ಸಾರಾಂಶ
ಲಕ್ಷ್ಮೇಶ್ವರದಲ್ಲಿ ಜಕಣಾಚಾರಿ ಸಂಸ್ಮರಣೋತ್ಸವ ಕಾರ್ಯಕ್ರಮ
ಲಕ್ಷ್ಮೇಶ್ವರ: ನಮ್ಮ ದೇಶದ ಇತಿಹಾಸದಲ್ಲಿ ಹೆಸರು ಮಾಡಿರುವ ಪುರಾತನ ದೇವಾಲಯಗಳ ನಿರ್ಮಾಣದಲ್ಲಿ ಎದ್ದು ಕಾಣುವ ಹೆಸರು ಶಿಲ್ಪಿ ಜಕಣಾಚಾರಿ ಅವರದ್ದು ಎಂದರೆ ಅತಿಶಯೋಕ್ತಿಯಲ್ಲ ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ನಡೆದ ಅಮರಶಿಲ್ಪಿ ಜಕಣಾಚಾರಿ ಅವರ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಅಮರಶಿಲ್ಪಿ ಜಕಣಾಚಾರಿ ನಿರ್ಮಿಸಿದ ಹೆಸರಾಂತ ದೇವಾಲಯಗಳು ನಮ್ಮ ನಾಡಿನ ಇತಿಹಾಸಕ್ಕೆ ನೀಡಿದ ಮಹಾನ್ ಕೊಡುಗೆಗಳಾಗಿವೆ. ಕಲೆ ಮತ್ತು ಸಂಸ್ಕೃತಿಗೆ ಅವರು ನೀಡಿದ ಕೊಡುಗೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಬೇಲೂರು ಹಳೆಬೀಡು, ತಂಜಾವೂರಿನ ಬೃಹದೇಶ್ವರ ದೇವಾಲಯ ಸೇರಿದಂತೆ ಅಜೆಂತಾ ಎಲ್ಲೋರಾ ದೇವಾಲಯಗಳ ನಿರ್ಮಾಣದಲ್ಲಿ ಜಕಣಾಚಾರಿ ಅವರ ಹೆಸರು ಪ್ರಮುಖವಾಗಿ ಕಂಡು ಬರುತ್ತಿದೆ. ಆದ್ದರಿಂದ ನಮ್ಮ ನಾಡಿನ ಕಲೆಯ ದೇವತಾಪುರುಷ ಎಂದರೆ ತಪ್ಪಾಗಲಾರದು ಎಂದು ಹೇಳಿದರು. ಈ ವೇಳೆ ವಿಶ್ವಕರ್ಮ ಸಮಾಜದ ಅಧ್ಯಕ್ಷ ಈರಣ್ಣ ಬಡಿಗೇರ ಮಾತನಾಡಿ, ಜಕಣಾಚಾರಿ ಅವರು ಕಲೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಜ. 1ರಂದು ಅವರ ಸಂಸ್ಮರಣಾ ದಿನ ಆಚರಿಸುತ್ತಿರುವುದು ನಮಗೆಲ್ಲ ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದರು. ಇದೇ ವೇಳೆ ತಾಲೂಕು ವಿಶ್ವಕರ್ಮ ಸಮಾಜವು ಈ ವರ್ಷ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿಯನ್ನು ಲಕ್ಷ್ಮೇಶ್ವರ ಸಮೀಪದ ಶಿಗ್ಲಿ ಗ್ರಾಮದ ಶಿಲ್ಪಿ ಚಂದ್ರಾಚಾರ್ಯ ಪತ್ತಾರ ಅವರಿಗೆ ನೀಡಿ ಗೌರವಿಸಲಾಯಿತು. ಈ ವೇಳೆ ಈರಪ್ಪ ಬಡಿಗೇರ, ಭಾಸ್ಕರ ಸೊರಟೂರ, ಹೂವಪ್ಪ ಸೊರಟೂರ, ಮೋಹನ್ ಸುತಾರ, ಚಂದ್ರಶೇಖರ ಶಿಂಗಟಾಲೂರ, ಮೌನೇಶ ಬಾಲೆಹೊಸೂರ, ಶಿವಾನಂದ ಬಡಿಗೇರ, ಮಕರಂದ ಹುಲಬಜಾರ್, ಅಶೋಕ ಸೊರಟೂರ, ಗಂಗಾಧರ ಬಾಲೆಹೊಸೂರ, ದೇವರಾಜ ಬಡಿಗೇರ, ಜಯಣ್ಣ ಗೊರಗೌಕರ್ ನಾರಾಯಣ ಪತ್ತಾರ, ಚಂದ್ರು ಪತ್ತಾರ, ರಮೇಶ ಯತ್ತಿನಹಳ್ಳಿ, ರಮೇಶ ಯತ್ನಹಳ್ಳಿ, ರವಿ ಬಡಿಗೇರ ಇದ್ದರು.