾಲೆ-ಕಾಲೇಜುಗಳಲ್ಲಿ ಓದುತ್ತಿದ್ದಾರೆ. ಸಂಸದ ಗೋವಿಂದ ಕಾರಜೋಳ ಅವರು ನಮಗೆ ಪೂರಕವಾಗಿ ಎಲ್ಲ ರೀತಿಯ ಸಹಕಾರ ನೀಡಿರುವುದಕ್ಕೆ ನಾವು ಅವರನ್ನು ಅಭಿನಂದಿಸುತ್ತೇವೆ. ವಿದ್ಯಾರ್ಥಿಗಳು ಐಟಿಇಪಿಯ ಪ್ರಯೋಜನೆ ಪಡೆದುಕೊಳ್ಳಬೇಕೆಂದರು.ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ ಹಾಜರಿದ್ದರು. ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಎಸ್. ಸೂಳಿಭಾವಿ ಸ್ವಾಗತಿಸಿದರು. ಐಟಿಇಪಿ ಸಂಯೋಜಕ ಡಾ.ಎಂ.ಕೆ.ಗವಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯ ಡಾ.ಎಂ.ಆರ್.ಜರಕುಂಟಿ ವಂದಿಸಿದರು. ಉಪನ್ಯಾಸಕರಾದ ಆರ್.ಆರ್.ಮಾಲಿಪಾಟೀಲ ಮತ್ತು ಪಿ.ಡಿ.ಕುಂಬಾರ ನಿರೂಪಿಸಿದರು. ವಿದ್ಯಾರ್ಥಿಗಳು ನಾಡಗೀತೆ, ವಂದೇ ಮಾತರಂ, ರಾಷ್ಟ್ರಗೀತೆ ಹಾಡಿದರು.
ಸಂಘದ ವಿವಿಧ ಶಾಲಾ-ಕಾಲೇಜುಗಳ ಕಾರ್ಯಾಧ್ಯಕ್ಷರು, ಬಿವಿವಿ ಸಂಘದ ಆಡಳಿತ ಮಂಡಳಿಯ ಸದಸ್ಯರು, ಸಂಘದ ವಿವಿಧ ಶಾಲಾ-ಕಾಲೇಜುಗಳ ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.ಭಾರತ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಸಮಗ್ರ ಬದಲಾವಣೆ ತರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು 2020ರಲ್ಲಿ ಕೌಶಲ ಆಧಾರಿತ, ತ್ರಿಭಾಷಾ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಯನ್ನು ಜಾರಿಗೆ ತಂದರು. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ 2020ರಲ್ಲಿ ಕರ್ನಾಟಕ ರಾಜ್ಯದಲ್ಲಿಯೂ ಎನ್ಇಪಿ ಜಾರಿಗೆ ತರಲಾಯಿತು. 2023ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಕೇಂದ್ರದ ಎನ್ಇಪಿಯನ್ನು ತಿರಸ್ಕರಿಸಿ ಎಸ್ಇಪಿ ಅನ್ನು ಜಾರಿಗೆ ತಂದಿದ್ದರಿಂದ 2 ವರ್ಷಗಳವರೆಗೆ ಎನ್ಇಪಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.-ಗೋವಿಂದ ಕಾರಜೋಳ, ಸಂಸದ