ಪ್ರವಾದಿ ಮುಹಮ್ಮದ್ (ಸ) ರವರ ಜನ್ಮ ದಿನದ ಅಂಗವಾಗಿ ಆ.26ರಿಂದ ಸೆಪ್ಟೆಂಬರ್‌ 6ರವರೆಗೆ ತಾಲೂಕಿನ ಶಿರಾಳಕೊಪ್ಪದಲ್ಲಿ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) ಎಂಬ ಶೀರ್ಷಿಕೆಯಡಿಯಲ್ಲಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಶಿರಾಳಕೊಪ್ಪ ಘಟಕದ ಅಧ್ಯಕ್ಷ ಮುಹಮ್ಮದ್ ಹುಸೈನ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪ್ರವಾದಿ ಮುಹಮ್ಮದ್ (ಸ) ರವರ ಜನ್ಮ ದಿನದ ಅಂಗವಾಗಿ ಆ.26ರಿಂದ ಸೆಪ್ಟೆಂಬರ್‌ 6ರವರೆಗೆ ತಾಲೂಕಿನ ಶಿರಾಳಕೊಪ್ಪದಲ್ಲಿ ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) ಎಂಬ ಶೀರ್ಷಿಕೆಯಡಿಯಲ್ಲಿ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಶಿರಾಳಕೊಪ್ಪ ಘಟಕದ ಅಧ್ಯಕ್ಷ ಮುಹಮ್ಮದ್ ಹುಸೈನ್ ತಿಳಿಸಿದರು.

ಮಂಗಳವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಪವಿತ್ರ ರಬಿವುಲ್ ಅವ್ವಲ್ ಎಂದು ಪ್ರಸಿದ್ಧ ಈ ತಿಂಗಳಿನಲ್ಲಿ ಪ್ರವಾದಿ ಮುಹಮ್ಮದ್ ರವರು ಜನಿಸಿದ ಹಿನ್ನೆಲೆಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ಶಿರಾಳಕೊಪ್ಪ ಘಟಕದ ವತಿಯಿಂದ ಕ್ರಾಂತಿಯ ಜ್ಯೋತಿ; ಪ್ರವಾದಿ ಮುಹಮ್ಮದ್ ( ಸ) ಶೀರ್ಷಿಕೆಯಡಿಯಲ್ಲಿ ಇದೆ 26ರಿಂದ ಸತತ ಸೆಪ್ಟೆಂಬರ್ 6ರವರೆಗೆ ಹಲವು ಅರ್ಥ ಪೂರ್ಣ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಪ್ರವಾದಿ ಮುಹಮ್ಮದ್ ( ಸ)ರವರು ಜಗತ್ತಿನಲ್ಲಿ ತಂದ ಸಮಗ್ರ ಕ್ರಾಂತಿಯ ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆ ಮೇಲೆ ಸ್ಥಾಪಿತವಾಗಿರುವ ಈ ಜಗತ್ತಿನ ಎಲ್ಲ ಜನರ ಮನಸ್ಸು ಸಂಸ್ಕರಿಸಿ ಅವರಲ್ಲಿ ನೈತಿಕತೆ ಮತ್ತು ಚಾರಿತ್ರ್ಯವನ್ನು ಶುದ್ಧೀಕರಿಸುವ ಮೂಲಕ ಪ್ರತಿಯೊಬ್ಬರೂ ಸಮಾಜಕ್ಕಾಗಿ ಬದುಕುವುದನ್ನು ತಿಳಿಸಿಕೊಟ್ಟಿದ್ದಾರೆ ಎಂದರು.

ಅಭಿಯಾನದ ಅಂಗವಾಗಿ ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಯೋಗೇಶ್ ಮಾಸ್ಟರ್ ರವರ ಕೃತಿ ಮಾನವ ಮನಸ್ಸಿನ ಕೃಷಿಕ ಮನದೊಡೆಯ ಪ್ರವಾದಿ ಮುಹಮ್ಮದ್ (ಸ) ಹಾಗೂ ವಾರ್ತಾ ಭಾರತಿ ಪತ್ರಿಕೆ ಸಂಪಾದಕ ಅಬ್ದುಲ್‌ಸಲಾಂ ಪುತ್ತಿಗೆರವರ ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್ (ಸ) ಕೃತಿಯನ್ನು ಬಿಡುಗಡೆಗೊಳಿಸಲಾಗುವುದು ಎಂದರು.

ರೋಗಿಗಳನ್ನು ಭೇಟಿಯಾಗಿ ಹಣ್ಣು ವಿತರಣೆ, ಬಡ ಮಕ್ಕಳಿಗೆ ಪುಸ್ತಕ ಪೆನ್ನು ವಿತರಣೆ, ಮನೆ ನಿರ್ಮಾಣಕ್ಕೆ ಸಹಾಯ, ರಕ್ತದಾನ ಶಿಬಿರ, ರೇಷನ್ ಕಿಟ್ ವಿತರಣೆ, ಶಾಲೆ, ಆಸ್ಪತ್ರೆ, ಗ್ರಂಥಾಲಯಗಳಲ್ಲಿ ಸೀರತ್ ಪುಸ್ತಕ ವಿತರಣೆ ಹೀಗೆ ಸೇವಾ ಕಾರ್ಯದ ಮೂಲಕ ಸಮಾಜದ ಎಲ್ಲ ವರ್ಗದ ಜನತೆಗೆ ತಲುಪಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.

ಗೋಷ್ಠಿಯಲ್ಲಿ ಜಮಾತೆ ಇಸ್ಲಾಮ್ ಕಾರ್ಯದರ್ಶಿ ಝಕಿ ಅಹಮದ್ ಖಾನ್, ಶಿಕಾರಿಪುರ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಗಫೂರ್ , ಚಿಕ್ಕಜಂಬೂರು ಸ್ಥಾನೀಯ ಅಧ್ಯಕ್ಷ ಝಾಕೀರ್ ಹುಸೇನ್, ಸಿಗಬತ್ ಉಲ್ಲಾ, ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಜೇಷನ್ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಅಬ್ದುಲ್ ಕಬೀರ್ ಉಪಸ್ಥಿತರಿದ್ದರು.