ಸಿಯೋನ್ ಆಶ್ರಮಕ್ಕೆ ಎಸ್‌ಡಿಎಂ ರೆಡ್ ಕ್ರಾಸ್ ವಿದ್ಯಾರ್ಥಿಗಳು ಭೇಟಿ

| Published : Dec 17 2024, 01:01 AM IST

ಸಿಯೋನ್ ಆಶ್ರಮಕ್ಕೆ ಎಸ್‌ಡಿಎಂ ರೆಡ್ ಕ್ರಾಸ್ ವಿದ್ಯಾರ್ಥಿಗಳು ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಿಯೋನ್ ಆಶ್ರಮವನ್ನು ಡಾ. ಯು.ಸಿ. ಪಾಲೋಸ್ 1999ರಲ್ಲಿ ಸ್ಥಾಪಿಸಿದ್ದರು. ಈ ಆಶ್ರಮವು ಮಾನಸಿಕ ಅಸ್ವಸ್ಥರಿಗೆ, ಬುದ್ಧಿಮಾಂದ್ಯರಿಗೆ, ವೃದ್ಧರಿಗೆ, ವಿಧವೆಯರಿಗೆ, ದೈಹಿಕ ವಿಕಜಲಚೇತನರಿಗೆ ವಸತಿ ಮತ್ತು ಪುನರ್ವಸತಿ ಕೇಂದ್ರವಾಗಿದೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಜೂನಿಯರ್ ರೆಡ್ ಕ್ರಾಸ್ ವಿದ್ಯಾರ್ಥಿಗಳು ಗಂಡಿಬಾಗಿಲಿನ ಸಿಯೋನ್ ಆಶ್ರಮಕ್ಕೆ ಭೇಟಿ ನೀಡಿದರು.ಸಿಯೋನ್ ಆಶ್ರಮವನ್ನು ಡಾ. ಯು.ಸಿ. ಪಾಲೋಸ್ 1999ರಲ್ಲಿ ಸ್ಥಾಪಿಸಿದ್ದರು. ಈ ಆಶ್ರಮವು ಮಾನಸಿಕ ಅಸ್ವಸ್ಥರಿಗೆ, ಬುದ್ಧಿಮಾಂದ್ಯರಿಗೆ, ವೃದ್ಧರಿಗೆ, ವಿಧವೆಯರಿಗೆ, ದೈಹಿಕ ವಿಕಜಲಚೇತನರಿಗೆ ವಸತಿ ಮತ್ತು ಪುನರ್ವಸತಿ ಕೇಂದ್ರವಾಗಿದೆ.

ಜೂನಿಯರ್ ರೆಡ್ ಕ್ರಾಸ್ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಬೆಳೆಸುವುದು ಮತ್ತು ಸಾಮಾಜಿಕ ಕಾರ್ಯಗಳ ಬಗ್ಗೆ ಮೌಲ್ಯಯುತವಾದ ಪ್ರಾಯೋಗಿಕ ಒಳನೋಟಗಳನ್ನು ಒದಗಿಸುವುದು ಮತ್ತು ಸೇವಾ ಕಾರ್ಯದಲ್ಲಿ ಸಕ್ರಿಯವಾಗಿ ಕೊಡುಗೆ ನೀಡುವಂತೆ ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.ಈ ಸಂದರ್ಭದಲ್ಲಿ ಮಾತನಾಡಿದ ಆಶ್ರಮದ ಸ್ಥಾಪಕ ಡಾ. ಯು.ಸಿ. ಪಾಲೋಸ್, ನಮಗೂ ಎಸ್‌ಡಿಎಂ ಕಾಲೇಜಿಗೂ ಒಂದು ನಂಟಿದೆ. ನಮ್ಮ ಎಲ್ಲ ಕಾರ್ಯಗಳಿಗೂ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವೈದ್ಯಾಧಿಕಾರಿ ಡಾ.ಶಿವಾನಂದ ಸ್ವಾಮಿ ಮಾತನಾಡಿ, ಮನುಷ್ಯನ ಮಾನಸಿಕ ಅಸಮತೋಲನಕ್ಕೆ ಮನುಷ್ಯನ ದುರಾಸೆಯೇ ಕಾರಣ. ಇಲ್ಲಿಗೆ ನೀವು ಭೇಟಿ ನೀಡಿದ ನಂತರ ಖಂಡಿತ ನಿಮ್ಮಲ್ಲಿ ನಿಮ್ಮ ಹಿರಿಯರನ್ನು ಹೇಗೆ ಪ್ರೀತಿ ಗೌರವದಿಂದ ಅವರ ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕೆಂದು ಅರಿವು ಮೂಡುತ್ತದೆ ಎಂದರು.

ಯೋಜನಾಧಿಕಾರಿಯದ ಕವನಶ್ರೀ ಮಾತನಾಡಿ, ತಾವು ವಿದ್ಯಾರ್ಥಿನಿಯಾಗಿದ್ದಾಗ ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭವನ್ನು ನೆನಪಿಸಿಕೊಂಡು, ಪಾಲೋಸ್ ದಂಪತಿ ಸುಮಾರು 358 ವಿವಿಧ ಸಮಸ್ಯೆಗಳಿಂದ ಬಳಲುವವರಿಗೆ ಆಶ್ರಯ ಕೊಟ್ಟಿರುವುದು ಶ್ಲಾಘನೀಯ ಎಂದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿಮ್ಮ ಇಷ್ಟು ಜನರಲ್ಲಿ ಯಾರಾದರೂ ಒಬ್ಬರು ಈ ಕಾರ್ಯಕ್ರಮದಿಂದ ಪ್ರೇರಿತರಾಗಿ ಮತ್ತೊಬ್ಬ ಪಾಲೋಸ್ ಆದರೆ ನಮ್ಮ ಈ ಕಾರ್ಯಕ್ರಮದ ಉದ್ದೇಶ ಸಾರ್ಥಕ ಎಂದು ಹೇಳಿದರು. ಸಿಯೋನ್ ಆಶ್ರಮದ ಸಾಮಾಜಿಕ ಕಾರ್ಯಕರ್ತೆ ಸಿಂಧು, ಆಶ್ರಮದ ಇತಿಹಾಸ ಮತ್ತು ಸಮುದಾಯಕ್ಕೆ ಒದಗಿಸುವ ವ್ಯಾಪಕ ಶ್ರೇಣಿಯ ಸೇವೆಗಳ ವಿವರವಾದ ಅವಲೋಕನವನ್ನು ಹಂಚಿಕೊಂಡರು.ಈ ಸಂದರ್ಭ ಆಶ್ರಮದ ವಾಸಿಗಳಿಗೆ ಜೂನಿಯರ್ ರೆಡ್ ಕ್ರಾಸ್‌ನ ವಿದ್ಯಾರ್ಥಿಗಳು ಮನೋರಂಜನ ಕಾರ್ಯಕ್ರಮವನ್ನು ನೀಡಿದರು ಮತ್ತು ಅಲ್ಲಿನ ವಾಸಿಗಳೊಂದಿಗೆ ಮಾತನಾಡಿ ಅವರ ಕಥೆಗಳನ್ನು ಕೇಳಿ ಸಾಂತ್ವಾನ ನೀಡಿದರು.ಜೂನಿಯರ್ ರೆಡ್ ಕ್ರಾಸ್‌ನ ಸದಸ್ಯ ಸಾತ್ವಿಕ್ ಕಾರ್ಯಕ್ರಮ ನಿರೂಪಿಸಿದರು. ಜೂನಿಯರ್ ರೆಡ್ ಕ್ರಾಸ್‌ನ ಯೋಜನಾಧಿಕಾರಿ ಅರ್ಚನಾ ಎಸ್.ಎ., ಮೇರಿ ಪಾಲೋಸ್ ಮತ್ತು ಆಶ್ರಮದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.