ಶಿರಹಟ್ಟಿ: ಕೃಷಿ ಉತ್ಪಾದನೆ ಹೆಚ್ಚಿಸುವ ಜತೆಗೆ ಬೆಳೆಗಳನ್ನು ರೋಗ-ಕೀಟಗಳಿಂದ ರಕ್ಷಿಸಲು ರೈತರು ಬೀಜೋಪಚಾರವನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಕೃಷಿ ವಿಶ್ವವಿದ್ಯಾಲಯ, ಧಾರವಾಡ ಮಣ್ಣು ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಆರ್. ಜಗದೀಶ್ ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ, ೨೦೨೬-೨೭ ಅಂಗವಾಗಿ ತಾಲೂಕಿನ ಖಾನಾಪುರ ಗ್ರಾಮದಲ್ಲಿ ರೈತರಿಗೆ ಏರ್ಪಡಿಸಿದ್ದ ಬೀಜೋಪಚಾರ, ಮಣ್ಣಿನ ಆರೋಗ್ಯ ಚೀಟಿ ಹಾಗೂ ಗೊಬ್ಬರ ಕಲಬೆರಕೆ ಕುರಿತು ಜಾಗೃತಿ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿತ್ತನೆಗೂ ಮುನ್ನ ಶಿಫಾರಸು ಮಾಡಿದ ಶಿಲೀಂಧ್ರನಾಶಕ, ಕೀಟನಾಶಕ ಅಥವಾ ಜೈವಿಕ ಉತ್ಪನ್ನಗಳಿಂದ ಬೀಜೋಪಚಾರ ಮಾಡಿದರೆ ಮೊಳಕೆಯ ಪ್ರಮಾಣ ಹೆಚ್ಚುವ ಜತೆಗೆ ಆರಂಭಿಕ ಹಂತದಲ್ಲೇ ರೋಗಗಳ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದರು.ಮಣ್ಣಿನ ಫಲವತ್ತತೆ ಕಾಪಾಡಲು ಪ್ರತಿಯೊಬ್ಬ ರೈತರೂ ತಮ್ಮ ಜಮೀನಿನ ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನ ಆರೋಗ್ಯ ಚೀಟಿ ಪಡೆದುಕೊಳ್ಳಬೇಕು. ಚೀಟಿಯಲ್ಲಿರುವ ಶಿಫಾರಸಿನಂತೆ ಗೊಬ್ಬರ ಬಳಕೆ ಮಾಡಿದರೆ ಅನಗತ್ಯ ವೆಚ್ಚ ಕಡಿಮೆಯಾಗುವ ಜತೆಗೆ ಮಣ್ಣಿನ ಪೋಷಕಾಂಶಗಳ ಸಮತೋಲನ ಕಾಪಾಡಬಹುದು. ಗೊಬ್ಬರ ಖರೀದಿಸುವ ವೇಳೆ ರೈತರು ಅಧಿಕೃತ ಪರವಾನಗಿ ಪಡೆದ ಮಾರಾಟಗಾರರಿಂದಲೇ ಖರೀದಿ ಮಾಡಬೇಕು ಎಂದು ಹೇಳಿದರು.
ಆರ್. ನೀತೇಶ್, ಆರ್. ಗಿರೀಶ್ ಹಾಗೂ ರಾಹುಲ್ ವೈ.ಜಿ. ಮಾತನಾಡಿ, ರೈಜೋಬಿಯಂ ಬಳಕೆಯಿಂದ ಸಾರಜನಕ ಸ್ಥಿರೀಕರಣ, ಉತ್ತಮ ಬೇರು ಬೆಳವಣಿಗೆ ಹಾಗೂ ಬೆಳೆಯ ಸಮರ್ಪಕ ಬೆಳವಣಿಗೆ ಸಾಧ್ಯವಾಗುತ್ತದೆ. ಟ್ರೈಕೊಡರ್ಮಾ ಬಳಕೆಯಿಂದ ಮಣ್ಣಿನಿಂದ ಹರಡುವ ಬೇರು ಕೊಳೆ ಸೇರಿದಂತೆ ವಿವಿಧ ಶಿಲೀಂಧ್ರ ರೋಗಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದ್ದು, ಆರೋಗ್ಯಕರ ಬೆಳೆ ಹಾಗೂ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ತಿಳಿಸಿದರು.ಮಣ್ಣಿನ ಆರೋಗ್ಯ ಚೀಟಿಯ ಮಹತ್ವ ವಿವರಿಸಿ, ವೈಜ್ಞಾನಿಕ ವಿಧಾನದಲ್ಲಿ ಮಣ್ಣಿನ ಮಾದರಿ ಸಂಗ್ರಹಣೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ತೋರಿಸಲಾಯಿತು.
ಮಾರುತಿ ನಿಗಡೆ, ಪ್ರದೀಪ್ ಎಂ.ಎಚ್. ಹಾಗೂ ಶ್ರೇಯಾಂಕ್ ಮಾತನಾಡಿ, ಗೊಬ್ಬರ ಕಲಬೆರಕೆ ಕುರಿತು ರೈತರಿಗೆ ಅರಿವು ಮೂಡಿಸಿದರು.
ಶಂಕರಗೌಡ, ನವೀನ್ ಮೇಟಿ ಹಾಗೂ ಶರಣು ರೈತರಿಗೆ ಮಾಹಿತಿ ನೀಡಿದರು. ಕೃಷಿ ತಜ್ಞರು ಹಾಗೂ ವಿದ್ಯಾರ್ಥಿಗಳೊಂದಿಗೆ ಗ್ರಾಮದ ರೈತರು ಸಂವಾದ ನಡೆಸಿ, ವಿವಿಧ ಕೃಷಿ ತಾಂತ್ರಿಕ ಮಾಹಿತಿ ಪಡೆದುಕೊಂಡರು.