belthangady, health, government, state, doctor,
ಬೆಳ್ತಂಗಡಿ: ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯರನ್ನು ಪ್ರತಿನಿಧಿಸುವ ವೃತ್ತಿಪರ ಸಂಸ್ಥೆಯಾದ ಭಾರತದ ಪ್ರಸೂತಿ ಮತ್ತು ಸ್ವತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ಸಂಸ್ಥೆಯಿಂದ ಸುರಕ್ಷಿತ ಹೆರಿಗೆಯನ್ನು ಖಾತರಿಪಡಿಸುವ ಗುಣ ಮಟ್ಟದ ಮಾನದಂಡ ಅನುಸರಿಸುತ್ತಿರುವ ಉಜಿರೆ ಎಸ್‌ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗೆ ಸತತ 2ನೇ ಬಾರಿ ಮಾನ್ಯತಾ ಪ್ರಮಾಣಪತ್ರ ದೊರೆತಿದೆ.ಆಸ್ಪತ್ರೆಯ ಪ್ರಸೂತಿ ವಿಭಾಗದ ಸಿಬ್ಬಂದಿ ವೈದ್ಯರ ಅನುಪಸ್ಥಿಯಲ್ಲಿ ತುರ್ತು ಸಂದರ್ಭ ಗರ್ಭಿಣಿಯ ಸುರಕ್ಷಿತ ಆರೈಕೆ ಮಾಡಲು ಇಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಸ್ವರ್ಣಲತಾ ಮತ್ತು ಡಾ. ಪ್ರಿಯಾಂಕ ಜಯದೇವ್, ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಅವರಿಂದ ವಿಶೇಷ ತರಬೇತಿ ಪಡೆದುಕೊಂಡಿದ್ದು, ಭಾರತದ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಗಳ ಒಕ್ಕೂಟ ನಡೆಸುವ ಪರೀಕ್ಷೆಯಲ್ಲಿ 20ರಲ್ಲಿ 19 ಅಂಕ ಪಡೆಯುವ ಮೂಲಕ ಮಾನ್ಯತಾ ಪ್ರಮಾಣಪತ್ರ ಪಡೆದು ಕೊಂಡಿದೆ.ಗರ್ಭಿಣಿ, ಬಾಣಂತಿ ಹಾಗೂ ಮಗುವಿನ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಆಸ್ಪತ್ರೆಗಳಿಗೆ ಪ್ರಮಾಣಪತ್ರ ನೀಡಲಾಗುತ್ತಿದೆ. ಮಾನ್ಯತಾ ಪ್ರಮಾಣಪತ್ರ ದೊರೆತ ಕರ್ನಾಟಕದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಒಂದಾಗಿದೆ.ಸತತ 2ನೇ ಬಾರಿ ಮಾನ್ಯತಾ ಪತ್ರ ಪಡೆಯುವಲ್ಲಿ ಯಶಸ್ವಿ ಯಾದ ಪ್ರಸೂತಿ ವಿಭಾಗದ ಸಿಬ್ಬಂದಿ ಮತ್ತು ನರ್ಸಿಂಗ್ ಅಧೀಕ್ಷಕಿ ಶೆರ್ಲಿ ಅವರ ಕಾರ್ಯವನ್ನು ಡಾ. ಡಿ. ವೀರೇಂದ್ರ ಹೆಗ್ಗಡೆ, ಡಾ.ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಶ್ಲಾಘಿ ಸಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದ್ದಾರೆ.ಮುಂಬೈಯ ಇಂಡ್ ಕೆಮಿ ಹೆಲ್ತ್ ಸ್ಪೆಷಾಲಿಟಿ ಪೈ ಲಿ. ಪ್ರಾದೇಶಿಕ ವ್ಯವಸ್ಥಾಪಕ ನರಸಿಂಹಮೂರ್ತಿ ಎನ್. ಮಾನ್ಯತಾ ಪತ್ರ ಹಸ್ತಾಂತರಿಸಿದರು.ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸ್ವರ್ಣಲತಾ ಮತ್ತು ಡಾ. ಪ್ರಿಯಾಂಕ ಜಯದೇವ್, ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರ ಕುಮಾರ್ ಪಿ., ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಪ್ರಸೂತಿ ವಿಭಾಗದ ನರ್ಸಿಂಗ್ ಸಿಬ್ಬಂದಿ ಮರಿಯಮ್ಮ ಚಾಕೋ ಮತ್ತು ಸೆಲೆಸ್ಟಿನ್ ಜ್ಯೋತಿ ಇದ್ದರು.