ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಿಎಎ ವಿರೋಧಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಸುಲ್ತಾನ್ ಷರೀಪ್ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಸಿಎಎ ವಿರೋಧಿಸಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಬ್ರಹಾರ್ ಅಹಮದ್, ಸಿಎಎ ಕೇವಲ ಮುಸ್ಲಿಂ ವಿರೋಧಿ ನೀತಿಯಲ್ಲ. ದಲಿತರು, ಆದಿವಾಸಿಗಳು ಮತ್ತು ಕಡು ಬಡವರ ಪೌರತ್ವ ಮತ್ತು ಮತದಾನದ ಹಕ್ಕು ಕಸಿಯುವ ಕಾಯಿದೆಯಾಗಿದೆ ಎಂದು ಆರೋಪಿಸಿದರು.
ಧರ್ಮದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು ಎಂದು ನಮ್ಮ ಸಂವಿಧಾನದ ಬದಲಾವಣೆಗೆ ಅವಕಾಶವಿಲ್ಲದ ಮೂಲ ಆಶಯದಲ್ಲಿ ನಮೂದಿಸಲಾಗಿದೆ.
ಆದರೂ ಫ್ಯಾಸಿಸ್ಟ್ ಮನಸ್ಥಿತಿಯ ಬಿಜೆಪಿ ತನ್ನ ಸೈದ್ಧಾಂತಿಕ ಗುರು ಆರ್ ಎಸ್‌ಎಸ್ ಅಣತಿಯ ಮೇರೆಗೆ ಸಿಎಎ ಕರಾಳ ಕಾಯಿದೆಯನ್ನು ಜಾರಿಗೆ ತಂದಿದ್ದು, ಇದು ಸಂಪೂರ್ಣ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಕಾಯಿದೆಯಾಗಿದೆ ಎಂದರು.
2019 ರಲ್ಲಿ ಈ ಮಾನವ ವಿರೋಧಿ, ತಾರತಮ್ಯದ ಕಾಯಿದೆಯನ್ನು ಜಾರಿ ಮಾಡಲು ಮೋದಿ ಸರ್ಕಾರ ಹೊರಟಾಗ ಇಡೀ ದೇಶದಲ್ಲಿ ಇದರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ, ಪ್ರತಿರೋಧ ಎದುರಾಯಿತು.
ಇದು ಮುಸ್ಲಿಮರಿಗೆ ಸಂಬಂಧಪಟ್ಟ ವಿಚಾರ ಎಂದು ಬಿಂಬಿಸಿ ಆ ಮೂಲಕ ದೇಶದ ಇತರೆ ಸಮುದಾಯದ ಪ್ರಜೆಗಳನ್ನು ಈ ಪ್ರತಿಭಟನೆಗಳಿಂದ ದೂರ ಇಡುವ ಸಂಚನ್ನು ಅಂದು ಬಿಜೆಪಿ ಮಾಡಿತ್ತು ಎಂದರು.
ಅಂದು. ಎಲ್ಲಾ ಧರ್ಮೀಯರ ಒಗ್ಗಟ್ಟಿನ ಪ್ರತಿರೋಧಕ್ಕೆ ತತ್ತರಿಸಿದ ಸರ್ಕಾರ ಅಂದು ಇದರ ಅನುಷ್ಠಾನವನ್ನು ಮುಂದೂಡುವ ಅನಿವಾರ್ಯತೆಗೆ ಸಿಲುಕಿತು. 2020 ರಲ್ಲಿ ಕೋವಿಡ್ ಎಂಬ ಸಾಂಕ್ರಾಮಿಕ ಕಾಯಿಲೆ ದೇಶಕ್ಕೆ ಪ್ರವೇಶ ಪಡೆಯಿತು.
ಇದನ್ನೇ ಬಳಸಿಕೊಂಡ ಸರ್ಕಾರ ಲಾಕ್‌ಡೌನ್ ನೆಪದಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಿತು, 2024 ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಧರ್ಮದ ಆಧಾರದ ಮೇಲೆ ಮತಗಳನ್ನು ಒಡೆಯಲು ಸಿಎಎ ಜಾರಿ ಮಾಡಿದೆ ಎಂದರು.
ಪೌರತ್ವ ನಿರೂಪಿಸಲು ಸರ್ಕಾರ ಕೇಳುತ್ತಿರುವ ಕಾಗದ ಪತ್ರಗಳು ಸಾಕಷ್ಟು ದಲಿತರು, ಆದಿವಾಸಿಗಳು ಮತ್ತು ಕಡು ಬಡವರಲ್ಲಿಯೂ ಲಭ್ಯವಿಲ್ಲ. ಈ ಮೂಲಕ ದಲಿತರು, ಆದಿವಾಸಿಗಳು ಮತ್ತು ಕಡುಬಡವರನ್ನು ಪೌರತ್ವ ವಿಚಾರದಲ್ಲಿ ಅನಗತ್ಯ ತೊಂದರೆ ನೀಡುವುದು ಸರ್ಕಾರದ ದುರುದ್ದೇಶ ಎಂದರು.
ಮೂಲ ನಿವಾಸಿಗಳ ಮೇಲೆ ಅಕ್ರಮ ವಲಸಿಗರು ಎಂಬ ಮುದ್ರೆಯನ್ನುಒತ್ತಿ ಅವರನ್ನು ದೇಶದ ಭಿನ್ನ ಪ್ರಜೆಗಳು ಎಂಬಂತೆ ಬಿಂಬಿಸಲು ಸರ್ಕಾರ ಈ ಸಂವಿಧಾನ ವಿರೋಧಿ ಕರಾಳ ಕಾನೂನನ್ನು ತಂದಿದೆ.
ತಕ್ಷಣ ಕೇಂದ್ರ ಸರ್ಕಾರ ಈ ಸಂವಿಧಾನ ವಿರೋಧಿ ಕಾಯಿದೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಎಸ್‌ಡಿಪಿಐ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅರೀಪ್, ಪ್ರದಾನ ಕಾರ್ಯದರ್ಶಿ ಮಹೇಶ್, ರಂಗಕರ್ಮಿ ಕೆ. ವೆಂಕಟರಾಜು, ಮುಖಂಡರಾದ ಸಂಘಸೇನಾ, ಬಂಗಾರಸ್ವಾಮಿ, ಜಮೀನೂರ್, ಸೈಯದ್ ಇರ್ಫಾನ್,.ರಫಿ, ನಸ್ರುಲ್ಲಾ, ಅಪ್ಸರ್ ಪಾಷ, ಮಹಮದ್ ಅಮೀಕ್ ಇತರರು ಭಾಗವಹಿಸಿದ್ದರು.