ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಲೋಕಾಯುಕ್ತರ ಕಾರ್ಯಾಚರಣೆಯನ್ನು ಕಣ್ಣಾರೆ ಕಂಡಿದ್ದ ಜನರಿಗೆ ಉಪ ಲೋಕಾಯುಕ್ತರ ಕಾರ್ಯಾಚರಣೆ ಹೇಗಿರುತ್ತದೆ ಎಂಬುದನ್ನು ತಮ್ಮ ಕಾರ್ಯಶೈಲಿ ಮೂಲಕ ಸಾಧಿಸಿ ತೋರಿಸಿದವರು ಬಿ.ವೀರಪ್ಪ. ಇಷ್ಟು ದಿನ ಉಪ ಲೋಕಾಯುಕ್ತರನ್ನು ಯಾರೂ ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಕಳೆದ ವರ್ಷ ಮೇ ತಿಂಗಳ ಅಂತ್ಯದಲ್ಲಿ ಬಿ.ವೀರಪ್ಪನವರು ಮಂಡ್ಯದಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ಉಪ ಲೋಕಾಯುಕ್ತರ ಪವರ್ ಏನೆಂಬುದು ಸಾರ್ವಜನಿಕವಾಗಿ ಬಹಿರಂಗಗೊಂಡಿತು.

ಮೇ 21ರಿಂದ ಮತ್ತೆ ಮಂಡ್ಯದಲ್ಲಿ ಉಪ ಲೋಕಾಯುಕ್ತರ ಸೆಕೆಂಡ್‌ ಇನ್ನಿಂಗ್ಸ್‌ ಶುರುವಾಗಲಿದೆ.

ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುತ್ತಿರುವ ಭ್ರಷ್ಟ ಆಡಳಿತ, ತಾಲೂಕು ಪಂಚಾಯ್ತಿ ಅಧಿಕಾರಿಗಳ ಅಧಿಕಾರ ದುರ್ಬಳಕೆ, ಕರ್ತವ್ಯಲೋಪ, ಬೇಜವಾಬ್ದಾರಿತನ, ದಾಖಲೆಗಳನ್ನು ಸಂರಕ್ಷಿಸಿಡುವಲ್ಲಿ ವೈಫಲ್ಯ ಸೇರಿದಂತೆ ಅಕ್ರಮಗಳ ಸರಮಾಲೆಯನ್ನೇ ಬಿಚ್ಚಿಟ್ಟಿದ್ದರು. ಅಧಿಕಾರಿಗಳನ್ನು ನೇರಾ ನೇರಾ ತರಾಟೆಗೆ ತೆಗೆದುಕೊಂಡು ಚಳಿ ಬಿಡಿಸಿದ್ದರು. ಹಲವು ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ತ್ವರಿತ ವಿಚಾರಣೆ ನಡೆಸಿದರು. ಕರ್ತವ್ಯಲೋಪವೆಸಗಿದ ಅಧಿಕಾರಿಗಳನ್ನು ಅಮಾನತುಗೊಳಿಸಿದರು. ಹೀಗೆ ನಾನಾ ರೀತಿಯ ಕಾನೂನಾತ್ಮಕ ಕ್ರಮಗಳನ್ನು ಕೈಗೊಂಡು ಉಪ ಲೋಕಾಯುಕ್ತ ಸ್ಥಾನದ ಘನತೆ-ಗೌರವಗಳನ್ನು ಹೆಚ್ಚಿಸಿದರು.


ಜನರಲ್ಲಿ ಹೆಚ್ಚಿದ ನಂಬಿಕೆ-ವಿಶ್ವಾಸ:

ಸಾರ್ವಜನಿಕರ ದೂರುಗಳಿಗೆ ಶೀಘ್ರವಾಗಿ ಸ್ಪಂದಿಸಿ ನ್ಯಾಯ ದೊರಕಿಸುವ ಮೂಲಕ ಲೋಕಾಯುಕ್ತ ಸಂಸ್ಥೆ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ ಮೂಡುವಂತೆ ಮಾಡಿದ್ದರು. ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ವೆಂಕಟಾಚಲ, ಸಂತೋಷ್ ಹೆಗ್ಡೆ ಅವರ ಬಳಿಕ ಉಪ ಲೋಕಾಯುಕ್ತ ಹುದ್ದೆಯಲ್ಲಿದ್ದುಕೊಂಡು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದವರು ಬಿ.ವೀರಪ್ಪ ಮಾತ್ರ. ಅಲ್ಲದೇ, ಉಪ ಲೋಕಾಯುಕ್ತರ ಅಧಿಕಾರ ವ್ಯಾಪ್ತಿಯ ಬಗ್ಗೆ ಎಲ್ಲರಿಗೂ ಅರಿವು ಮೂಡುವಂತೆ ಮಾಡಿದರು.

ಕಳೆದೊಂದು ವರ್ಷದಿಂದ ಒಂದಿಲ್ಲೊಂದು ಪ್ರಕರಣದ ಬಗ್ಗೆ ತನಿಖೆಯನ್ನು ಮುಂದುವರೆಸುತ್ತಾ, ಲೋಕಾಯುಕ್ತ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ ನಡೆಸುವಂತೆ ಮಾಡಿ ಹೊಸ ಅಕ್ರಮಗಳನ್ನು ಬಯಲಿಗೆಳೆದರು. ಕೆಲವೊಂದು ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ನ್ಯಾಯ ದೊರಕಿಸಿಕೊಡುವ ಮೂಲಕ ಉಪ ಲೋಕಾಯುಕ್ತ ಬಿ.ವೀರಪ್ಪನವರ ಹೆಸರು ನಿರಂತರವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡಿದೆ.

ತೆರೆ ಮರೆಯ ಹಗರಣಗಳು ಬೆಳಕಿಗೆ:

ಮಂಡ್ಯದಿಂದ ಸಾಕಷ್ಟು ವಿಚಾರವಾಗಿ ಉಪ ಲೋಕಾಯುಕ್ತರಿಗೆ ದೂರು ಸಲ್ಲಿಕೆಯಾಗುತ್ತಿದ್ದವು. ಅವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲಿಸಿ ಸಾಕಷ್ಟು ಮುಂಜಾಗ್ರತೆ ವಹಿಸಿ ದಾಳಿ ನಡೆಸುತ್ತಿದ್ದರು. ಸಾರ್ವಜನಿಕರಿಂದ ಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ನಾಗಮಂಗಲ ತಾಲೂಕಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸರ್ಕಾರಿ ಭೂಮಿಯನ್ನು ಕಬಳಿಸಿದ ಪ್ರಕರಣ ಬಹಿರಂಗಗೊಂಡಿತು. ಲೋಕಾಯುಕ್ತ ಪೊಲೀಸರ ಮೂಲಕ ದಾಳಿ ನಡೆಸಿ ಸುಮಾರು ೩೪೦ ಎಕರೆ ಸರ್ಕಾರಿ ಭೂಮಿ ಕಬಳಿಕೆಯಾಗಿ ಸರ್ಕಾರಕ್ಕೆ ೨೦೦ ಕೋಟಿ ರು.ನಷ್ಟು ನಷ್ಟವಾಗಿರುವ ಸಂಗತಿಯನ್ನು ಬಯಲಿಗೆ ಬರುವಂತೆ ಮಾಡಿದರು. ತಾಲೂಕು ಕಚೇರಿಯ ೬ ಅಧಿಕಾರಿಗಳು-ಸಿಬ್ಬಂದಿಯನ್ನು ಬಂಧನಕ್ಕೊಳಪಡಿಸಿದ್ದರು. ಅದೀಗ ಪೊಲೀಸ್ ವಿಚಾರಣೆ ನಡೆದು ಒಂದು ಸಾವಿರ ಎಕರೆವರೆಗೆ ಸರ್ಕಾರಿ ಭೂಮಿ ಕಬಳಿಕೆಯಾಗಿರುವುದನ್ನು ಪೊಲೀಸರು ಬೆಳಕಿಗೆ ತಂದಿದ್ದಾರೆ.

ಅದೇ ರೀತಿ ತಗ್ಗಹಳ್ಳಿ ಗ್ರಾಪಂನಲ್ಲಿ ಮೂರೇ ದಿನದಲ್ಲಿ ೫೪ ಲಕ್ಷ ರು. ಅಕ್ರಮ ಹಣ ಪಾವತಿಯ ಬಗ್ಗೆಯೂ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಪಂಚಾಯ್ತಿ ಅಧಿಕಾರಿಗಳು ಮತ್ತು ನೌಕರರಲ್ಲಿ ನಡುಕ ಹುಟ್ಟುವಂತೆ ಮಾಡಿದ್ದಾರೆ.

ಬಹುತೇಕ ಗ್ರಾಪಂಗಳಲ್ಲಿ ಅಕ್ರಮ ಇ-ಸ್ವತ್ತು ವಿತರಣೆ:

ಕಳೆದ ವರ್ಷ ಮೇ ೨೮ರಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಇಂಡುವಾಳು, ಮಂಡ್ಯ ಗ್ರಾಮಾಂತರ ಗ್ರಾಮ ಪಂಚಾಯ್ತಿಗಳಿಗೆ ಭೇಟಿ ನೀಡಿ ಅಕ್ರಮವಾಗಿ ಇ-ಸ್ವತ್ತುಗಳನ್ನು ವಿತರಿಸಿರುವುದನ್ನು ಪತ್ತೆಹಚ್ಚಿದ್ದರು. ಇ-ಸ್ವತ್ತಿಗೆ ಸಂಬಂಧಿಸಿದ ಸಾವಿರಾರು ಕಡತಗಳು ಮಾಯವಾಗಿದ್ದನ್ನು ಬಯಲಿಗೆಳೆದಿದ್ದರು. ಈ ಎರಡೂ ಪ್ರಕರಣಗಳ ಮಾದರಿಯಲ್ಲೇ ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ಸಂತೆಕಸಲಗೆರೆ, ಬೇವಿನಹಳ್ಳಿ, ಬೇಲೂರು, ಹಳುವಾಡಿ, ತಗ್ಗಹಳ್ಳಿ, ತೂಬಿನಕೆರೆ, ಸಾತನೂರು, ಬೂದನೂರು, ಉಮ್ಮಡಹಳ್ಳಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲೂ ಅಕ್ರಮ ಬಡಾವಣೆಗಳು ನಿರ್ಮಾಣಗೊಂಡಿವೆ. ಇಲ್ಲಿಯೂ ಅಕ್ರಮ ಇ-ಸ್ವತ್ತುಗಳ ವಿತರಣೆಯಾಗಿರುವುದಾಗಿ ದೂರುಗಳು ಕೇಳಿಬಂದಿರುವುದರಿಂದ ಈ ಪಂಚಾಯ್ತಿಗಳಲ್ಲೂ ತನಿಖೆ ನಡೆಸುವ ಅಗತ್ಯವಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಈಗಾಗಲೇ ಬೇಲೂರು ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ಇ-ಸ್ವತ್ತು ವಿತರಿಸಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಜಿಪಂ ಸಿಇಒ ಕೆ.ಆರ್.ನಂದಿನಿ ತನಿಖೆ ನಡೆಸಲು ಜಿಲ್ಲಾ ಮಟ್ಟದ ಸಮಿತಿಗೆ ಆದೇಶಿಸಿದ್ದು, ಅದರಂತೆ ತನಿಖೆ ನಡೆಯುತ್ತಿದೆ. ಇತರೆ ಪಂಚಾಯ್ತಿಗಳಿಗೂ ತನಿಖೆಯನ್ನು ವಿಸ್ತರಿಸಿ ಅಕ್ರಮ ಇ-ಸ್ವತ್ತಿಗೆ ನಿರ್ಬಂಧ ಹಾಕಬೇಕೆಂಬುದು ಜನರ ಆಗ್ರಹವಾಗಿದೆ.

ಮೂವರು ವೈದ್ಯರ ಬಂಧನ ಅಪರೂಪದ ಪ್ರಕರಣ:

ಅಪ್ರಾಪ್ತ ಹೆಣ್ಣು ಮಕ್ಕಳ ಸ್ಕ್ಯಾನಿಂಗ್ ಪ್ರಕರಣದ ಸಂಬಂಧ ಸಾರ್ವಜನಿಕರ ಬಂದ ದೂರನ್ನು ಆಧರಿಸಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು, ಕೆ.ಆರ್.ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ಲೋಕಾಯುಕ್ತ ಪೊಲೀಸರಿಂದ ದಾಳಿ ನಡೆಸಿ ಮೂವರು ವೈದ್ಯರನ್ನು ಬಂಧನಕ್ಕೊಳಪಡಿಸಿದ್ದರು. ಮತ್ತೊಬ್ಬ ವೈದ್ಯೆ ತಲೆಮರೆಸಿಕೊಂಡಿದ್ದರು. ಲೋಕಾಯುಕ್ತರು ಬೀಸಿದ ಚಾಟಿಯಿಂದ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲಾ ಮಟ್ಟದ ಜಾಗೃತ ಸಮಿತಿಯನ್ನು ಪುನಾರಚನೆ ಮಾಡಿ ಎಲ್ಲಾ ತಾಲೂಕುಗಳಲ್ಲಿರುವ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳಿಗೆ ತೆರಳಿ ಪರಿಶೀಲನೆ ನಡೆಸುವಂತೆ ಮಾಡಿದರು.

ಕಳೆದೊಂದು ವರ್ಷದ ಬಳಿಕ ಇದೀಗ ಎರಡನೇ ಬಾರಿಗೆ ಮೇ ೨೧ರಿಂದ ಉಪ ಲೋಕಾಯುಕ್ತರು ಎರಡು ದಿನಗಳ ಕಾಲ ಮತ್ತೆ ಮಂಡ್ಯದಲ್ಲಿ ನೆಲೆಯೂರಿ ಸಾರ್ವಜನಿಕರ ದೂರುಗಳನ್ನು ಆಲಿಸಲಿದ್ದಾರೆ. ಈ ಬಾರಿ ಎಲ್ಲೆಲ್ಲಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುವರೋ ಎಂಬುದು ಮಾತ್ರ ನಿಗೂಢವಾಗಿದೆ. ಉಪ ಲೋಕಾಯುಕ್ತರ ಭೇಟಿ ಹಲವು ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿರುವುದಂತೂ ಸತ್ಯ.

ಹೊಸ ದೂರುಗಳಿಗೆ ಅವಕಾಶವಿರುವುದಿಲ್ಲ: ಎಸ್.ಸುರೇಶ್‌ಬಾಬು

ಮೇ ೨೧ ಮತ್ತು ೨೨ರಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಈಗಾಗಲೇ ದಾಖಲಾಗಿರುವ ದೂರುಗಳ ವಿಚಾರಣೆ ಹಾಗೂ ವಿಲೇವಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಮತ್ತು ಮಳವಳ್ಳಿ ತಾಲೂಕಿಗೆ ಸಂಬಂಧಿಸಿದ ದೂರುಗಳನ್ನು ಮಾತ್ರ ವಿಚಾರಣೆಗೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಲೋಕಾಯುಕ್ತ ಕಚೇರಿಯಿಂದ ನೋಟಿಸ್ ಜಾರಿ ಮಾಡಲಾಗಿರುವ ದೂರುದಾರರು ಮಾತ್ರ ವಿಚಾರಣೆಗೆ ಹಾಜರಾಗಲು ಅವಕಾಶವಿರುತ್ತದೆ. ಸಾರ್ವಜನಿಕರ ಹೊಸ ದೂರುಗಳನ್ನು ಸಭೆಯಲ್ಲಿ ಸ್ವೀಕರಿಸಲಾಗುವುದಿಲ್ಲ. ಯಾವುದೇ ದೂರುಗಳಿದ್ದರೆ ಸಾರ್ವಜನಿಕರು ಎಂದಿನಂತೆ ಪೊಲೀಸ್ ಅಧೀಕ್ಷಕರ ಕಚೇರಿ, ಕರ್ನಾಟಕ ಲೋಕಾಯುಕ್ತ, ಮಂಡ್ಯ ಇಲ್ಲಿಗೆ ನಿಗದಿತ ನಮೂನೆಯಲ್ಲಿ ಸಲ್ಲಿಸಬಹುದು ಎಂದು ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಸ್.ಸುರೇಶ್‌ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.