2018ರಲ್ಲಿ ಮೊದಲ ಬಾರಿಗೆ ಆರಂಭವಾದ ‘ಸೀ ವಿಜಿಲ್’ ಸಮರಾಭ್ಯಾಸವು ಇದೀಗ ರಾಷ್ಟ್ರೀಯ ಮಟ್ಟದ ಪ್ರಮುಖ ಕರಾವಳಿ ಭದ್ರತಾ ಉಪಕ್ರಮವಾಗಿ ಬೆಳೆದಿದೆ.

ಕಾರವಾರ: ಭಾರತದ ಕರಾವಳಿ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಸೀ ವಿಜಿಲ್-2026’ ರಾಷ್ಟ್ರೀಯ ಮಟ್ಟದ ಕರಾವಳಿ ರಕ್ಷಣಾ ಸಮರಾಭ್ಯಾಸದಲ್ಲಿ ಭಾರತೀಯ ನೌಕಾಪಡೆ ಭಾಗವಹಿಸಲಿದೆ.

ಭಾರತೀಯ ಕೋಸ್ಟ್ ಗಾರ್ಡ್, ಕಸ್ಟಮ್ಸ್, ಕರಾವಳಿ ಪೊಲೀಸ್, ರಾಜ್ಯ ಆಡಳಿತ ಹಾಗೂ ಇತರ ಕಡಲ ಭದ್ರತಾ ಪಾಲುದಾರರ ಸಮನ್ವಯದಲ್ಲಿ ಈ ಸಮರಾಭ್ಯಾಸ ನಡೆಯಲಿದೆ. 2018ರಲ್ಲಿ ಮೊದಲ ಬಾರಿಗೆ ಆರಂಭವಾದ ‘ಸೀ ವಿಜಿಲ್’ ಸಮರಾಭ್ಯಾಸವು ಇದೀಗ ರಾಷ್ಟ್ರೀಯ ಮಟ್ಟದ ಪ್ರಮುಖ ಕರಾವಳಿ ಭದ್ರತಾ ಉಪಕ್ರಮವಾಗಿ ಬೆಳೆದಿದೆ. 2026ರಲ್ಲಿ ನಡೆಯಲಿರುವ ಈ ಕಾರ್ಯಾಚರಣೆಯು ಎರಡು ವರ್ಷಗಳಿಗೊಮ್ಮೆ ನಡೆಯುವ ಸಮರಾಭ್ಯಾಸದ 5ನೇ ಆವೃತ್ತಿಯಾಗಿದೆ. ವಿವಿಧ ಭದ್ರತಾ ಸಂಸ್ಥೆಗಳ ನಡುವಿನ ಸಮನ್ವಯ ಹಾಗೂ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸುವ ಮೂಲಕ ದೇಶದ ಕಡಲ ಗಡಿಗಳ ರಕ್ಷಣೆಗೆ ಒತ್ತು ನೀಡುವುದು ಇದರ ಉದ್ದೇಶವಾಗಿದೆ.ಭಾರತೀಯ ನೌಕಾಪಡೆ, ಕೋಸ್ಟ್ ಗಾರ್ಡ್, ಕಸ್ಟಮ್ಸ್, ರಾಜ್ಯ ಸರ್ಕಾರಿ ಇಲಾಖೆಗಳು ಹಾಗೂ ಬಂದರು ಪ್ರಾಧಿಕಾರಗಳ ನಡುವೆ ಪರಸ್ಪರ ತಿಳಿವಳಿಕೆ ಮತ್ತು ಹೊಂದಾಣಿಕೆಯನ್ನು ಬಲಪಡಿಸುವುದು ಸಮರಾಭ್ಯಾಸದ ಪ್ರಮುಖ ಗುರಿಯಾಗಿದೆ. ಈಗಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನಗಳ ಮೌಲ್ಯಮಾಪನ, ಭದ್ರತಾ ಸಿದ್ಧತೆಗಳ ಪರಿಶೀಲನೆ, ಸಂವಹನ ವ್ಯವಸ್ಥೆಯ ಬಲವರ್ಧನೆ ಹಾಗೂ ಕಡಲ ಭದ್ರತಾ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೆಚ್ಚಿಸುವ ಕಾರ್ಯಗಳು ಈ ಅಭ್ಯಾಸದ ಭಾಗವಾಗಿವೆ.ಈ ಬಾರಿಯ ಸಮರಾಭ್ಯಾಸದಲ್ಲಿ ಸ್ಥಳೀಯ ಮೀನುಗಾರ ಸಮುದಾಯದ ಪಾಲ್ಗೊಳ್ಳುವಿಕೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಮೀನುಗಾರರನ್ನು ಕರಾವಳಿ ಭದ್ರತೆಯ ಪ್ರಮುಖ ಪಾಲುದಾರರನ್ನಾಗಿ ಗುರುತಿಸಿ, ಅವರಲ್ಲಿ ಜಾಗೃತಿ ಮೂಡಿಸುವ ಮೂಲಕ ಕರಾವಳಿ ಭದ್ರತಾ ವ್ಯವಸ್ಥೆಯಲ್ಲಿ ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಕರಾವಳಿ ಪ್ರದೇಶಗಳ ಜನರಲ್ಲಿ ಸುರಕ್ಷತೆಯ ಕುರಿತು ವಿಶ್ವಾಸ ಮೂಡಿಸುವುದಕ್ಕೂ ಈ ಉಪಕ್ರಮ ಸಹಕಾರಿಯಾಗಲಿದೆ.ಸಮಗ್ರ ಕರಾವಳಿ ಭದ್ರತಾ ವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಎಲ್ಲ ಕಡಲ ಮತ್ತು ಕರಾವಳಿ ಭದ್ರತಾ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸಲು ಕರ್ನಾಟಕ ನೇವಲ್ ಏರಿಯಾ ಬದ್ಧವಾಗಿದೆ. ನಿರಂತರ ಕಣ್ಗಾವಲು, ಪರಸ್ಪರ ಸಹಕಾರ ಹಾಗೂ ಕಾರ್ಯಾಚರಣೆಯ ಸನ್ನದ್ಧತೆಯ ಮೂಲಕ ದೇಶದ ಕರಾವಳಿ ಮತ್ತು ಕಡಲ ಸಂಪತ್ತಿನ ರಕ್ಷಣೆಗೆ ‘ಸೀ ವಿಜಿಲ್-2026’ ಮತ್ತಷ್ಟು ಬಲ ನೀಡಲಿದೆ.