ಎಸ್ಸಿಎಸ್ಪಿ-ಟಿಎಸ್ಪಿ ಹಣ ಗ್ಯಾರಂಟಿಗೆ ಬಳಕೆ: 8ರಂದು ಪ್ರತಿಭಟನೆ

| Published : Aug 02 2025, 12:00 AM IST

ಸಾರಾಂಶ

ದಲಿತ ಸಮುದಾಯಗಳ ಕಲ್ಯಾಣಕ್ಕೆಂದು ಮೀಸಲಾಗಿರುವ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಬುಡಕಟ್ಟು ಉಪಯೋಜನೆಯ (ಟಿಎಸ್‌ಪಿ) ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದು, ಅದರ ವಿರುದ್ಧ ಬಳ್ಳಾರಿಯಲ್ಲಿ ಆ. 8ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಹೇಳಿದರು.

ಬಳ್ಳಾರಿ: ದಲಿತ ಸಮುದಾಯಗಳ ಕಲ್ಯಾಣಕ್ಕೆಂದು ಮೀಸಲಾಗಿರುವ ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಹಾಗೂ ಬುಡಕಟ್ಟು ಉಪಯೋಜನೆಯ (ಟಿಎಸ್‌ಪಿ) ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದು, ಈ ಮೂಲಕ ದಲಿತ ಸಮುದಾಯಗಳಿಗೆ ದೊಡ್ಡ ಅನ್ಯಾಯ ಎಸಗುತ್ತಿದ್ದಾರೆ ಎಂದು ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಆಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಸಿ-ಎಸ್‌ಟಿ ನಿಗಮಗಳಿಗೆ ಸರ್ಕಾರದಿಂದ ಅನುದಾನ ನೀಡುತ್ತಿಲ್ಲ. ಇದೇ ನಿಗಮಗಳ ಕೋಟ್ಯಂತರ ಹಣ ಕೊಳ್ಳೆ ಹೊಡೆಯಲಾಗಿದೆ. ದಲಿತರ ಕಲ್ಯಾಣಕ್ಕಾಗಿ ಯಾವ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸದ ಮುಖ್ಯಮಂತ್ರಿ ಅಹಿಂದ ನಾಯಕ ಎಂದು ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ಧರಾಮಯ್ಯ ಅವರ ಧೋರಣೆ ಖಂಡಿಸಿ ಶಾಸಕ ಜನಾರ್ದನ ರೆಡ್ಡಿ, ಬಿ. ಶ್ರೀರಾಮುಲು ಅವರ ನೇತೃತ್ವದಲ್ಲಿ ಬಳ್ಳಾರಿಯಲ್ಲಿ ಆ. 8ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಸಂಡೂರು ಉಪ ಚುನಾವಣೆ ನಡೆದ ಆರೇಳು ತಿಂಗಳ ಬಳಿಕ ನನ್ನ ಮೇಲೆ ಹಾಗೂ ಜನಾರ್ದನ ರೆಡ್ಡಿ ಅವರ ಮೇಲೆ

ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ. ಚುನಾವಣೆ ವೇಳೆ ಸ್ವಾಮಿಹಳ್ಳಿ ದೇವಸ್ಥಾನದಲ್ಲಿ ಭಾಷಣ ಮಾಡಿದ್ದಾಗಿ ನನ್ನ ಮೇಲೆ ಕೇಸ್ ಹಾಕಲಾಗಿದೆ. ಆದರೆ, ಅದೇ ದೇವಸ್ಥಾನದ ಕಟ್ಟೆಯ ಮೇಲೆ ಸಂಸದ ಈ. ತುಕಾರಾಂ ಹಾಗೂ ಅನ್ನಪೂರ್ಣಾ ತುಕಾರಾಂ ಅವರು ಭಾಷಣ ಮಾಡಿದ್ದರೂ ಪ್ರಕರಣ ದಾಖಲಿಸಿಲ್ಲ ಎಂದು ದೂರಿದರಲ್ಲದೆ, ಚುನಾವಣೆಯಲ್ಲಿ ಎಸ್‌ಟಿ ನಿಗಮ ಹಣ ಬಳಸಿಲ್ಲ ಎಂದು ಸಂತೋಷ್‌ ಲಾಡ್ ಹಾಗೂ ತುಕಾರಾಂ ಅವರು ಸಂಡೂರು ಕುಮಾರಸ್ವಾಮಿ ದೇವಸ್ಥಾನದಲ್ಲಿ ಆಣೆ ಮಾಡಲಿ, ನಾನು ಆಣೆ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.

ಶ್ರೀರಾಮುಲು ಬರುವ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಂಗಾರು ಹನುಮಂತು, ಎರಡನೇ ದರ್ಜೆ ನಾಯಕರಿಗೆ ಅವಕಾಶ ಸಿಗುವಂತಾಗಬೇಕು. ಪಕ್ಷ ಎಲ್ಲರಿಗೂ ಅವಕಾಶ ನೀಡುತ್ತದೆ. ಎಲ್ಲರಿಗೂ ಅವಕಾಶ ಸಿಗಬೇಕು ಎಂದು ಪ್ರತಿಕ್ರಿಯಿಸಿದರು.