ಹಾವೇರಿ: ಬಿರು ಬೇಸಿಗೆಯಿಂದ ಜಿಲ್ಲೆಯಲ್ಲಿ ಜಲ ಮೂಲಗಳು ಬತ್ತುತ್ತಿವೆ. ಆದರೆ, ಹೀಗೆ ಬರಿದಾಗಿರುವುದೇ ಕೆಲವು ಕುಟುಂಬಗಳಿಗೆ ವರವಾಗಿದೆ. ಜಿಲ್ಲೆಯ ವರದಾ ನದಿಯ ಗುಂಡಿಯಲ್ಲಿ ನಿಂತಿರುವ ನೀರಿನಲ್ಲಿ ಶಿವಮೊಗ್ಗ ಮೂಲದ ಕೆಲವು ಕುಟುಂಬಗಳು ಚಿನ್ನಕ್ಕಾಗಿ ಹುಡುಕಾಟ ನಡೆಸಿರುವುದು ಕಂಡು ಬಂದಿದೆ. ನದಿಯ ಅಲ್ಲಲ್ಲಿ ಸಂಗ್ರಹವಾಗಿರುವ ನೀರಿನ ಮರಳು ಮಿಶ್ರಿತ ಮಣ್ಣಿನಲ್ಲಿ ಬಂಗಾರದ ಕಣಗಳನ್ನು ಶಿವಮೊಗ್ಗ ಮೂಲದ ಇರ್ಲರ್ ಸಮುದಾಯದ ಕುಟುಂಬಗಳು ಹೆಕ್ಕುತ್ತಿವೆ. ಮಹಿಳೆಯರು ಸೇರಿದಂತೆ ಈ ಕುಟುಂಬಗಳ ಹತ್ತಾರು ಜನರು ನದಿಗೆ ಬಂದು ಚಿನ್ನಕ್ಕಾಗಿ ಬೇಟೆ ಆರಂಭಿಸಿದ್ದಾರೆ. ನದಿ ತುಂಬಿ ಹರಿಯುವ ಕಾಲದಲ್ಲಿ ಕಾಣಿಸದಿರುವ ಮರಳು, ಕಪ್ಪು ಮಣ್ಣು ಈಗ ಸುಲಭವಾಗಿ ಕಾಣುತ್ತದೆ. ನೀರು ಬತ್ತುತ್ತಿರುವುದರಿಂದ ಕಬ್ಬಿಣದ ಬುಟ್ಟಿಯಲ್ಲಿ ಮರಳು ಎತ್ತಿ ಈ ಕುಟುಂಬಗಳು ದಿನವಿಡೀ ಚಿನ್ನದ ಶೋಧಕ್ಕೆ ಮುಂದಾಗಿವೆ. ಬಂಗಾರದ ಬೆಲೆ ಗಗನಮುಖಿಯಾಗಿರುವ ಈ ಸಂದರ್ಭದಲ್ಲಿ ನದಿಯ ತೀರದಲ್ಲಿ ಗೋಲ್ಡ್ ಪ್ಯಾನಿಂಗ್ ಜೋರಾಗಿದೆ. ನೀರು ಕಡಿಮೆಯಾಗುತ್ತಿದ್ದಂತೆ ನದಿಯ ತೀರದಲ್ಲಿ, ನದಿಯ ಮಧ್ಯಭಾಗದ ಒಣ ಹಾಸಿನಲ್ಲಿ, ಮರಳಿನ ಕೆಳಗಿನ ಕಪ್ಪು ಮಣ್ಣಿನಲ್ಲಿ ಚಿನ್ನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಇವರ ಕೈಯಲ್ಲಿ ಜಾಲಿ, ಪಾತ್ರೆ, ಸಣ್ಣ ಉಪಕರಣಗಳ ಮೂಲಕ ನದಿಯ ಮರಳನ್ನು ತೊಳೆಯುತ್ತಾ, ಮಣ್ಣು ಬೇರ್ಪಡಿಸಿ ಕೊನೆಯಲ್ಲಿ ಉಳಿಯುವ ಆ ಭಾರವಾದ ಬಂಗಾರದ ಕಣಗಳನ್ನು ಹುಡುಕುತ್ತಿದ್ದಾರೆ. ಈ ಕೆಲಸಕ್ಕೆ ವಿಶೇಷ ವಿಧಾನವಿದ್ದು, ಮೊದಲು ನದಿಯ ತಳದಿಂದ ಮರಳು ಮತ್ತು ಕಪ್ಪು ಮಣ್ಣನ್ನು ತೆಗೆದು ಒಂದು ಪಾತ್ರೆಯಲ್ಲಿ ಹಾಕುತ್ತಾರೆ. ನಂತರ ನೀರು ಸುರಿದು, ಪಾತ್ರೆಯನ್ನ ನಿಧಾನವಾಗಿ ಅಲೆಯುತ್ತಾ, ಹಗುರವಾದ ಮರಳು, ಮಣ್ಣು ಹೊರಗೆ ಹೋಗುವಂತೆ ಮಾಡಿ ತಳದಲ್ಲಿ ಭಾರವಾದ ಕಣಗಳು ಮಾತ್ರ ಉಳಿಯುತ್ತವೆ. ಆ ತಳದಲ್ಲಿ ಉಳಿಯುವ ಕಪ್ಪು ಮಣ್ಣಿನ ನಡುವೆ ಕೆಲವೊಮ್ಮೆ ಸಣ್ಣ ಬಂಗಾರದ ಕಣಗಳು ಮಿನುಗುತ್ತವೆ. ಅವನ್ನು ಗುರುತಿಸಿ ಶೇಖರಿಸುವುದೇ ಇವರ ಕಾಯಕವಾಗಿದೆ. ದಿನಪೂರ್ತಿ ಸುಡುವ ಬಿಸಿಲಿನಲ್ಲಿ, ನೀರಿನೊಳಗೆ ನಿಂತುಕೊಂಡೇ ಕೆಲಸ ಮಾಡಬೇಕು. ಇರ್ಲರ್ ಸಮುದಾಯದ ಈ ಕುಟುಂಬಗಳು ಪೀಳಿಗೆಗಳಿಂದ ಇದೇ ರೀತಿಯ ಕೆಲಸ ಮಾಡುತ್ತಾ ಬಂದಿವೆ. ನದಿಯ ಹರಿವು, ಮಣ್ಣು, ಯಾವ ಭಾಗದಲ್ಲಿ ಬಂಗಾರದ ಕಣ ಸಿಗಬಹುದು ಅನ್ನುವುದರ ಬಗ್ಗೆ ಅವರಿಗೆ ಅರಿವಿದೆ. ಆದರೂ ಇವರಿಗೆ ಪ್ರತಿದಿನದ ಹುಡುಕಾಟ ಒಂದು ಜೂಜಿನಂತಾಗಿಯೇ ಇರುತ್ತದೆ. ಕೆಲವೊಮ್ಮೆ ಸಣ್ಣ ಕಣ ಸಿಕ್ಕರೆ, ಕೆಲವು ಸಲ ಏನೂ ಸಿಗದೇ ಬರಿಗೈಲಿ ವಾಪಸಾಗುತ್ತಾರೆ. ಆದರೂ ಇವರು ತಮ್ಮ ಬಂಗಾರ ಹುಡುಕುವ ಕಾಯಕ ಬಿಡುವುದಿಲ್ಲ. ಬರಿದಾಗುತ್ತಿರುವ ನದಿಯಲ್ಲಿ ಬಂಗಾರಕ್ಕಾಗಿ ಹುಡುಕಾಟ ನಡೆಸಿರುವ ಇವರನ್ನು ನೋಡಿ ಸ್ಥಳೀಯರು ಆಶ್ಚರ್ಯದಿಂದ ನೋಡುತ್ತಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ನದಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುತ್ತದೆ. ಈ ವೇಳೆ ನದಿಗೆ ಇಳಿದು ದಿನವಿಡಿ ಶ್ರಮಪಟ್ಟು ಬಂಗಾರದ ಕಣಗಳ ಹುಡುಕಾಟ ನಡೆಸಲಾಗುತ್ತಿದೆ. ಕೆಲವೊಮ್ಮೆ ಬಂಗಾರದ ಕಣಗಳು ಸಿಕ್ಕರೇ, ಕೆಲವೊಮ್ಮೆ ದಿನವಿಡಿ ಶ್ರಮಕ್ಕೆ ಫಲ ಸಿಗದೇ ನಿರಾಸೆ ಅನುಭವಿಸುತ್ತೇವೆ. ಮಳೆಗಾಲದ ತನಕ ಅಲ್ಲಲ್ಲಿ ಬಂಗಾರದ ಕಣಕ್ಕಾಗಿ ನಮ್ಮ ಕುಟುಂಬ ಶೋಧಕಾರ್ಯ ನಡೆಸುತ್ತದೆ ಬಂಗಾರ ಕಣಕ್ಕಾಗಿ ಶೋಧ ನಡೆಸುತ್ತಿರುವ ನಾಗಣ್ಣ ಹೇಳಿದರು.
ಬರಿದಾಗಿರುವ ವರದಾ ನದಿಯಲ್ಲಿ ಚಿನ್ನದ ಹುಡುಕಾಟ
ಹಾವೇರಿ ಜಿಲ್ಲೆಯ ವರದಾ ನದಿಯಲ್ಲಿ ಬಂಗಾರದ ಕಣಗಳ ಹುಡುಕಾಟ ನಡೆಸಿರುವ ಶಿವಮೊಗ್ಗ ಮೂಲದ ಇರ್ಲರ್ ಸಮುದಾಯದವರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.