ಸಾರಾಂಶ
ಕೊಪ್ಪಳದ ಪ್ರಕಾಶ ಶಿಲ್ಪಿ, ಈಗಾಗಲೇ ನಿತ್ಯವೊಂದರಂತೆ ಆಂಜನೇಯನ ಮೂರ್ತಿ ಕೆತ್ತುತ್ತಾರೆ. ಇಂದಿಗೆ ಬರೋಬ್ಬರಿ 6606 ಮೂರ್ತಿ ಕೆತ್ತಿದ್ದಾರೆ. ಇದಲ್ಲದೆ ಅಕ್ಕಿ ಗಾತ್ರಿದಲ್ಲಿ ಗಾಂಧೀಜಿ, ಕಲ್ಲಿನಲ್ಲಿ ಕೊಳಲು, ಗಿಣಿಯ ಪಂಜರ ಕೆತ್ತಿದ ಹಿರಿಮೆ ಇವರದು.
ಸೋಮರಡ್ಡಿ ಅಳವಂಡಿ
ಕೊಪ್ಪಳ:ಕಲ್ಲಿನಲ್ಲಿ ಕೊಳಲು, ನಿತ್ಯವೊಂದು ಆಂಜನೇಯ ಮೂರ್ತಿ ಕೆತ್ತುವ ಪ್ರಕಾಶ ಶಿಲ್ಪಿ ಈ ಬಾರಿ ಕೇವಲ ಅಕ್ಕಿ ಗಾತ್ರದ ಕಲ್ಲಿನಲ್ಲಿ ಶಿವಲಿಂಗ ಕೆತ್ತಿದ್ದಾರೆ.
ನಗರದ ಶಿಲ್ಪಿಯಾಗಿರುವ ಇವರು, ಈಗಾಗಲೇ ನಿತ್ಯವೊಂದರಂತೆ ಆಂಜನೇಯನ ಮೂರ್ತಿ ಕೆತ್ತುತ್ತಾರೆ. ಇಂದಿಗೆ ಬರೋಬ್ಬರಿ 6606 ಮೂರ್ತಿ ಕೆತ್ತಿದ್ದಾರೆ. ಇದಲ್ಲದೆ ಅಕ್ಕಿ ಗಾತ್ರಿದಲ್ಲಿ ಗಾಂಧೀಜಿ, ಕಲ್ಲಿನಲ್ಲಿ ಕೊಳಲು, ಗಿಣಿಯ ಪಂಜರ ಕೆತ್ತಿದ ಹಿರಿಮೆ ಪ್ರಕಾಶ ಅವರದು.ಈಗ, ಮಹಾಶಿವರಾತ್ರಿಯ ನಿಮಿತ್ತ ಅಕ್ಕಿ ಗಾತ್ರದಲ್ಲಿಯೇ ಶಿವಲಿಂಗ ಕೆತ್ತನೆ ಮಾಡಿದ್ದಾರೆ. ಅಕ್ಕಿಯ ಮೇಲೆ ಹೆಸರು ಬರೆಯುವುದೇ ದೊಡ್ಡ ಸಾಹಸ ಎನ್ನುತ್ತಿರುವಾಗ ಇವರು ಅಕ್ಕಿಗಾತ್ರದ ಶಿವಲಿಂಗ ಶಿಲೆ ಕೆತ್ತಿ ಸೈ ಎನಿಸಿಕೊಂಡಿದ್ದಾರೆ.
ಕೃಷ್ಣ ಶಿಲೆ:ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಕೆತ್ತಿದ ಕೃಷ್ಣ ಶಿಲೆಯಲ್ಲಿಯೇ ಅಕ್ಕಿಗಾತ್ರದ ಶಿವಲಿಂಗ ಕೆತ್ತಲಾಗಿದೆ. ಇದಕ್ಕಾಗಿ ಸುಮಾರು ಎರಡುವರೆ ಗಂಟೆ ಮಡಿಯಿಂದ ಕೆತ್ತನೇ ಮಾಡಿದ್ದಾರೆ. ಬೆಳಗ್ಗೆಯೇ ಆಂಜನೇಯನ ಮೂರ್ತಿ ಕೆತ್ತಿದ ಅವರು, ಮಹಾಶಿವರಾತ್ರಿಯ ನಿಮಿತ್ತ ಶಿವಲಿಂಗ ಯಾಕೆ ಅಕ್ಕಿಯ ಗಾತ್ರದಲ್ಲಿ ಕೆತ್ತಬಾರದು ಎಂದು ಚಿಂತಿಸಿದ್ದಾರೆ. ಆಂಜನೇಯನ ಸ್ಮರಿಸಿ ಕೆತ್ತನೆಗೆ ಕುಳಿತು, ಮುಗಿಸಿದ್ದಾರೆ.
ಬೃಹದಾಕಾರದ ಶಿವಲಿಂಗಗಳು ಇವೆ. ಆದರೆ, ಎಲ್ಲಿಯೂ ಸಹ ಅಕ್ಕಿಯ ಗಾತ್ರದ ಶಿವಲಿಂಗ ಇಲ್ಲ. ಅದನ್ನು ಯಾಕೆ ಮಾಡಬಾರದು ಎಂದು ಯೋಚಿಸಿದಾಗ ಬಾಗಲಕೋಟೆಯಿಂದ ಕೃಷ್ಣ ಶಿಲೆ ತಂದಿದ್ದ ಕಲ್ಲಿನಲ್ಲಿಯೇ ಈಗ ಶಿವಲಿಂಗ ಕೆತ್ತನೇ ಮಾಡಿದ್ದಾರೆ.ಸೂಕ್ಷ್ಮ ಕೆಲಸ:
ಬೃಹತ್ ಕಲ್ಲಿನಲ್ಲಿ ಕೆತ್ತುವುದು ಸುಲಭ. ಆದರೆ, ಕೇವಲ ಅಕ್ಕಿ ಗಾತ್ರದ ಕಲ್ಲಿನ ಶಿವಲಿಂಗ ಕೆತ್ತುವುದು ಅತ್ಯಂತ ಸೂಕ್ಷ್ಮ ಕೆಲಸವಾಗಿದೆ. ಆದರೂ ಕೆತ್ತಿರುವ ಶಿವಲಿಂಗ ಅತ್ಯಂತ ಸುಂದರವಾಗಿ ಮೂಡಿಬಂದಿದೆ. ಅತ್ಯಂತ ಆಕರ್ಷಕವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.ವಿಶೇಷ ಶಿಲ್ಪಿ:
ಪ್ರಕಾಶ ಅವರು ಕೊಪ್ಪಳದ ವಿಶೇಷ ಶಿಲ್ಪಿಯಾಗಿದ್ದಾರೆ. ಸದಾ ಒಂದಿಲ್ಲೊಂದು ವಿಶೇಷತೆ ಮೆರೆಯುತ್ತಲೇ ಇರುತ್ತಾರೆ. ಈಗಾಗಲೇ ಹಲವಾರು ವೈವಿಧ್ಯೆತೆಯುಳ್ಳ ಕೆತ್ತನೆ ಮೂಲಕ ಹೆಸರು ಮಾಡಿರುವ ಇವರು ಈ ಬಾರಿ ಅಕ್ಕಿ ಗಾತ್ರದ ಕಲ್ಲಿನಲ್ಲಿ ಶಿವಲಿಂಗ ಕೆತ್ತನೆ ಮಾಡಿರುವುದು ವಿಶೇಷವಾಗಿದೆ.ಬೃಹದಾಕಾರದ ಶಿವಲಿಂಗ ನೋಡಿದ್ದೇವೆ. ಆದರೆ, ಅಕ್ಕಿ ಗಾತ್ರದ ಶಿವಲಿಂಗವನ್ನು ಎಲ್ಲಿಯೂ ನೋಡಿಲ್ಲ. ಹೀಗಾಗಿ, ಮಹಾಶಿವರಾತ್ರಿಯ ನಿಮಿತ್ತ ಮಾಡಿದ ಪ್ರಯತ್ನ ಕೈಗೂಡಿದ್ದು, ಶಿವಲಿಂಗ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಪ್ರಕಾಶ ಶಿಲ್ಪಿ ಹೇಳಿದರು.