ಸುವರ್ಣ ಸೌಧದಲ್ಲಿ ‘ಗಾಡ್ಸ್ ವೈಫ್ಸ್‌, ಮೆನ್ಸ್‌ ಸ್ಲೇವ್ಸ್‌’ ಸಾಕ್ಷ್ಯಚಿತ್ರ ಪ್ರದರ್ಶನ

| Published : Dec 26 2024, 01:00 AM IST

ಸುವರ್ಣ ಸೌಧದಲ್ಲಿ ‘ಗಾಡ್ಸ್ ವೈಫ್ಸ್‌, ಮೆನ್ಸ್‌ ಸ್ಲೇವ್ಸ್‌’ ಸಾಕ್ಷ್ಯಚಿತ್ರ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಈ ಸಾಕ್ಷ್ಯಚಿತ್ರವು ಹಂಪಿ, ತುಮಕೂರು, ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ದೆಹಲಿ ಕನ್ನಡ ಶಾಲೆ ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. ವಿವಿಧ ಪ್ರಶಸ್ತಿಗಳಿಗೂ ಪಾತ್ರವಾಗಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಬೆಳಗಾವಿ ಸುವರ್ಣ ಸೌಧದಲ್ಲಿ ಇತ್ತೀಚೆಗೆ ನಡೆದ ರಾಜ್ಯ ವಿಧಾನಸಭಾ ಅಧಿವೇಶನದ ಅಂಗವಾಗಿ, ಭೋಜನ ವಿರಾಮದ ವೇಳೆಗೆ ಬಾಂಕ್ವೆಟ್ ಹಾಲ್‌ನಲ್ಲಿ ‘ಗಾಡ್ಸ್ ವೈಫ್ಸ್, ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸಂಶೋಧನಾ ವಿದ್ಯಾರ್ಥಿನಿ ಪೂರ್ಣಿಮಾ ರವಿ ನಿರ್ದೇಶನದ ಈ ಸಾಕ್ಷ್ಯಚಿತ್ರವನ್ನು ವಿಧಾನ ಪರಿಷತ್ ಸಭಾಪ ಬಸವರಾಜ ಹೊರಟ್ಟಿ, ಗೃಹ ಸಚಿವ ಡಾ. ಜಿ ಪರಮೇಶ್ವರ, ಶಾಸಕರು, ಅಧಿಕಾರಿಗಳು ವೀಕ್ಷಿಸಿದರು. ಈ ಸಂದರ್ಭ ಮಾತನಾಡಿದ ನಿರ್ದೇಶಕಿ ಪೂರ್ಣಿಮಾ ರವಿ, ಈ ಸಾಕ್ಷ್ಯ ಚಿತ್ರದ ಉದ್ದೇಶ, ದೇವದಾಸಿ ಪದ್ಧತಿ ಬಗ್ಗೆ ಸಮಾಜದ ಕಣ್ಣು ತೆರೆಸುವುದು. ಜೊತೆಗೆ ದೇವದಾಸಿಯರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು ಎಂದರು.

ಸಾಕ್ಷ್ಯ ಚಿತ್ರದ ಬಗ್ಗೆ: ಸಮಾಜವನ್ನು ಕಾಡುತ್ತಿರುವ ಅತಿ ದೊಡ್ಡ ಸಾಮಾಜಿಕ ಸಮಸ್ಯೆಗಳಲ್ಲೊಂದು ದೇವದಾಸಿ ಪದ್ಧತಿ. ರಾಜ್ಯ ಸರ್ಕಾರ ಇದನ್ನು ೧೯೮೨ರಲ್ಲಿ ನಿಷೇಧಿಸಿದ್ದರೂ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಪದ್ಧತಿ ಇಂದಿಗೂ ಜೀವಂತವಾಗಿದೆ ಎಂದು ಮಾಧ್ಯಮ ವರದಿಗಳು ಖಚಿತಪಡಿಸುತ್ತಿವೆ.

ಈ ಪದ್ಧತಿಯ ಬಲಿಪಶುಗಳು ಬಹುತೇಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಹೆಣ್ಣು ಮಕ್ಕಳು. ಒಮ್ಮೆ ದೇವದಾಸಿಯಾದರೆ, ಮತ್ತೆ ಜೀವನಪೂರ್ತಿ ಆ ಮಹಿಳೆಯ ಬದುಕು ಶೋಚನೀಯವಾಗುತ್ತದೆ. ಜೊತೆಗೆ ಅವರ ಮಕ್ಕಳು ಸೇರಿದಂತೆ ಇಡೀ ಕುಟುಂಬ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಈ ಅನಿಷ್ಠ ಪದ್ಧತಿ, ಅದರ ದುಷ್ಪರಿಣಾಮಗಳು, ಅದರ ವಿರುದ್ದ ಸರ್ಕಾರ, ಸಮಾಜ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ನಾನು ಇತ್ತೀಚಿಗೆ ‘ಗಾಡ್ಸ್ ವೈಫ್ಸ್, ಮೆನ್ಸ್ ಸ್ಲೇವ್ಸ್’ ಎಂಬ ಸಾಕ್ಷ್ಯ ಚಿತ್ರವನ್ನು ಪೂರ್ಣಿಮಾ ಅವರು ಪಿಎಚ್ ಡಿ ಅಧ್ಯಯನದ ಅಂಗವಾಗಿ ನಿರ್ದೇಶಿಸಿದ್ದರು.ಈ ಸಾಕ್ಷ್ಯ ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ದೊರೆತಿವೆ. ರಾಜ್ಯ-ಹೊರ ರಾಜ್ಯಗಳ ವಿಶ್ವವಿದ್ಯಾಲಯಗಳಲ್ಲಿ ಈ ಸಾಕ್ಷ್ಯ ಚಿತ್ರ ಪ್ರದರ್ಶಿಸಲ್ಪಟ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಾಕ್ಷ್ಯಚಿತ್ರವು 40ಕ್ಕೂ ಹೆಚ್ಚು ದೇವದಾಸಿಯರ ವೈಯಕ್ತಿಕ ಕಥೆಗಳನ್ನು ಹೇಳುತ್ತದೆ.

ಈ ಸಾಕ್ಷ್ಯಚಿತ್ರವು ಹಂಪಿ, ತುಮಕೂರು, ಮಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ದೆಹಲಿ ಕನ್ನಡ ಶಾಲೆ ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಪ್ರದರ್ಶಿಸಲ್ಪಟ್ಟಿದೆ. ವಿವಿಧ ಪ್ರಶಸ್ತಿಗಳಿಗೂ ಪಾತ್ರವಾಗಿದೆ.