ಬಸ್ ಪ್ರಯಾಣದರ ಸೇರಿದಂತೆ ಅಗತ್ಯವಸ್ತುಗಳ ಬೆಲೆಯೇರಿಕೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಸ್ ಪ್ರಯಾಣದರ ಸೇರಿದಂತೆ ಅಗತ್ಯವಸ್ತುಗಳ ಬೆಲೆಯೇರಿಕೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಮುಂಭಾಗ ಜಮಾವಣೆಗೊಂಡ ಎಸ್ಡಿಪಿಐ ಕಾರ್ಯಕರ್ತರು, ಪದಾಧಿಕಾರಿಗಳು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ, ಬೆಲೆಯೇರಿಕೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನ.೧ರಂದು ಹಾಲು ಸೇರಿದಂತೆ ಹಾಲಿನ ಉತ್ಪನ್ನಗಳಾದ ಮೊಸರು, ತುಪ್ಪ, ಬೆಣ್ಣೆದರ ಏರಿಕೆ ಮಾಡಿ, ಬಡವರು, ಮಧ್ಯಮ ವರ್ಗದವರ ಬದುಕನ್ನು ದುಸ್ತರಗೊಳಿಸಲಾಗಿದೆ. ಗಾಯದ ಮೇಲೆ ಬರೆಎಳೆದಂತೆ ಕಳೆದ ಮೂರು ದಿನಗಳಿಂದ ಸಾರಿಗೆ ಬಸ್ ಪ್ರಯಾಣ ದರವನ್ನು ಶೇ ೧೦ರಿಂದ ಶೇ ೨೦ರಷ್ಟು ಏರಿಸಿ, ಪುರುಷ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ ಎಂದು ದೂರಿದರು.ಕಾಂಗ್ರೆಸ್ ಪಕ್ಷ ಹೇಗಾದರೂ ಮಾಡಿ, ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಗ್ಯಾರಂಟಿಗಳ ಹೆಸರಲ್ಲಿ ಜನರನ್ನು ಯಾಮಾರಿಸುವ ಕೆಲಸ ಮಾಡಿ, ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ತರುವಾಯದಿಂದಲೂ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆಯೇರಿಕೆಯಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ಬಸ್ ಪ್ರಯಾಣದರ ಸೇರಿದಂತೆ ಅಗತ್ಯವಸ್ತುಗಳ ಬೆಲೆಯೇರಿಕೆ ವಾಪಸ್ ಪಡೆಯಬೇಕು. ಜನಸಾಮಾನ್ಯರ ಬದುಕನ್ನು ಹಸನುಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮದ್, ಜಿಲ್ಲಾಧ್ಯಕ್ಷ ಖಲೀಲ್ಉಲ್ಲಾ, ಸಿ.ಕೆ.ನಯಾಜ್ ಉಲ್ಲಾ, ಜಬೀಉಲ್ಲಾ, ನಸ್ರುಲ್ಲಾ, ಮಹಮದ್ ಅಮಿಕ್, ಎಂ.ಮಹೇಶ್, ಇರ್ಪಾನ್ ಪಾಷಾ, ಜಾವಿದ್ ಪಾಷಾ, ಬಂಗಾರಸ್ವಾಮಿ, ಪಿ.ಸಂಘಸೇನಾ ಕಾರ್ಯಕರ್ತರು ಭಾಗವಹಿಸಿದ್ದರು.