ಸಾರಾಂಶ
ದೇಶದಲ್ಲಿ ಪ್ರಸ್ತುತ 145 ಕೋಟಿ ಜನಸಂಖ್ಯೆಯಿದ್ದು, ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ಕಾರವಾರ: ದೇಶವು ವಿದ್ಯಾವಂತರಿಂದ ಕೂಡಿದ್ದು, ಚುನಾವಣೆಯಲ್ಲಿ ಮತ ಚಲಾಯಿಸುವಾಗ ಅಭ್ಯರ್ಥಿಗಳು ಒಡ್ಡುವ ಆಸೆ, ಆಮಿಷಗಳಿಗೆ ಹಾಗೂ ವಿವಿಧ ಕಾರಣಗಳಿಗೆ ಬಲಿಯಾಗಿ ಮತ ಚಲಾಯಿಸದೇ ಅರ್ಹತೆಯನ್ನು ನೋಡಿ ಮತ ಚಲಾಯಿಸಿ ಆಡಳಿತಕ್ಕೆ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶನಿವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ದೇಶದಲ್ಲಿ ಪ್ರಸ್ತುತ 145 ಕೋಟಿ ಜನಸಂಖ್ಯೆಯಿದ್ದು, ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಆದರೂ ಇಲ್ಲಿಯವರೆಗೆ ಸಮರ್ಪಕವಾಗಿ ಚುನಾವಣೆ ನಡೆಯುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಚುನಾವಣೆಯಲ್ಲಿ ಚುನಾವಣಾಧಿಕಾರಿಕಾರಗಳ ಪಾತ್ರ ಬಹುಮುಖ್ಯವಾಗಿದೆ. ಚುನಾವಣೆ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿಯಾಗಿದ್ದು, ದೇಶದ ಮುಂದಿನ ಪ್ರಜೆಗಳಾದ ಯುವ ಮತದಾರರು ಮತ್ತು ನಾವು ಎಲ್ಲರೂ ಒಟ್ಟುಗೂಡಿ ಜವಾಬ್ದಾರಿಯಿಂದ ಎಲ್ಲರೂ ತಪ್ಪದೇ ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗೆ ಕಾರಣಿಭೂತರಾಗೋಣ ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ದೇಶದಲ್ಲಿ 2011ರಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಿಕೊಂಡು ಬರುತ್ತಿದ್ದು, ನಮ್ಮ ಜಿಲ್ಲೆಯು 6 ವಿಧಾನಸಭಾ ಕ್ಷೇತ್ರ ಮತ್ತು 1 ಲೋಕಸಭಾ ಕ್ಷೇತ್ರವನ್ನು ಒಳಗೊಂಡಿದೆ. ಪ್ರತಿವರ್ಷ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಲಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 12.22 ಲಕ್ಷ ಮತದಾರರಿದ್ದಾರೆ. ಜಿಲ್ಲೆಯು ಗುಡ್ಡಗಾಡು ಪ್ರದೇಶವಾಗಿದ್ದು, ಈ ಬಾರಿ 10 ಹೊಸ ಮತದಾನ ಕೇಂದ್ರಗಳನ್ನು ತೆರಯಲಾಗಿದ್ದು, ಈ ವರ್ಷ 7,942 ಹೊಸ ಮತದಾರರು ನೋಂದಣಿಯಾಗಿದ್ದಾರೆ. ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ಸ್ವೀಪ್ ವತಿಯಿಂದ ಅನೇಕ ಕಾರ್ಯಕ್ರಮವನ್ನು ಅಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲೆಯಿಂದ ಮಾಸ್ಟರ್ ಟ್ರೇನರ್ ದಿನೇಶ ಶೇಟ್ ಅವರಿಗೆ ರಾಜ್ಯ ಮಟ್ಟದ ಉತ್ತಮ ಮಾಸ್ಟರ್ ಟ್ರೇನರ್ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.ಇದೇ ಸಂದರ್ಭದಲ್ಲಿ 18 ವರ್ಷ ಮೇಲ್ಪಟ್ಟ ಯುವ(ಹೊಸ) ಮತದಾರರಿಗೆ ಸಾಂಕೇತಿಕವಾಗಿ ಚುನಾವಣಾ ಗುರುತಿನ ಚೀಟಿ ವಿತರಿಸಲಾಯಿತು. ಜಿಪಂ ವತಿಯಿಂದ ಆಯೋಜಿಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಈಶ್ವರಕುಮಾರ ಕಾಂದೂ, ಉಪವಿಭಾಗಾಧಿಕಾರಿ ಕನಿಷ್ಕ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಇದ್ದರು.