ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದೇವೆ ಎನ್ನುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಯಾರೂ ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ. ಸೋಲನ್ನೇ ಗೆಲುವಿನ ಮೆಟ್ಟಿಲು ಎನ್ನುವಂತೆ ಪರಿಗಣಿಸಿ ಜೀವನದಲ್ಲಿ ಗುರಿಸಾಧಿಸಬೇಕು ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.ವಿಜಯನಗರ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎರಡನೇ ದಶಮಾನೋತ್ಸವ ಹಾಗೂ ಜಾನಪದೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದಿನ ಸೋಲು ನಾಳೆಯ ಗೆಲುವಾಗಿರುತ್ತದೆ. ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕು. ಜೀವನದಲ್ಲಿ ಅಡಂಬರ, ಅದ್ಧೂರಿ ತನಕ್ಕೆ ಕಡಿವಾಣ ಹಾಕಿ ಸರಳವಾಗಿ ಬದುಕಬೇಕು ಎಂದು ಅವರು ಸಲಹೆ ನೀಡಿದರು.ಅಕ್ಕಮಹಾದೇವಿ, ಸಾವಿತ್ರಿಬಾಯಿ ಬಾಪುಲೆ ಅಂತಹ ಮಹನೀಯರ ಆದರ್ಶವನ್ನು ಪಾಲಿಸಿ ಭವಿಷ್ಯ ರೂಪಿಸಿಕೊಳ್ಳಬೇಕು. ಧೈರ್ಯ, ಸಾಹಸದ ಜತೆಗೆ ಇಟ್ಟ ಗುರಿಯನ್ನು ತಲುಪುವುದಕ್ಕೆ ಸಂಕಲ್ಪ ಮಾಡಬೇಕು. ಐಷಾರಾಮಿ ಮದುವೆಗೆ ಒಪ್ಪದೆ ಸರಳವಾಗಿ ಮಾದುವೆಮಾಡಲು ಪೋಷಕರನ್ನು ಮನವೊಲಿಸಿ. ಆಸ್ತಿ ಮಾರಾಟ ಮಾಡಿ ಮದುವೆಗೆ ಒಪ್ಪಬೇಡಿ. ಅಪ್ಪ-ಅಮ್ಮ ಎಷ್ಟೇ ಒತ್ತಡ ಹೇರಿದರೂ ಸರಳತೆಗೆ ಬೆಲೆ ಕೊಡಿ. ಅದರಲ್ಲಿ ಬರುವ ಆಸ್ತಿಯನ್ನೇ ತಮ್ಮ ಬದುಕಿಗೆ ಇಟ್ಟುಕೊಳ್ಳಬೇಕು. ಸ್ವಾಭಿಮಾನದ ಬದುಕು ಸಾಗಿಸಿದರೆ ಸಮಾಜದಲ್ಲಿ ಬೆಳೆಯಬಹುದು ಎಂದರು.
ವಿದ್ಯಾರ್ಥಿಗಳಿಗಿಂತ ವಿದ್ಯಾರ್ಥಿನಿಯರು ಅತಿ ಹೆಚ್ಚು ತೇರ್ಗಡೆ ಹೊಂದುತ್ತಾರೆ. ಅದೇ ರೀತಿ ಎಲ್ಲಾ ರಂಗಗಳಲ್ಲೂ ತಮ್ಮದೇ ಆದ ಛಾಪುಮೂಡಿಸಿದ್ದಾರೆ. ಹೆಣ್ಣು ಮಕ್ಕಳು ಬೆಳಗ್ಗೆ ಎದ್ದು ಯೋಗಾಭ್ಯಾಸ ಮಾಡಬೇಕು. ನಿರಂತರ ವ್ಯಾಸಂಗ ಮಾಡಿದರೆ ಸಫಲರಾಗಬಹುದು ಎಂದು ಕಿವಿಮಾತು ಹೇಳಿದರು.ಕಾಲೇಜಿಗೆ ಮೂಲಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯ ಶಾಲಾ, ಕಾಲೇಜುಗಳ ಅಭಿವೃದ್ಧಿಗೆ ಸಿ.ಎಸ್.ಆರ್ ನಿಧಿಯನ್ನು ತಂದು ಮೂಲಸೌಕರ್ಯ ಕಲ್ಪಿಸಲು ಯತ್ನಿಸಲಾಗಿದೆ ಎಂದು ಅವರು ಭರವಸೆ ನೀಡಿದರು.
ಹಲವು ವರ್ಷಗಳ ಹಿಂದೆ ರಾಗಿ, ಭತ್ತ, ಕಬ್ಬು ಕಣದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದೇವು. ಆ ವಾತಾವರಣ ಇಂದಿನ ಜಾನಪದೋತ್ಸವದಲ್ಲಿ ಕಂಡು ಬಂದಿತು. ಡಾಂಬರಿನ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಾರೆ. ಒಳ್ಳೆಯ ಕೆಲಸ ಮಾಡಲು ಪ್ರೀತಿ ಇರಬೇಕು. ಸಾಂಪ್ರದಾಯಿಕ ಉಡುಗೆ ತೊಡುಗೆಯಲ್ಲಿ ಸಂಸ್ಕಾರ ಉಳಿಸಿ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಬೇಕು ಎಂದು ಅವರು ನುಡಿದರು.ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಮುಂದಿನ ಕಾಲ ಹೆಚ್ಚು ಅಂಕ ಪಡೆದವರಿಗೆ ಭವಿಷ್ಯ ಎನ್ನುವಂತಾಗಿದೆ. ಈಗ ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಬಂದು ಉದ್ಯೋಗ ನೀಡುತ್ತಿದ್ದಾರೆ. ನಿಮ್ಮಲ್ಲಿ ನಿಜವಾದ ಜ್ಞಾನ, ಹೆಚ್ಚು ಅಂಕ ಇದ್ದರೆ ಮಾತ್ರ ನಿಮ್ಮ ಭವಿಷ್ಯ ಇರುತ್ತದೆ. ಇನ್ನೂ ಸ್ವಲ್ಪ ವರ್ಷದಲ್ಲಿ ನಿಮ್ಮ ಮನೆಗೆ ಬಂದು ಉದ್ಯೋಗಕ್ಕೆ ಆಯ್ಕೆ ಮಾಡುತ್ತಾರೆ. ಸ್ಮಾರ್ಟ್ ಪೋನ್ ನಲ್ಲಿ ವಿಶ್ವದ ಎಲ್ಲಾ ಬೆಳವಣಿಗೆ, ಜ್ಞಾನ ನಿಮ್ಮ ಬೆರಳ ತುದಿಯಲ್ಲಿದೆ ಎಂದರು.
ಪ್ರತಿಯೊಬ್ಬರೂ ಚೆನ್ನಾಗಿ ಓದಿ ಜ್ಞಾನವನ್ನು ನಿಮ್ಮದಾಗಿಸಿಕೊಳ್ಳಿ. ಈ ಮೂಲಕ ಉಜ್ವಲ ಭವಿಷ್ಯ ನಿಮ್ಮದ್ದಾಗಿಸಿಕೊಳ್ಳಬೇಕು. ನಾವು ಎಂದೂ ನಡೆದು ಬಂದ ದಾರಿ ಮರೆಯಬಾರದು. ಜಾನಪದೋತ್ಸವ ನಡೆದು ಬಂದ ದಾರಿಯಾಗಿದೆ. ಪೈಪೋಟಿಯಲ್ಲಿ ಎಲ್ಲರನ್ನೂ ಹಿಂದಕ್ಕೆ ಹಾಕಿ ಮುಂದಕ್ಕೆ ಹೋಗುವುದು ಈಗಿನ ಸ್ಥಿತಿ. ಆದರೆ ಜನಪದ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವುದಾಗಿದೆ. ಜಿ.ಟಿ. ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ಅಭಿವೃದ್ಧಿಯ ಸುವರ್ಣ ಮಹೋತ್ಸವವಾಗಿತ್ತು. ಈ ಕಾಲೇಜು ನಿರ್ಮಾಣ ಕಾರಣಕ್ಕೆ ಜಿ.ಟಿ. ದೇವೇಗೌಡ ಉನ್ನತ ಶಿಕ್ಷಣ ಸಚಿವರಾಗಿ ಇನ್ನೂ ಸ್ವಲ್ಪ ದಿನ ಇದ್ದರೆ ವಿಜಯನಗರ ಕಾಲೇಜಿನ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸುತ್ತಿದ್ದರು ಎಂದರು.ಪ್ರಾಂಶುಪಾಲ ಜಿ.ಆರ್. ನಟರಾಜ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪಾಧ್ಯಕ್ಷೆ ಸುಚಿತ್ರಾ, ಪ್ರೊ.ಎಂ.ಎಲ್. ಅನಿತಾ, ಡಾ.ಎಚ್.ಪಿ. ಗೀತಾ ಮೊದಲಾದವರು ಇದ್ದರು.