ರಾಮನಗರ: ಈಗಲ್ ಟನ್ ರೆಸಾರ್ಟ್‌ನ ವಿಲ್ಲಾದಲ್ಲಿ ನಡೆದಿದ್ದ ವೃದ್ಧ ದಂಪತಿ ರಘುರಾಜನ್ ಮತ್ತು ಆಶಾರವರ ಕೊಲೆ ಪ್ರಕರಣದ 2ನೇ ಆರೋಪಿಯನ್ನು ನಾಲ್ಕು ವರ್ಷಗಳ ಬಳಿಕ ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರ ರಾಜ್ಯ ಬಂಕಾ ಜಿಲ್ಲೆಯ ಜಿತ್ತಿಯಜೋರ್ ಗ್ರಾದ ರವಿಕುಮಾರ್ ಯಾದವ್ ಅಲಿಯಾಸ್ ರವಿ ಯಾದವ್ (29) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಕೊಲೆ ನಡೆದಿದ್ದ ಮರು ದಿನವೇ (2022ರ ಫೆ.9) ಜೋಗೀಂದರ್ ಯಾದವ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.ಘಟನೆ ವಿವರ :
ಇಂಡಿಯನ್ ಏರ್ ಫೋರ್ಸ್ ನಲ್ಲಿ ವಿಂಗ್ ಕಮಾಂಡರ್ ಆಗಿದ್ದ ರಘುರಾಜನ್ ಸೇವೆಯಿಂದ ನಿವೃತ್ತಿಯಾದ ನಂತರ ಪತ್ನಿ ಆಶಾ ಅವರೊಂದಿಗೆ ಈಗಲ್ ಟನ್ ರೆಸಾರ್ಟ್‌ನ ವಿಲ್ಲಾದ ಸಿ - 21 ಬಂಗ್ಲೆಯಲ್ಲಿ ವಾಸವಿದ್ದರು. ಅಲ್ಲದೆ, ಹೊಸ ಮನೆಯನ್ನೂ ಕಟ್ಟಿಸುತ್ತಿದ್ದರು.ಈ ದಂಪತಿ ಪುತ್ರ ಮತ್ತು ಪುತ್ರಿ ದೆಹಲಿಯಲ್ಲಿ ಉದ್ಯೋಗದಲ್ಲಿದ್ದ ಕಾರಣ ಇವರಿಬ್ಬರೇ ಮನೆಯಲ್ಲಿದ್ದರು. ಮನೆಗೆಲಸ ಹಾಗೂ ನಾಯಿ ಸಾಕಲು ಬಿಹಾರ ಮೂಲದ ಜೋಗೀಂದರ್ ಯಾದವ್ ನನ್ನು ನಿಯೋಜಿಸಿಕೊಂಡಿದ್ದರು. ಜೋಗೀಂದರ್ ತನ್ನ ಪತ್ನಿ ಮಗುವಿನೊಂದಿಗೆ ಸಿಬ್ಬಂದಿಗಾಗಿ ಇರುವ ವಸತಿ ಗೃಹದಲ್ಲಿ ನೆಲೆಸಿದ್ದನು.
ಬೆಂಗಳೂರಲ್ಲಿ ಹಲವೆಡೆ 20 ವರ್ಷ ಸಣ್ಣಪುಟ್ಟ ಕೆಲಸ ಮಾಡಿದ್ದ ಜೋಗೀಂದರ್ ನ ಅಪ್ಪ ಅಮ್ಮ ಈಗಲ್ ಟನ್ ನಲ್ಲಿಯೂ ಕೆಲಸ ಮಾಡಿದ್ದರು. ಜೋಗೀಂದರ್ ಚಿಕ್ಕ ವಯಸ್ಸಿನಿಂದಲೂ ಸಂಬಂಧಿಕರ ಜತೆ ಬಿಹಾರದಲ್ಲಿದ್ದನು. ಅಪ್ಪ - ಅಮ್ಮನ ಪರಿಚಯದ ಮೇಲೆ ಆತನಿಗೆ ರಘುರಾಜನ್ ಮನೆಯಲ್ಲಿ ಕೆಲಸ ಸಿಕ್ಕಿತು.
ಒಮ್ಮೆ ಆರೋಪಿ ಜೋಗೀಂದರ್ ಸಾಲ ಪಡೆದವರಿಗೆ 70 ಸಾವಿರ ಹಣವನ್ನು ರಘುರಾಜನ್ ರವರ ಮೊಬೈಲ್ ನೆಟ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿಸಿದ್ದನು. ಇದಾದ ಬಳಿಕ ರಘುರಾಜನ್ ಗೆ ತಿಳಿಯದಂತೆ ಅವರ ಮೊಬೈಲ್ ನಿಂದಲೇ ಆರೋಪಿ ಬೇರೊಬ್ಬರಿಗೆ ಹಣ ವರ್ಗಾವಣೆ ಮಾಡಿದ್ದನು. ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆಯಾಗಿರುವುದು ಗೊತ್ತಾದರು ರಘುರಾಜನ್ ಸುಮ್ಮನಾಗಿದ್ದರು.
ಆಗ ದಂಪತಿ ಬಳಿ ಸಾಕಷ್ಟು ಹಣವಿದೆ. ಅದನ್ನು ಲಪಟಾಯಿಸಿದರೆ ತನ್ನೆಲ್ಲ ಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎಂಬ ದುರುದ್ದೇಶದಿಂದ ಜೋಗೀಂದರ್ ತನ್ನ ಸಂಬಂಧಿ ರವಿ ಕುಮಾರ್ ಯಾದವ್ ಜೊತೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದಾನೆ. ಅದರಂತೆ 2022ರ ಫೆಬ್ರವರಿ 7ರ ರಾತ್ರಿ 7 ಗಂಟೆ ವೇಳೆಗೆ ಮಹಡಿ ಮನೆಯ ಮೇಲಿನ ಬಾಗಿಲು ತೆರೆದಿಟ್ಟು ನಾಯಿಗೆ ಊಟ ಹಾಕಿ ಮನೆಗೆ ತೆರಳುತ್ತೇನೆಂದು ಹೇಳಿ ಹೊರಟ ಆರೋಪಿ ಮನೆ ಹಿಂದಿನ ಸ್ಟೇರ್ ಕೇಸ್ ನಿಂದ ಹತ್ತಿ ಮತ್ತೆ ಮನೆಯೊಳಗೆ ಪ್ರವೇಶಿಸಿದ್ದಾನೆ. ತರುವಾಯ ತನ್ನ ಸಂಬಂಧಿ ರವಿ ಕುಮಾರ್ ಯಾದವ್ ನನ್ನು ಕರೆಸಿಕೊಂಡಿದ್ದಾನೆ.ಮಹಡಿ ಮೇಲಿನ ಕೊಠಡಿಗೆ ಬಂದು ರಘುರಾಜನ್ ಮಲಗಿದಾಗ ತಡರಾತ್ರಿ 1 ಗಂಟೆಗೆ ಆರೋಪಿಗಳು ಅವರ ಬಾಯಿಗೆ ಬೆಡ್ ಶೀಟ್ ತುರುಕಿ ಸುತ್ತಿಗೆಯಿಂದ ತಲೆ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಆನಂತರ ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ಆಶಾರವರ ತಲೆ ಮೇಲೂ ಸುತ್ತಿಗೆಯಿಂದ ಹೊಡೆದು ಜೀವ ತೆಗೆದಿದ್ದರು.
ಈ ಕೃತ್ಯ ಎಸಗಿದ ಆರೋಪಿಗಳು ಮನೆಯಲ್ಲಿದ್ದ 56 ಸಾವಿರ ನಗದು ಎತ್ತಿಕೊಂಡು ಬೆಳಗ್ಗೆ 6 ಗಂಟೆವರೆಗೆ ಮನೆಯಲ್ಲಿಯೇ ಇದ್ದರು. ಬೆಳಗ್ಗೆ 8 ಗಂಟೆಗೆ ಜೋಗೀಂದರ್ ಸಿಬ್ಬಂದಿ ವಸತಿ ಗೃಹದ ಮನೆಗೆ ತೆರಳಿ ಉಪಾಹಾರ ಸೇವಿಸಿ ಸಿ - 21 ಬಂಗ್ಲೆಗೆ ವಾಪಸ್ಸಾಗಿದ್ದಾನೆ. ಮನೆಗೆ ಯಾರೂ ಬರುವುದಿಲ್ಲವೆಂದು ಭಾವಿಸಿ ಆರೋಪಿಯು ರಘುರಾಜನ್ ರವರ ಮೊಬೈಲ್ ನೆಟ್ ಬ್ಯಾಂಕಿಂಗ್ ನಿಂದ ಹಣ ವರ್ಗಾವಣೆಗೆ ಪ್ರಯತ್ನಿಸಿದರು ಸಾಧ್ಯವಾಗಿಲ್ಲ.ಇನ್ನು ದೆಹಲಿಯಿಂದ ಮಗ ಮಗಳು ಪ್ರತಿನಿತ್ಯ ಬೆಳಗ್ಗೆ ಮತ್ತು ರಾತ್ರಿ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡುತ್ತಿದ್ದರು. ಸೋಮವಾರ ರಾತ್ರಿ ಮತ್ತು ಮಂಗಳವಾರ ಬೆಳಗ್ಗೆ ದೂರವಾಣಿ ಕರೆ ಸ್ವೀಕರಿಸದಿದ್ದಾಗ ಪುತ್ರ ಅನುಮಾನಗೊಂಡು ರೆಸಾರ್ಟ್ ನ ಸೆಕ್ಯೂರಿಟಿ ಗಾರ್ಡ್‌ನನ್ನು ಸಂಪರ್ಕಿಸಿ ಮನೆಗೆ ಹೋಗಿ ಬರುವಂತೆ ತಿಳಿಸಿದ್ದಾನೆ.
ಸೆಕ್ಯೂರಿಟಿ ಗಾರ್ಡ್‌ಗಳು ಬಂದಾಗ ಮನೆಯಲ್ಲಿದ್ದ ಜೋಗೀಂದರ್, ರಘುರಾಜನ್ ಮತ್ತು ಆಶಾ ದಂಪತಿ ಬೆಂಗಳೂರಿಗೆ ತೆರಳಿದ್ದಾನೆಂದು ಸುಳ್ಳು ಹೇಳಿದ್ದಾನೆ. ಅಪ್ಪ ಅಮ್ಮ ಹೊರಗೆ ಹೋದರೆ ಜೋಗೀಂದರ್ ನನ್ನು ಮನೆಯೊಳಗೆ ಬಿಟ್ಟು ಹೋಗುವುದಿಲ್ಲ. ಮನೆಯೊಳಗೆ ಹೋಗಿ ಪರಿಶೀಲನೆ ಮಾಡುವಂತೆ ಪುತ್ರ ಸೆಕ್ಯೂರಿಟಿ ಗಾರ್ಡ್‌ಗೆ ಸೂಚಿಸಿದ್ದಾನೆ.ಅದರಂತೆ ಸೆಕ್ಯೂರಿಟಿ ಗಾರ್ಡ್‌ಗಳು ಮನೆಯ ಬೆಡ್ ರೂಮ್ ಗೆ ತೆರಳಿದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣ ಅಲ್ಲಿಂದ ಕಾಲ್ಕಿತ್ತ ಜೋಗೀಂದರ್ ಮತ್ತೊಬ್ಬ ಆರೋಪಿ ರವಿ ಕುಮಾರ್ ಯಾದವ್ ಜತೆ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಜೋಗೀಂದರ್ ಸಿಕ್ಕಿಬಿದ್ದರೆ ಮತ್ತೊಬ್ಬ ಆರೋಪಿ ರವಿಕುಮಾರ್ ಯಾದವ್ ಪರಾರಿಯಾಗಿದ್ದನು.
ನಾಲ್ಕು ವರ್ಷಗಳ ಬಳಿಕ ಕಾರ್ಯಾಚರಣೆಗಿಳಿದ ಬಿಡದಿ ಪೊಲೀಸ್ ಠಾಣೆಯ ಪಿಎಸ್ಸೈ ಅಣ್ಣಯ್ಯ ನೇತೃತ್ವದ ತಂಡ ಪ್ರಕರಣದ ಮತ್ತೊಬ್ಬ ಆರೋಪಿ ರವಿಕುಮಾರ್ ಯಾದವ್ ನನ್ನು ಗುಜರಾತ್ ರಾಜ್ಯದ ಅಹಮದಾಬಾದ್ ಜಿಲ್ಲೆಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.ಅಹಮದಾಬಾದ್ ನ ಘಿಕಾಂತ ನ್ಯಾಯಾಲಯದಲ್ಲಿ ಆರೋಪಿ ರವಿಕುಮಾರ್ ಯಾದವ್ ನನ್ನು ಹಾಜರು ಪಡಿಸಿ ಟ್ರಾನ್ಸಿಟಿ ವಾರೆಂಟ್ ಪಡೆದು ಬಿಡದಿ ಪೊಲೀಸ್ ಠಾಣೆಗೆ ಕರೆತರಲಾಯಿತು.ಈ ಕಾರ್ಯಾಚರಣೆಯಲ್ಲಿ ಎಎಸ್ಸೈ ಏಕಾಂಬರೇಶ್ವರ, ಮುಖ್ಯ ಪೇದೆ ಲಿಂಗರಾಜು, ಪೇದೆ ಕಾಂತರಾಜು, ತನಿಖಾ ಸಹಾಯಕ ಅನ್ವರ್ ಪಾಲ್ಗೊಂಡಿದ್ದರು.
--------------------------8ಕೆಆರ್ ಎಂಎನ್ 4,5.ಜೆಪಿಜಿ
4.ಕೊಲೆಯಾದ ವೃದ್ಧ ದಂಪತಿ5.ಪ್ರಕರಣದ 2ನೇ ಆರೋಪಿ ರವಿಕುಮಾರ್ ಯಾದವ್
--------------------------