ಮುಫ್ತಿ ಸಲ್ಮಾನ್ ಸೆರೆಗೆ ಎಸ್‌ಡಿಪಿಐ ಆಕ್ರೋಶ

| Published : Feb 11 2024, 01:48 AM IST

ಸಾರಾಂಶ

ಮುಸ್ಲಿಂ ಧರ್ಮಗುರು ಮುಫ್ತಿ ಸಲ್ಮಾನ್ ಅಝಾರಿ ಬಂಧನ ಹಾಗೂ ಜ್ಞಾನವಾಪಿ ಮಸೀದಿಯನ್ನು ಕಸಿಯಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿ ಎಸ್.ಡಿಪಿಐ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಮುಸ್ಲಿಂ ಧರ್ಮಗುರು ಮುಫ್ತಿ ಸಲ್ಮಾನ್ ಅಝಾರಿಯವರನ್ನು ಮುಂಬಯಿಯಲ್ಲಿ ಬಂಧಿಸಿರುವುದನ್ನು ವಿರೋಧಿಸಿ ಎಸ್.ಡಿಪಿಐ ಕಾರ್ಯಕರ್ತರು ಒನಕೆ ಓಬವ್ವ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್.ಡಿಪಿಐ ಜಿಲ್ಲಾಧ್ಯಕ್ಷ ಬಾಳೆಕಾಯಿ ಶ್ರೀನಿವಾಸ್ ಯಾವುದೇ ಧರ್ಮಕ್ಕೆ ಅವಮಾನವಾಗುವ ರೀತಿಯಲ್ಲಿ ಮುಫ್ತಿ ಸಲ್ಮಾನ್ ಅಝಾರಿ ಮಾತನಾಡಿಲ್ಲವಾದರೂ ವಿನಾ ಕಾರಣ ಬಂಧಿಸಲಾಗಿದೆ. ಕೂಡಲೆ ಬಿಡುಗಡೆಗೊಳಿಸದಿದ್ದರೆ ಎಸ್.ಡಿಪಿಐ ನಿಂದ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.

ಮುಸಲ್ಮಾನರು, ದಲಿತರು, ಶೋಷಿತರನ್ನು ಆಳುವ ಸರ್ಕಾರಗಳು ಕಡೆಗಣಿಸುತ್ತಿವೆ. ಚಿತ್ರದುರ್ಗದಲ್ಲಿ ಬಿಜೆಪಿಯನ್ನು ದೂರವಿಡಬೇಕೆಂದು ಕಾಂಗ್ರೆಸ್‍ನ್ನು ಗೆಲ್ಲಿಸಿದ್ದೇವೆಯೇ ವಿನಃ ಪಕ್ಷದ ಮೇಲಿನ ಆಸೆಯಿಂದಲ್ಲ. ಮುಸಲ್ಮಾನರು, ದಲಿತರ ಮತಗಳನ್ನು ಪಡೆದು ಗೆದ್ದಿರುವ ಚಿತ್ರದುರ್ಗದ ಶಾಸಕರು ಯಾರ ಕೈಗೂ ಸಿಗುತ್ತಿಲ್ಲ. ಕಣ್ಣಿಗೂ ಕಾಣಿಸುತ್ತಿಲ್ಲ. ಇದರಿಂದ ನಾವುಗಳು ಪಾಠ ಕಲಿತಂತಾಗಿದೆ. ಧರ್ಮಗುರು ಮುಫ್ತಿ ಸಲ್ಮಾನ ಅಝಾರಿರವರ ಸಂದೇಶಗಳು ಜೀವನಕ್ಕೆ ದಾರಿ ತೋರಿಸುವಂತಿದೆ. ಕಾರಣವಿಲ್ಲದೆ ಅವರನ್ನು ಬಂಧಿಸಿರುವುದು ದೇಶದಲ್ಲಿನ ಶಾಂತಿಗೆ ಭಂಗವಾದಂತಿದೆ. ಅದಕ್ಕಾಗಿ ನಾವುಗಳು ಜೈಲ್ ಭರೋ ಚಳುವಳಿಗೂ ಸಿದ್ದರಿದ್ದೇವೆಂದರು.

ಕೇಂದ್ರ ಬಿಜೆಪಿ ಸರ್ಕಾರ ಜ್ಞಾನವಾಪಿ ಮಸೀದಿಯನ್ನು ಕಸಿಯುವ ಷಡ್ಯಂತ ನಡೆಸುತ್ತಿದೆ. ಬಾಬ್ರಿ ಮಸೀದಿ ಬಿಟ್ಟುಕೊಟ್ಟಿದ್ದಾಯಿತು. ಈಗ ಜ್ಞಾನವಾಪಿ ಮಸೀದಿಯನ್ನು ಬಿಟ್ಟುಕೊಡುವುದಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದವರು ಮುಸ್ಲಿಂರನ್ನು ಎರಡನೆ ದರ್ಜೆಯ ಪ್ರಜೆಗಳನ್ನಾಗಿ ನೋಡುವ ಹುನ್ನಾರ ನಡೆಸುತ್ತ ಮುಸ್ಲಿಂರ ಸಾಂಸ್ಕøತಿಕ ಗುರುತುಗಳನ್ನು ಅಳಿಸಿ ಹಾಕುವ ಮಸಲತ್ತು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರಮೋದಿ ಸರ್ಕಾರ ಸಿಕ್ಕಿರುವ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮುಸ್ಲಿಂರ ಮೇಲೆ ಗಧಾ ಪ್ರಹಾರ ನಡೆಸುತ್ತಿದೆ. ಡಾ.ಬಿ.ಆರ್ ಅಂಬೇಡ್ಕರ್ ರವರ ಸಂವಿಧಾನದಡಿ ಎಲ್ಲಾ ಜಾತಿ ಧರ್ಮದವರು ಸಮಾನವಾಗಿ ಬದುಕುವ ಹಕ್ಕಿದೆ ಎನ್ನುವುದನ್ನು ಕೋಮುವಾದಿ ಬಿಜೆಪಿಯವರು ಅರ್ಥಮಾಡಿಕೊಳ್ಳಬೇಕೆಂದು ಬಾಳೆಕಾಯಿ ಶ್ರೀನಿವಾಸ್ ಹೇಳಿದರು.

ಎಸ್.ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲೀಂ, ಕಾರ್ಯದರ್ಶಿ ಜಾಕೀರ್ ಹುಸೇನ್, ತಾಲೂಕು ಕಾರ್ಯದರ್ಶಿ ಜಾಫರ್, ತಾಲೂಕು ಅಧ್ಯಕ್ಷ ಯಾಸಿನ್ ಹುಸೇನ್ ಸೇರಿದಂತೆ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.