ಸಾರಾಂಶ
ಹಾವೇರಿ: ಶಿಗ್ಗಾಂವಿ-ಸವಣೂರು ಕ್ಷೇತ್ರದ ಅಭಿವೃದ್ಧಿಯನ್ನು ದೇವರು ಕೊಟ್ಟ ಕಣ್ಣಿನಿಂದ ನೋಡಬೇಕು. ಎಕ್ಸರೇ ಕಣ್ಣಿನಿಂದ ನೋಡಿದರೆ ಕೇವಲ ಎಲುಬು ಕಾಣಿಸುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಸಚಿವ ಜಮೀರ್ ಅಹಮದ್ ಅವರಿಗೆ ತಿರುಗೇಟು ನೀಡಿದ್ದಾರೆ
ಕ್ಯಾಲಕೊಂಡ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ರಾಜಕಾರಣ ಎಂದರೆ ಕೇವಲ ಒಬ್ಬರ ಮೇಲೆ ಒಬ್ಬರು ಆರೋಪ ಮಾಡೋದಾ? ಅಭಿವೃದ್ಧಿ ಮಾಡೋದಾ? 2008ರಲ್ಲಿ ಈ ಕ್ಷೇತ್ರಕ್ಕೆ ಬಂದಾಗ ನಂಜುಂಡಪ್ಪ ವರದಿ ಪ್ರಕಾರ ಹಿಂದುಳಿದ ತಾಲೂಕು ಆಗಿತ್ತು. ನಾನು ಮೊದಲು ಬಂದಾಗ ನೀವು ಕೊಟ್ಟ ಮನವಿಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದೇನೆ. ಹಿಂದೆ ಇದ್ದ ಶಾಸಕರಿಗೆ ನೀಡಿದ ಮನವಿಗಳು ಏನಾಗಿವೆ ಎಂದು ನಿಮಗೇ ಗೊತ್ತಿದೆ. ನಿಮಗೆ ನನ್ನ ಮೇಲೆ ವಿಶ್ವಾಸ ಇದೆ. ಆ ವಿಶ್ವಾಸ ಉಳಿಸಿಕೊಂಡ ಹೋಗುವ ಕೆಲಸ ನಾನು ಮಾಡಿದ್ದೇನೆ. ನೀವು ನನಗೆ ಕೊಟ್ಟ ಅಧಿಕಾರವನ್ನು ಗುಲಗುಂಜಿಯಷ್ಟು ಸ್ವಂತಕ್ಕೆ ಬಳಕೆ ಮಾಡಿಕೊಳ್ಳದೇ ಕ್ಷೇತ್ರದ ಅಭಿವೃದ್ಧಿ ಗೆ ಕೆಲಸ ಮಾಡಿದ್ದೇನೆ ಎಂದರು.ಮೊದಲು ಶಾಸಕರು ಒಂದು ಕೆಲಸ ಮಾಡಿದರೆ ಐದು ವರ್ಷ ಅದನ್ನೇ ಹೇಳುತ್ತಿದ್ದರು. ಆದರೆ, ಈಗ ಕಾಲ ಬದಲಾಗಿದೆ. ಜನರು ಪ್ರಜ್ಞಾವಂತರಾಗಿದ್ದಾರೆ. ನಿರಂತರ ಅಭಿವೃದ್ಧಿ ಬಯಸುತ್ತಾರೆ. ಅಭಿವೃದ್ಧಿ ಮಾಡುವುದು ಸವಾಲಿನ ಕೆಲಸ. ಆದರೆ, ನಾನು ನಿರಂತರ ಕ್ಷೇತ್ರದ ಅಭಿವೃದ್ಧಿ ಮಾಡುತ್ತ ಬಂದಿದ್ದೇನೆ ಎಂದರು.
ನಾನು ಎಲ್ಲ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್‌ನವರು ಕೆಲವು ಸಮುದಾಯಗಳು ತಮಗೇ ಮೀಸಲು ಎನ್ನುವಂತೆ ತಿಳಿದುಕೊಂಡಿದ್ದಾರೆ. ಆದರೆ, ಯಾರು ತಮ್ಮ ಪರವಾಗಿ ಕೆಲಸ ಮಾಡುತ್ತಾರೊ ಅವರ ಜತೆ ಜನರು ಇರುತ್ತಾರೆ. ನಮ್ಮ ಕ್ಷೇತ್ರ ಸಾಮರಸ್ಯದಿಂದ ಕೂಡಿದೆ. ನಾನು ರಾಜಿನಾಮೆ ನೀಡಿದ ಮೇಲೆ ಪೊಲೀಸ್ ಸ್ಟೇಷನ್‌ಗೆ ಅಲೆಯುವಂತೆ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಅಧಿಕಾರ ಇರಬೇಕು. ಪೊಲೀಸ್ ಅಧಿಕಾರ ಇರಬಾರದು. ಪೊಲೀಸ್ ಸ್ಟೇಷನ್‌ಗೆ ಹೋದರೆ ದೂರು ಕೊಟ್ಡವನೂ ಆರೋಪಿ ಇಬ್ಬರೂ ಪೊಲೀಸರಿಗೆ ದುಡ್ಡು ಕೊಟ್ಟು ಅಲೆದಾಡಬೇಕಾಗುತ್ತದೆ. ಹೀಗಾಗಿ, ಪೊಲೀಸ್ ಅಧಿಕಾರವನ್ನು ಕೊಣೆಗಾಣಿಸಲು ಭರತ್ ಬೊಮ್ಮಾಯಿ ಅವರನ್ನು ಗೆಲ್ಲಿಸಬೇಕು ಎಂದರು.ನಾನು ಭರತ್ ಅವರನ್ನು ಚುನಾವಣೆಗೆ ನಿಲ್ಲಿಸಬಾರದು ಎಂದುಕೊಂಡಿದ್ದೆ. ಆದರೆ, ಮೂರು ಸಮೀಕ್ಷೆಯಲ್ಲಿ ಭರತ್ ಗೆಲ್ಲುವ ಅಭ್ಯರ್ಥಿ ಎಂದು ಬಂತು. ಅಲ್ಲದೇ ಕ್ಷೇತ್ರದ ಅನೇಕ ಹಿರಿಯರು ಈ ಕ್ಷೇತ್ರ ಕಾಂಗ್ರೆಸ್ ಕೈಗೆ ಹೋದರೆ ಕೋಮು ಗಲಭೆ ಹೆಚ್ಚಾಗುತ್ತವೆ. ನಾವೆಲ್ಲ ಅನಾಥರಾಗುತ್ತೇವೆ ಎಂದು ಹೇಳಿದರು. ಹೀಗಾಗಿ ಪಕ್ಷದ ಹೈಕಮಾಂಡ್ ಅವನನ್ನು ಅಭ್ಯರ್ಥಿ ಮಾಡಿದ್ದಾರೆ. ಭರತ್ ಇನ್ನೂ ಯುವಕನಿದ್ದಾನೆ. ನನಗಿಂತ ಹೆಚ್ಚು ಅಭಿವೃದ್ಧಿ ಮಾಡುತ್ತಾನೆ. ನಿಮ್ಮ ಮತದಲ್ಲಿ ದೊಡ್ಡ ಶಕ್ತಿ ಇದೆ. ಭರತನನ್ನು ಗೆಲ್ಲಿಸಿ ಕಳುಹಿಸಿ ಎಂದು ಮನವಿ ಮಾಡಿದರು.ಮಗನನ್ನು ಗೆಲ್ಲಿಸುವುದೇ ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನತೆಯ ಗುರಿ
ಶಿಗ್ಗಾಂವಿ: ಈ ಉಪ ಚುನಾವಣೆಯಲ್ಲಿ ನನ್ನ ಮಗನನ್ನು ಗೆಲ್ಲಿಸುವುದೇ ಶಿಗ್ಗಾಂವಿ-ಸವಣೂರು ಕ್ಷೇತ್ರದ ಜನತೆಯ ಗುರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಉಪ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಗನನ್ನು ಸೋಲಿಸುವುದೇ ಗುರಿ ಎಂದು ಸಚಿವ ಜಮೀರ್ ಅಹಮದ್ ಖಾನ್ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಭರತ್ ಬೊಮ್ಮಾಯಿ ಗೆಲ್ಲಿಸುವುದೇ ಈ ಕ್ಷೇತ್ರದ ಜನರ ಗುರಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಜನತಾ ಜನಾರ್ದನ ತೀರ್ಮಾನವೇ ಅಂತಿಮ ಎಂದು ಹೇಳಿದರು.ಹಿಂದಿನ ಚುನಾವಣೆಗಳಲ್ಲಿ ಬಸವರಾಜ ಬೊಮ್ಮಾಯಿ ಹಣ ಹಂಚಿ ಚುನಾವಣೆ ಗೆದ್ದಿದ್ದಾರೆ ಎಂದು ಸಚಿವ ಜಮೀರ್ ಮಾಡಿರುವ ಆರೋಪದ ಕುರಿತು ಕೇಳಿದ ಪ್ರಶ್ನೆಗೆ, ಶಿಗ್ಗಾಂವಿ ಸವಣೂರು ಕ್ಷೇತ್ರದ ಜನರು ಸ್ವಾಭಿಮಾನಿಗಳಿದ್ದಾರೆ. ಕಾಂಗ್ರೆಸ್‌ನವರು ಅವರಿಗೆ ಅವಮಾನ ಮಾಡುತ್ತಿದ್ದಾರೆ. ಸಚಿವರು ಕಳೆದ ಚುನಾವಣೆಗಳಲ್ಲಿ ಏನೇನು ಮಾಡಿದ್ದಾರೆ ಎಂದು ಇಡೀ ರಾಜ್ಯಕ್ಕೆ ಗೊತ್ತಾಗಿದೆ ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವೇ ಆಗಿಲ್ಲ ಎನ್ನುವವರು ದಯವಿಟ್ಟು ಒಂದು ಸಲ ಕ್ಷೇತ್ರದಲ್ಲಿ ಓಡಾಡಲಿ. ಅವರು ಓಡಾಡುವ ರಸ್ತೆ, ನೀರು, ಲೈಟ್ ಯಾರ ಕಾಲದಲ್ಲಿ ಆಗಿದೆ ಎಂದು ಪ್ರಶ್ನಿಸಿದರು. ಸುಮ್ಮನೇ ಬೀದಿಯಲ್ಲಿ ನಿಂತು ಚುನಾವಣೆಗೋಸ್ಕರ ಹೇಳಿದರೆ ಪ್ರಯೋಜನ ಇಲ್ಲ ಎಂದರು.ಮಹಾರಾಷ್ಟ್ರ ಚುನಾವಣೆ ಇರುವ ಹಿನ್ನೆಲೆಯಲ್ಲಿ ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿಯವರು ರಾಜಕಾರಣ ಮಾಡುತ್ತಿದ್ದಾರೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸಿ, ಮಹಾರಾಷ್ಟ್ರ ಚುನಾವಣೆಗೂ ಇಲ್ಲಿಗೂ ಸಂಬಂಧ ಇಲ್ಲ. ಸಚಿವರ ಆದೇಶದಂತೆ ರೈತರಿಗೆ ನೋಟಿಸ್ ನೀಡಿರುವುದಾಗಿ ವಿಜಯಪುರ ಜಿಲ್ಲಾಧಿಕಾರಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಶಿಗ್ಗಾಂವಿ ಉಪ ಚುನಾವಣೆಗೆ ಹತ್ತಕ್ಕೂ ಹೆಚ್ಚು ಸಚಿವರು, ಮೂವತ್ತಕ್ಕೂ ಹೆಚ್ಚು ಶಾಸಕರು ಬರುತ್ತಿರುವುದನ್ನು ನೋಡಿದರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಸ್ತಿತ್ವವವೇ ಇಲ್ಲ ಎನ್ನುವುದು ಸಾಬೀತಾಗುತ್ತದೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪಿರ್ ಖಾದ್ರಿ ನಾಮಪತ್ರ ವಾಪಸ್ ಪಡೆದಿರುವುದು ಕಾಂಗ್ರೆಸ್ ಆಂತರಿಕ ನಿರ್ಣಯ. ಅದು ಅವರ ವೋಟ್ ಬ್ಯಾಂಕ್‌ಗಾಗಿ ತೆಗೆದುಕೊಂಡ ನಿರ್ಣಯ. ಇದು ನಮಗೆ ಪ್ಲಸ್ ಅಲ್ಲ, ಮೈನಸ್ಸೂ ಅಲ್ಲ. ಯಾಸೀರ್ ಖಾನ್ ಪಠಾಣ್ ರೌಡಿ ಶೀಟರ್ ಅಂತ ಹೇಳಿದ್ದು, ನನಗೇ ಟಿಕೆಟ್ ಸಿಗಬೇಕು ಎಂಬ ಉದ್ದೇಶದಿಂದ ಎಂಬ ಖಾದ್ರಿ ಹೇಳಿಕೆ ವಿಚಾರ ಕುರಿತು ಖಾದ್ರಿ ಅವರೇ ಉತ್ತರ ಕೊಡಬೇಕು. ಈಗ ಅವರ ಜತೆನೇ ಸೇರಿದ್ದಾರೆ. ಯಾವ ಮಾತು ಎಷ್ಟರ ಮಟ್ಟಿಗೆ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ನಿಮಗೆ ಗೊತ್ತಾಗಿದೆ ಎಂದು ಹೇಳಿದರು.