ಹಗರಿಬೊಮ್ಮನಹಳ್ಳಿ: ದೇಶದಲ್ಲಿ ಜಾತ್ಯತೀತ ಮನೋಭಾವ, ಪರಸ್ಪರ ಸಹಬಾಳ್ವೆ ಕಣ್ಮರೆಯಾಗುತ್ತಿದೆ. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಜಾತ್ಯತೀತ ಮನೋಭಾವ ಬೆಳೆಸಬೇಕು. ಮಕ್ಕಳಲ್ಲಿ ಮೂಡುವ ಜಾತ್ಯತೀತ ಮನೋಭಾವವೇ ದೇಶದ ಅಭಿವೃದ್ಧಿಗೆ ಪೂರಕ ಎಂದು ಮಾಜಿ ಶಾಸಕ ಎನ್.ಎಂ. ನಬಿ ಪ್ರತಿಪಾದಿಸಿದರು.

ತಾಲೂಕಿನ ಬೆಣ್ಣಿಕಲ್ಲು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದ ಸಮಾರೋಪ ಸಮಾರಂಭವನ್ನು ಭಾನುವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣವೇ ಬಹುದೊಡ್ಡ ಆಸ್ತಿಯಾಗಿದೆ. ಬ್ರಿಟಿಷರ ಕಾಲದಲ್ಲಿಯೇ ಆರಂಭವಾಗಿರುವ ದೇಶದ ಶಿಕ್ಷಣ ವ್ಯವಸ್ಥೆ ಸಮ ಸಮಾಜ ರೂಪಿಸುವಲ್ಲಿ ಬಹುದೊಡ್ಡ ಪಾತ್ರ ವಹಿಸಿದೆ. ಶಿಕ್ಷಣಕ್ಕೆ ದೇಶದ ಸಾಮಾಜಿಕ, ಆರ್ಥಿಕ ಸ್ವರೂಪಗಳನ್ನು ಬದಲಾಯಿಸುವ ಶಕ್ತಿ ಇದೆ. ಶಿಕ್ಷಕರು, ತಮ್ಮ ಶೈಕ್ಷಣಿಕ ಅನುಭವದ ಮೂಸೆಯಲ್ಲಿ ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂಬ ಕಿವಿಮಾತು ಹೇಳಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ. ವೀರಸಂಗಯ್ಯ ಮಾತನಾಡಿ, ಪಾಲಕರಲ್ಲಿ ಇಂಗ್ಲೀಷ್ ವ್ಯಾಮೋಹ ಹೆಚ್ಚಾಗುತ್ತಿದೆ. ಸರ್ಕಾರಗಳು ಕೂಡ ಆಂಗ್ಲ ಮಾಧ್ಯಮದ ಶಾಲೆಗಳನ್ನು ತೆರೆಯುವ ಮೂಲಕ ಮಕ್ಕಳ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವ ಅವಕಾಶ ಹಾಳು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾಕರ್ ಗ್ರಾಮದ ಶತಾಯುಷಿ ಬಂಗಾಳಿ ಕರಿಯಮ್ಮ ಅವರನ್ನು ಸನ್ಮಾನಿಸಿದರು.


ಸಾನಿಧ್ಯ ವಹಿಸಿದ್ದ ಹಾಲಶಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿ, ಸ್ವಾತಂತ್ರ್ಯ ಪೂರ್ವದಲ್ಲಿಯೇ ಲಾರ್ಡ್‌ ಮೆಕಾಲೆ ಎಲ್ಲರಿಗೂ ಶಿಕ್ಷಣ ಲಭ್ಯವಾಗುವ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ರೂಪಿಸಿದರು. ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸ ದುರ್ಗಮವಾಗಿತ್ತು. ಆದರೆ, ಈಗ ಎಲ್ಲ ಸೌಲಭ್ಯಗಳನ್ನು ಒದಗಿಸಿದರೂ ಮಕ್ಕಳಲ್ಲಿ ಅಧ್ಯಯನಾಸಕ್ತಿ ಕುಂಠಿತವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ತಾಪಂ ಮಾಜಿ ಸದಸ್ಯ ಬಿಸಿಯೂಟದ ಅಧಿಕಾರಿ ರಾಜಕುಮಾರ್ ನಾಯ್ಕ, ಶಿಕ್ಷಕರ ಸಂಘದ ಅಧ್ಯಕ್ಷ ಹ್ಯಾಟಿ ಲೋಕಪ್ಪ, ಅಮ್ಮ ಸಂಸ್ಥೆಯ ಸಾಹಿರಾಬಾನು, ಎಸ್‌ಡಿಎಂಸಿ ಅಧ್ಯಕ್ಷ ಗುರುಬಸವರಾಜ್ ಉಪಸ್ಥಿತರಿದ್ದರು.

ಶಾಲಾ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕೊಟ್ರೇಶ್, ಮುಖ್ಯಗುರು ಹುಸೇನಸಾಬ್, ಶಿಕ್ಷಕ ಕೆ.ವಿ. ಲೋಕೇಶ್, ವಕೀಲ ಗಣೇಶ್, ಹೊಸಕೇರಿ ಬಸವರಾಜ್ ನಿರ್ವಹಿಸಿದರು.