ಸಾರಾಂಶ
ಕುಷ್ಟಗಿ:
ಎಚ್ಐವಿ ಸೋಂಕಿತರನ್ನು ಮನುಷ್ಯರಂತೆ ಕಾಣಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರಿ ಹೇಳಿದರು.ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಏಡ್ಸ್ ರೋಗ ನಿಯಂತ್ರಣ ಹಾಗೂ ಮುಂಜಾಗ್ರತ ಕ್ರಮದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಚ್ಐವಿ ಸೊಂಕಿತರನ್ನು ಸಮಾಜದಿಂದ ದೂರವಿಡುವ ಕೆಲಸ ಮಾಡಬಾರದು. ಸೊಂಕಿತರನ್ನು ಮುಟ್ಟುವುದು, ಮಾತನಾಡಿಸುವುದು, ಕೈಕುಲುಕುವುದರಿಂದ ಏಡ್ಸ್ ರೋಗ ಹರಡುವುದಿಲ್ಲ. ಆದ ಕಾರಣ ಅವರನ್ನು ಸಮಾಜದಿಂದ ಹೊರಗಿಡುವ ಕೃತ್ಯ ಮಾಡಬಾರದು ಎಂದರು.ತಾಲೂಕು ಆಸ್ಪತ್ರೆಯ ಐಸಿಟಿಸಿ ಆಪ್ತಸಮಾಲೋಚಕಿ ವಿಜಯಲಕ್ಷ್ಮೀ ಮಾತನಾಡಿ, ಎಚ್ಐವಿ ಕುರಿತು ಯುವಜನರಲ್ಲಿ ಮಾಹಿತಿ ಕೊರತೆ ಕಾಡುತ್ತಿದ್ದು ಈ ವೈರಸ್‌ಗೆ ಚಿಕಿತ್ಸೆಯಿರುವುದಿಲ್ಲ. ಆಂಟಿರೆಟ್ರೋ ವೈರಲ್ ಥೆರಪಿಯಿಂದ ನಿಯಂತ್ರಿಸಬಹುದು. ಎಚ್ಐವಿ ಪೀಡಿತರಿಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಾಯವಾಣಿ ಕೇಂದ್ರ, ಆಪ್ತ ಸಮಾಲೋಚನ ಕೇಂದ್ರಗಳಿವೆ ಎಂದು ತಿಳಿಸಿದರು.ಪ್ರಾಚಾರ್ಯ ವಾದಿರಾಜ ಮಠದ ಮಾತನಾಡಿ, ಎನ್ಎಸ್ಎಸ್ ವತಿಯಿಂದ ಈ ರೀತಿಯ ಜಾಗೃತಿ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿ ದಿಸೆಯಲ್ಲಿಯೇ ಒಳ್ಳೆಯ ಜೀವನ ಕ್ರಮದ ಬಗ್ಗೆ ತಿಳಿದುಕೊಂಡು ಸಮಾಜದ ಸರ್ವತೋಮುಖ ಬೆಳವಣಿಗೆಯಲ್ಲಿ ಸಮಾಜದ ನೊಂದವರ ಹಾಗೂ ಪೀಡಿತರ ನೆರವಿಗೆ ಧಾವಿಸುತ್ತಾರೆ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಖಾದರಭಾಷಾ ಮಾಗಿ ಮಾತನಾಡಿ, ಸರಿಯಾದ ಜೀವನಕ್ರಮ, ಅಸುರಕ್ಷಿತ ಲೈಂಗಿಕತೆಯಿಂದ ಉಂಟಾಗಬಹುದಾದ ಸೋಂಕುಗಳ ಕುರಿತು ಸರಿಯಾದ ಮಾಹಿತಿ ತಿಳಿದುಕೊಂಡು ರೋಗ ಹರಡದಂತೆ ತಡೆಯಬಹುದು ಎಂದರು.ಕಾರ್ಯಕ್ರಮದಲ್ಲಿ ಎನ್‌ಎಸ್‌ಎಸ್ ಅಧಿಕಾರಿ ಡಾ. ಟಿ.ಜಿ. ಸೌಮ್ಯ, ವಿಜಯಕುಮಾರ ವಲ್ಲೂರೆ, ವೀರನಗೌಡ, ಮಂಜುಳಾ, ಆನಂದ ದೇಸಾಯಿ, ಚೈತ್ರಾ ಸೇರಿದಂತೆ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.