ಕನಕಪುರ: ದಾವಣಗೆರೆ ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತಗಳು ಕಡಿಮೆ ಬರಲು ಎಸ್‌ಡಿಪಿಐ ಸ್ಪರ್ಧೆ ಕಾರಣವಾಗಿದ್ದು ಈ ಬಗ್ಗೆ ಪಕ್ಷದೊಳಗೆ ಚರ್ಚಿಸಿ ಮುಂದೆ ಎಚ್ಚರಿಕೆ ವಹಿಸಲಾಗುವುದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಹಾಗೂ ನಾನು ಸೇರಿದಂತೆ ನಮ್ಮ ಪಕ್ಷದ ಎಲ್ಲಾ ನಾಯಕರ ಕಾರ್ಯತಂತ್ರ ಹಾಗೂ ಕಾರ್ಯಕರ್ತರ ಪರಿಶ್ರಮದಿಂದ ಎರಡು ಕ್ಷೇತ್ರದಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಗೆ ಮತ್ತಷ್ಟು ಮತಗಳ ನಿರೀಕ್ಷೆಯಿದ್ದು ನಮ್ಮ ನಿರೀಕ್ಷೆಗೆ ತಕ್ಕಂತೆ ಮತ ಬೀಳದಿರುವುದಕ್ಕೆ ಹಲವು ಕಾರಣಗಳಿವೆ. ನಮ್ಮ ಪಕ್ಷದ ಸಾಂಪ್ರದಾಯಿಕ ಮತಗಳು ಎಸ್‌ಡಿಪಿಐ ಅಭ್ಯರ್ಥಿಗೆ ಶಿಫ್ಟ್ ಆಗಿರುವುದು ಫಲಿತಾಂಶದ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಮುಂದೆ ಜಾಗೃತಿ ವಹಿಸಿ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅಭೂತಪೂರ್ವ ಜಯಗಳಿಸಿದ್ದು ವಿಜಯ್ ಬಗ್ಗೆ ತಾನು ನೀಡಿದ್ದ ಹೇಳಿಕೆಗೆ ಉತ್ತರಿಸಿ ವಿಜಯ್ ಗೆ ಇನ್ನೂ ರಾಜಕೀಯ ಅನುಭವ ಇಲ್ಲ ಅಂತ ಹೇಳಿದ್ದೆ. ಯಾಕಂದ್ರೆ ಅವರು ಒರಿಜಿನಲ್ ಕಾಂಗ್ರೆಸ್ ಪಕ್ಷದ ಸಹಕಾರ ನಮಗಿದೆ ಅಂತ ಹೇಳಿದ್ದರು. ನಮ್ಮ ಪಕ್ಷದಲ್ಲಿ ಒರಿಜಿನಲ್, ಡೂಪ್ಲಿಕೇಟ್ ಇಲ್ಲ, ಒಂದೇ ಕಾಂಗ್ರೆಸ್ ಪಕ್ಷ ಅಂತ ಹೇಳಿದ್ದೆ. ಚುನಾವಣೆ ಸಮಯದಲ್ಲಿ ನಾವು ಒಂದು ಪಕ್ಷದ ಜೊತೆ ಮೈತ್ರಿ ಆಗಿ ಇನ್ನೊಂದು ಪಕ್ಷಕ್ಕೆ ಹೇಗೆ ಬೆಂಬಲ ಮಾಡೋದು ಅಂತ ಹೇಳಿದ್ದು ಬಿಟ್ಟರೆ, ಇದರಲ್ಲಿ ಯಾವುದೇ ದುರುದ್ದೇಶದಿಂದ ಅಲ್ಲ. ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಕಾಂಗ್ರೆಸ್ ಸಹಕಾರ ನೀಡುವ ವಿಚಾರಕ್ಕೆ ನಮ್ಮ ಹೈಕಮಾಂಡ್ ಈ ಬಗ್ಗೆ ಏನು ತೀರ್ಮಾನ ತೆಗೆದುಕೊಳ್ಳುತ್ತದೊ ಕಾದು ನೋಡಬೇಕು ಎಂದರು.ಡಿಕೆಶಿ ಪ್ರಚಾರಕ್ಕೆ ಹೋದ ಕಡೆಯೆಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲು ಎಂದು ಬಿಜೆಪಿ ಪಕ್ಷದ ನಾಯಕರು ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿ ನಾಯಕರು ಹೋಗಿದ್ದ ದಾವಣಗೆರೆಯಲ್ಲಿ ಯಾಕೆ ಬಿಜೆಪಿಗೆ ಸೋಲಾಯಿತು, ಏನೋ ಬಾಯಿ ಚಪಲಕ್ಕೆ ಅವರು ಮಾತನಾಡುತ್ತಾರೆ, ಟೀಕೆ ಮಾಡುವವರು ಮಾಡಲಿ ಬಿಡಿ ಎಂದರು.
ಕೆ ಕೆ ಪಿ ಸುದ್ದಿ 01:ಕನಕಪುರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಗಾರರೊಂದಿಗೆ ಮಾತನಾಡಿದರು.