ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ

| Published : Mar 01 2024, 02:18 AM IST / Updated: Mar 01 2024, 07:49 AM IST

ಸಾರಾಂಶ

ಬಳ್ಳಾರಿ ಜಿಲ್ಲೆಯ 14151 ಹಾಗೂ ವಿಜಯನಗರ ಜಿಲ್ಲೆಯ 15,797 ಸೇರಿದಂತೆ ಒಟ್ಟು 29,948 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಬಳ್ಳಾರಿ: ವಿದ್ಯಾರ್ಥಿ ಜೀವನದ ಪ್ರಮುಖ ತಿರುವು ಎನ್ನಲಾಗುವ ದ್ವಿತೀಯ ಪಿಯುಸಿ ಪರೀಕ್ಷೆ ಮಾ. 1ರಿಂದ ಶುರುವಾಗಲಿದ್ದು, ಬಳ್ಳಾರಿ ಜಿಲ್ಲೆಯ 14151 ಹಾಗೂ ವಿಜಯನಗರ ಜಿಲ್ಲೆಯ 15,797 ಸೇರಿದಂತೆ ಒಟ್ಟು 29,948 ಅಭ್ಯರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

25823 ವಿದ್ಯಾರ್ಥಿಗಳು ಹೊಸಬರು(ಫ್ರೆಷರ್ಸ್), 289 ಪುನರಾವರ್ತಿತ ಹಾಗೂ 1296 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವರು. ಈ ಪೈಕಿ ಫ್ರೆಷರ್ಸ್ 13687 ಬಾಲಕರು ಹಾಗೂ 12136 ಬಾಲಕಿಯರು ಇದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ 16 ಹಾಗೂ ವಿಜಯನಗರ ಜಿಲ್ಲೆಯಲ್ಲಿ 18 ಸೇರಿದಂತೆ ಒಟ್ಟು 34 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಬೇಸಿಗೆಯಾದ್ದರಿಂದ ಫ್ಯಾನ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ಪಾಲಾಕ್ಷ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಒಟ್ಟು 47 ಸರ್ಕಾರಿ ಪದವಿಪೂರ್ವ ಕಾಲೇಜುಗಳಿದ್ದು, ಅನುದಾನಿತ 23 ಹಾಗೂ ಖಾಸಗಿಯ 108 ಕಾಲೇಜುಗಳಿವೆ. ಕಳೆದ ವರ್ಷ ರಾಜ್ಯಮಟ್ಟದಲ್ಲಿ 27ನೇ ಸ್ಥಾನಕ್ಕಿದ್ದ ಬಳ್ಳಾರಿ ಜಿಲ್ಲೆಯನ್ನು ಈ ಬಾರಿ ಟಾಪ್ 10ರೊಳಗೆ ತರಲು ಜಿಲ್ಲಾಡಳಿತ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಫಲಿತಾಂಶದಲ್ಲಿ ಹಿಂದುಳಿದ ಕಾಲೇಜುಗಳ ಕಡೆ ವಿಶೇಷ ಗಮನ ಹರಿಸಿ ಕಲಿಕೆಯಲ್ಲಿ ತೀರಾ ಹಿಂದುಳಿದಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಉತ್ತೀರ್ಣಕ್ಕೆ ಬೇಕಾದ ಅಂಕಗಳನ್ನು ಗಳಿಸಲು "ಕನಿಷ್ಠ ವಿಷಯ ಗರಿಷ್ಠ ಅಭ್ಯಾಸ " ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದಕ್ಕಾಗಿ ತಜ್ಞ ಶಿಕ್ಷಕರು ಹಾಗೂ ವಿಷಯ ಪರಿಣಿತರನ್ನು ನಿಯೋಜಿಸಲಾಗಿತ್ತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇಂಗ್ಲಿಷ್ ಹಾಗೂ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಬಾರಿ ಅನುತ್ತೀರ್ಣಗೊಳ್ಳುತ್ತಿರುವುದರಿಂದ ಈ ಬಾರಿ ಗ್ರಾಮೀಣ ಭಾಗದಲ್ಲಿರುವ ಪದವಿಪೂರ್ವ ಕಾಲೇಜುಗಳಲ್ಲಿ ಶಿಕ್ಷಕರ ಸಮಸ್ಯೆಯನ್ನು ನೀಗಿಸಲು ಕ್ರಮ ವಹಿಸಲಾಗಿತ್ತಲ್ಲದೆ, ಹಳ್ಳಿಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಅವರಿಗೆ ವಿಶೇಷ ತರಗತಿಗಳು, ಪರೀಕ್ಷಾ ಸಿದ್ಧತೆ ಕುರಿತು ಮನವರಿಕೆ ಮಾಡಿಕೊಡುವುದು, ಪರೀಕ್ಷಾ ಭಯ ಹೋಗಲಾಡಿಸುವುದು ಸೇರಿದಂತೆ ನಾನಾ ಯೋಜನೆಗಳನ್ನು ರೂಪಿಸಿಕೊಳ್ಳಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ನಕಲು ತಡೆಯಲು ವಿಶೇಷ ತಂಡ ರಚನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಉತ್ತಮ ಫಲಿತಾಂಶ ನಿರೀಕ್ಷೆ: ದ್ವಿತೀಯ ವರ್ಷ ಪಿಯುಸಿ ಪರೀಕ್ಷೆ ಸುಗಮವಾಗಿ ನಡೆಯಲು ಬೇಕಾದ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಭಯ ಇಟ್ಟುಕೊಳ್ಳದೆ ಧೈರ್ಯದಿಂದ ಪರೀಕ್ಷೆ ಬರೆಯಬೇಕು. ಈ ಬಾರಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆಯಲ್ಲಿದ್ದೇವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಟಿ. ಪಾಲಾಕ್ಷ ತಿಳಿಸಿದರು.ವಿಜಯನಗರದಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ

ಹೊಸಪೇಟೆ: ವಿಜಯನಗರ ಜಿಲ್ಲಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾ. 1ರಿಂದ 18 ಕೇಂದ್ರಗಳಲ್ಲಿ ಆರಂಭವಾಗಲಿವೆ ಎಂದು ಜಿಲ್ಲಾ ಶಾಲಾ ಶಿಕ್ಷಣ(ಪದವಿಪೂರ್ವ) ಇಲಾಖೆಯ ನೋಡಲ್ ಅಧಿಕಾರಿ ನಾಗರಾಜ್ ಹವಾಲ್ದಾರ್ ತಿಳಿಸಿದ್ದಾರೆ.

ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಂದಾಜು 16 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಸುಗಮವಾಗಿ ಪರೀಕ್ಷೆ ನಡೆಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರದಿಂದ ನೂರು ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ಪರೀಕ್ಷಾ ಸಂದರ್ಭದಲ್ಲಿ ಯಾವುದೇ ಜೆರಾಕ್ಸ್‌ ಅಂಗಡಿಗಳು ಹಾಗೂ ಮುದ್ರಣ ಯಂತ್ರಗಳ ಅಂಗಡಿಗಳನ್ನು ತೆರೆಯುವಂತಿಲ್ಲ. ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪೊಲೀಸ್ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಪರೀಕ್ಷಾ ಕೇಂದ್ರಗಳಲ್ಲಿ ಉಪಸ್ಥಿತರಿರುತ್ತಾರೆ. ಕಟ್ಟುನಿಟ್ಟಾಗಿ ಪರೀಕ್ಷೆಗಳನ್ನು ನಡೆಸಲು ಬೇರೆ ಜಿಲ್ಲೆಗಳಿಂದ ವಿಶೇಷ ಜಾಗೃತ ದಳದ ಸಿಬ್ಬಂದಿಯನ್ನು ನೇಮಿಸಲಾಗಿದೆ ಹಾಗೂ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜತೆಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳನ್ನು ವೀಕ್ಷಕರಾಗಿ ಜಿಲ್ಲಾಧಿಕಾರಿಗಳು ನೇಮಿಸಿದ್ದು, ಅವರು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಗಳ ಸುಗಮ ನಿರ್ವಹಣೆಯ ಕುರಿತು ವರದಿ ನೀಡಲಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಆತಂಕಕ್ಕೆ ಒಳಗಾಗದೇ ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಿ ಯಶಸ್ಸು ಗಳಿಸಿ ಜಿಲ್ಲೆಯ ಫಲಿತಾಂಶವನ್ನು ಉತ್ತಮಗೊಳಿಸುವ ಆಶಯವನ್ನು ನಾಗರಾಜ್ ಹವಾಲ್ದಾರ್ ವ್ಯಕ್ತಪಡಿಸಿದ್ದಾರೆ.