ಸಾರಾಂಶ
ಯಲಬುರ್ಗಾ:
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ತಾತ್ಸಾರ ಮನೋಭಾವದಿಂದ ಕಾಣದೆ ಸಹೋದರಿಯರಂತೆ ಕಾಣುವ ಮನಸ್ಸು ಎಲ್ಲರದಾಗಬೇಕು ಎಂದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬೆಲೇರಿ ಹೇಳಿದರು.ಪಟ್ಟಣದ ಕೆಎಚ್‌ಬಿ ಕಾಲನಿಯ ಸ್ತ್ರೀಶಕ್ತಿ ಭವನದಲ್ಲಿ ಪಟ್ಟಣ ಪಂಚಾಯಿತಿ, ಡೇ ನಲ್ಮ ಯೋಜನೆಯಡಿ ಬರುವ ನಗರ ಮತ್ತು ಪ್ರದೇಶ ಮಟ್ಟದ ಒಕ್ಕೂಟಗಳ ವತಿಯಿಂದ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪುರಾತನ ಕಾಲದಿಂದಲೂ ಸಮಾಜದಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನಮಾನವಿದೆ. ಮಹಿಳೆಯರು ಅಡುಗೆ ಮನೆಗೆ ಮಾತ್ರ ಸಿಮೀತರಾಗದೆ ಸ್ವಾವಲಂಬಿ ಬದುಕು ಸಾಗಿಸುವ ಛಲ ಇಟ್ಟುಕೊಂಡು ಸಮಾಜದ ಮುಖ್ಯವಾಹಿನಿಯ ಪ್ರಧಾನ ಬಿಂದು ಆಗಿದ್ದಾಳೆ ಎಂದರು.
ಎಲ್ಲ ಕ್ಷೇತ್ರಗಳಲ್ಲಿ ಪುರುಷನ ಸರಿಸಮಳಾಗಿ ಕಾರ್ಯನಿರ್ವಹಿಸುತ್ತಿರುವ ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ಮಹಿಳೆಯರನ್ನು ಕುಟುಂಬ ಸದಸ್ಯರಂತೆ ಕಾಣುವ ಮನೋಭಾವ ಎಲ್ಲರಲ್ಲಿ ಮೂಡಿದಾಗ ಮಹಿಳೆ ನೆಮ್ಮದಿ ಜೀವನ ನಡೆಸಲು ಸಾಧ್ಯ ಎಂದು ಹೇಳಿದರು.ದಿಶಾ ಸಮಿತಿ ಸದಸ್ಯ ಡಾ. ನಂದಿತಾ ದಾನರಡ್ಡಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಹಿಳೆ ಸೇರಿದಂತೆ ಶಾಲಾ ಬಾಲಕಿಯರ ಮೇಲೆ ದೌರ್ಜನ್ಯ, ಅತ್ಯಾಚಾರ, ಕೊಲೆಗಳಂಹ ಪ್ರಕರಣಗಳು ನಡೆಯುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ. ಇದು ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಪಂ ಮುಖ್ಯಾಧಿಕಾರಿ ನಾಗೇಶ, ಪೌರಾಡಳಿತ ಇಲಾಖೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದೆ. , ಟ್ಟಣದಲ್ಲಿ ೯೬ ಸ್ವ-ಸಹಾಯ ಸಂಘಗಳು ಹಾಗೂ ಏಳು ಒಕ್ಕೂಟಗಳಿದ್ದು ಸುಮಾರು ೧೫೦೦ಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದರು.ಉಪನ್ಯಾಸ ನೀಡಿದ ಅಂಗನವಾಡಿ ಮೇಲ್ವಿಚಾರಕಿ ಲಲಿತಾ ನಾಯಕ, ವಕೀಲೆ ಅಕ್ಕಮಹಾದೇವಿ ಪಾಟೀಲ, ಹೋರಾಟದ ಮೂಲಕ ಹಕ್ಕು ಪಡೆದಾಗ ಮಾತ್ರ ನಾವು ಸಮಾಜದಲ್ಲಿ ಮುಂದೆ ಬರಲು ಸಾಧ್ಯ. ಮೂಢನಂಬಿಕೆ, ಕಂದಾಚಾರ ಇವುಗಳಿಂದ ದೂರವಿರುವ ಮನೋಭಾವ ಬೆಲೆಸಿಕೊಳ್ಳಬೇಕೆಂದರು.
ಈ ವೇಳೆಯಲ್ಲಿ ಸದಸ್ಯರಾದ ರೇವಣೆಪ್ಪ ಹಿರೇಕುರಬರ, ಬಸಮ್ಮ ಬಣಕಾರ, ಪಪಂನ ಸುಮಾ ಕಂಚಿ, ಶರಣಮ್ಮ ಪೂಜಾರ, ಪರಶುರಾಮ, ಒಕ್ಕೂಟದ ನಾನಾ ಅಧ್ಯಕ್ಷರು ಹಾಗೂ ಮಹಿಳೆಯರು ಇದ್ದರು.