ಮೋದಿಗೆ ಜನಸ್ಪಂದನೆ ಕಂಡು ಕಾಂಗ್ರೆಸ್ಸಿಗೆ ನಡುಕ ಶುರು

| Published : Apr 30 2024, 02:08 AM IST

ಸಾರಾಂಶ

ಆರು ದಶಕ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರಗಳು ಹಾಗೂ ಕಳೆದೊಂದು ದಶಕದಲ್ಲಿ ದೇಶವನ್ನು ಮುನ್ನಡೆಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ತುಲನೆ ಮಾಡಿರುವ ದಾವಣಗೆರೆ, ಕರ್ನಾಟಕ ರಾಜ್ಯಹಾ ಗೂ ದೇಶದ ಜನತೆ ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

- ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಲು ನನ್ನನ್ನು ಗೆಲ್ಲಿಸಿ: ಗಾಯತ್ರಿ ಸಿದ್ದೇಶ್ವರ ಮನವಿ । ಹೊನ್ನಾಳಿ ತಾಲೂಕಿನಲ್ಲಿ ಪ್ರಚಾರ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಆರು ದಶಕ ಕಾಲ ದೇಶವನ್ನು ಆಳಿದ ಕಾಂಗ್ರೆಸ್ ಸರ್ಕಾರಗಳು ಹಾಗೂ ಕಳೆದೊಂದು ದಶಕದಲ್ಲಿ ದೇಶವನ್ನು ಮುನ್ನಡೆಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ತುಲನೆ ಮಾಡಿರುವ ದಾವಣಗೆರೆ, ಕರ್ನಾಟಕ ರಾಜ್ಯಹಾ ಗೂ ದೇಶದ ಜನತೆ ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರುವುದು ನಿಶ್ಚಿತ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ಹೊನ್ನಾಳಿ ಕ್ಷೇತ್ರದ ಹನುಮಸಾಗರ, ಎಚ್.ಗೋಪಗೊಂಡನಹಳ್ಳಿ, ಹತ್ತೂರು ಇನ್ನಿತರೆ ಗ್ರಾಮದಳಲ್ಲಿ ಸೋಮವಾರ ಪ್ರಚಾರ ಕೈಗೊಂಡು, ಮತಯಾಚಿಸಿ ಮಾತನಾಡಿದ ಅವರು, ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಆಂತರಿಕ, ಬಾಹ್ಯವಾಗಿ ಸದೃಢ ರಾಷ್ಟ್ರವಾಗಿ ಹೊಮ್ಮಿದೆ. ಮೋದಿ ಆಳ್ವಿಕೆ ಅವಧಿಯ 10 ವರ್ಷಗಳ ಅಭಿವೃದ್ಧಿ ನೋಡಿ ಜನತೆ ಮತ್ತೆ ಮೋದಿ ಕೈಗೆ ಅಧಿಕಾರ ನೀಡುತ್ತಿದ್ದಾರೆ ಎಂದರು.

ಈಗಾಗಲೇ ಮೊದಲ ಹಂತದ ಚುನಾವಣೆಯಲ್ಲಿ ರಾಜ್ಯದ ಮತದಾರರು ಬಿಜೆಪಿಗೆ ಆಶೀರ್ವದಿಸಿದ್ದಾರೆ. ಮೇ 7ರಂದು ನಡೆಯುವ ಚುನಾವಣೆಯಲ್ಲಿ ದಾವಣಗೆರೆ ಸೇರಿದಂತೆ 2ನೇ ಹಂತದ 14 ಕ್ಷೇತ್ರಗಳಲ್ಲೂ ಬಿಜೆಪಿಗೆ ಮತದಾರರು ಆಶೀರ್ವದಿಸಲಿದ್ದಾರೆ. ಇಡೀ ದೇಶವೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರಲಿದ್ದಾರೆ. ನರೇಂದ್ರ ಮೋದಿ ಪರ, ಅಭಿವೃದ್ಧಿ ಪರ ಅಲೆ ಇದೆ ಎಂದರು.

ದಾವಣಗೆರೆ ಕ್ಷೇತ್ರದಲ್ಲಿ ಈಗಾಗಲೇ ನಮ್ಮ ಗೆಲುವು ಖಚಿತವಾಗಿದೆ. ನಿನ್ನೆ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಸ್ವಪ್ರೇರಣೆಯಿಂದ ಕ್ಷೇತ್ರಾದ್ಯಂತ ವಿವಿಧೆಡೆಯಿಂದ ಬಂದ ಜನಸ್ತೋಮ ಕಂಡು ಕಾಂಗ್ರೆಸ್ಸಿಗರಿಗೆ ನಡುಕ ಉಂಟಾಗಿದೆ. ಎದುರಾಳಿಗಳು ಈಗ ಠೇವಣಿ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲೂ ಅಭಿವೃದ್ಧಿ ಮುಂದಿಟ್ಟುಕೊಂಡು, ಮತ ಕೇಳುತ್ತಿದ್ದೇವೆ. ದೇಶ ರಕ್ಷಣೆ ಹಿತದೃಷ್ಟಿಯಿಂದ ಮತ್ತೆ ಮೋದಿ ಪ್ರಧಾನಿ ಆಗಬೇಕೆಂಬ ಸಂಕಲ್ಪವನ್ನು ದೇಶ ವಾಸಿಗಳು ಮಾಡಿಯಾಗಿದೆ ಎಂದು ತಿಳಿಸಿದರು.

ದೇಶದ ಅಭಿವೃದ್ಧಿ, ದಾವಣಗೆರೆ ಅಭಿವೃದ್ಧಿಗಾಗಿ ಬಿಜೆಪಿಯನ್ನೇ ಅಧಿಕಾರಕ್ಕೆ ತರಲು ಜನ ಸಂಕಲ್ಪ ಮಾಡಿದ್ದಾರೆ. ಮತದಾರರು ಮೇ 7ರವರೆಗೂ ನರೇಂದ್ರ ಮೋದಿ ಅವರ ಧ್ಯೇಯೋದ್ದೇಶ, ಸಿದ್ದೇಶ್ವರ ಸೇರಿದಂತೆ ಬಿಜೆಪಿಯ ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮನೆ ಮನೆಗೆ ಮುಟ್ಟಿಸಿ, ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ದಾವಣಗೆರೆಯ ಪ್ರಥಮ ಮಹಿಳಾ ಸಂಸದೆಯಾಗಿ ಗಾಯತ್ರಿ ಸಿದ್ದೇಶ್ವರರನ್ನು ಆಯ್ಕೆ ಮಾಡಿ, ದೆಹಲಿಗೆ ಕಳಿಸಲು ಮತದಾರರು ಈಗಾಗಲೇ ತೀರ್ಮಾನ ಮಾಡಿದ್ದಾರೆ. ಆ ತೀರ್ಮಾನಕ್ಕೆ ಮೇ 7ರಂದು ಅಂತಿಮ ಮುದ್ರೆ ಹಾಕಲಿದ್ದಾರೆ. ಜೂ.4ರಂದು ಮತ ಎಣಿಕೆಯಂದು ದೇಶಾದ್ಯಂತ 400ಕ್ಕೂ ಹೆಚ್ಚು ಕಮಲದ ಹೂವು ಅರಳಲಿದ್ದು, ಅಂದೇ ದೇಶವ್ಯಾಪಿ ದೀಪಾವಳಿ ಆಚರಿಸಲಾಗುವುದು. ಅದು ಇಡೀ ವಿಶ್ವವೇ ಭಾರತದತ್ತ ಮತ್ತೊಮ್ಮೆ ನೋಡುವಂತೆ ಮಾಡುವ ಐತಿಹಾಸಿಕ ದಿನವಾಗಲಿದೆ ಎಂದರು.

ಮುಖಂಡರಾದ ಸುರೇಶ್, ದಾಕ್ಷಾಯಣಿ ಸಂಗಮೇಶ್ ನಿರಾಣಿ, ಋತು, ಮಹೇಶ, ಶಾಂತರಾಜ ಪಾಟೀಲ್, ಕುಬೇರಪ್ಪ, ಸಂತೋಷಕುಮಾರ, ಎಲ್.ಕೆ.ಮಂಜಪ್ಪ, ಹನುಮಂತಪ್ಪ, ಅರೆಕೆರೆ ನಾಗರಾಜ, ರಂಗನಾಥ, ಸುರೇಂದ್ರ, ಯೋಗೇಶ, ಮಂಡಲ ಸದಸ್ಯರು, ಗ್ರಾಪಂ ಸದಸ್ಯರು, ಬೂತ್ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಮುಖಂಡರು ಇದ್ದರು.

- - - ಬಾಕ್ಸ್‌ ಬರ ಸಂಕಷ್ಟಕ್ಕೆ ಸ್ಪಂದಿಸದ ಎಸ್ಸೆಸ್ಸೆಂ: ಗಾಯತ್ರಿ ವಾಗ್ದಾಳಿ ಕನ್ನಡಪ್ರಭ ವಾರ್ತೆ, ದಾವಣಗೆರೆ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ತಾಂಡವವಾಡುತ್ತಿದ್ದು, ಈ ಸಲವಂತೂ ಕಾಂಗ್ರೆಸ್ ಆಳ್ವಿಕೆಯಲ್ಲಿ ಭೀಕರ ಬರ ಆವರಿಸಿದೆ. ಆದರೂ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಒಂದೇ ಒಂದು ದಿನವೂ ಬರ ಪರಿಹಾರದ ಸಭೆ ನಡೆಸಲಿಲ್ಲ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಆರೋಪಿಸಿದರು.

ಹೊನ್ನಾಳಿ ಕ್ಷೇತ್ರದಲ್ಲಿ ಸೋಮವಾರ ಪ್ರಚಾರ ಸಭೆ, ಮತಯಾಚಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲೂ ತೀವ್ರ ಬರ ಬಂದಿದ್ದರೂ, ಉಸ್ತುವಾರಿ ಸಚಿವ ಮಲ್ಲಿಕಾರ್ಜುನರಿಗೆ ಗ್ರಾಮೀಣ ಪ್ರದೇಶಕ್ಕೆ ಹೋಗಿ, ಜನರು, ರೈತರ ಸಂಕಷ್ಟ ಆಲಿಸಿಲ್ಲ. ಈಗ ಸಚಿವರ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಹಳ್ಳಿಹಳ್ಳಿ ಸುತ್ತುತ್ತಿದ್ದಾರೆ. ರಾಜಕೀಯಕ್ಕಾಗಿ ಮತಯಾಚಿಸುತ್ತಿದ್ದಾರೆ ಹೊರತು, ಗ್ರಾಮೀಣ ಸಮಸ್ಯೆಗಳ ಆಲಿಸಿ, ಪರಿಹರಿಸಲು ಅಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೂ ಬಿಜೆಪಿ ರಾಜ್ಯ ಘಟಕದ ತಂಡ ತಂಡಗಳನ್ನು ಮಾಡಿಕೊಂಡು, ರಾಜ್ಯ ಪ್ರವಾಸ ಮಾಡಿತು. ಗ್ರಾಮೀಣ ಭಾಗದಲ್ಲಿ ಬರ ಅಧ್ಯಯನ ಮಾಡಿದೆ. ಅದರಲ್ಲಿ ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಸಹ ತಂಡವೊಂದರ ಸದಸ್ಯರಾಗಿದ್ದರು. ದಾವಣಗೆರೆ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಲ್ಲಿ ಬರ ಅಧ್ಯಯನ ಮಾಡಿ, ಕೇಂದ್ರಕ್ಕೆ ವರದಿ ನೀಡಿದ್ದಾರೆ ಎಂದು ತಿಳಿಸಿದರು.

- - - ಟಾಪ್‌ ಕೋಟ್‌ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಆತಂಕವಾದಿಗಳಿಗೆ ದೇಶದಲ್ಲಿ ಅವಕಾಶ ಇಲ್ಲದಂತಾಗಿದೆ. ಪಿಎಫ್‌ಐ ಸೇರಿದಂತೆ ನಿಷೇಧಿತ ಸಂಘಟನೆಗಳೊಂದಿಗೆ ಈಗ ಕಾಂಗ್ರೆಸ್ ಪಕ್ಷ ಸೇರಿ, ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಆತಂಕವಾದಿಗಳು ಮತ್ತೆ ಮುನ್ನೆಲೆಗೆ ಬಂದರೆ ಭಯೋತ್ಪಾದಕರು, ಮಾನವ ಬಾಂಬ್‌ಗಳು, ಜಿಹಾದಿಗಳ ಅಟ್ಟಹಾಸವೂ ಹೆಚ್ಚುತ್ತದೆ

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ

- - - -29ಕೆಡಿವಿಜಿ12, 13:

ಹೊನ್ನಾಳಿ ಕ್ಷೇತ್ರದಲ್ಲಿ ದಾವಣಗೆರೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮತಯಾಚಿಸಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ದಾಕ್ಷಾಯಣಿ ಸಂಗಮೇಶ ನಿರಾಣಿ ಇತರರು ಇದ್ದರು.