ಬಾಡಿಗೆ ಪಾವತಿಸದ ಅಂಗಡಿ ಸೀಜ್ ಮಾಡಿ

| Published : Sep 26 2024, 09:50 AM IST

ಸಾರಾಂಶ

ಪಟ್ಟಣದ 1ನೇ ವಾರ್ಡ್‌ನ ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ಹಲವು ದಿನ ಕಳೆದಿದ್ದು, ಅದನ್ನು ದುರಸ್ಥಿ ಮಾಡಿಲ್ಲ. ಅಲ್ಲಿನ ನಿವಾಸಿಗಳಿಗೆ ಕುಡಿವ ನೀರು ದೊರೆಯುತ್ತಿಲ್ಲ

ರೋಣ: ಪುರಸಭೆ ವ್ಯಾಪ್ತಿಗೆ ಒಳಪಡುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹಣ ಕಳೆದ ಹಲವು ವರ್ಷಗಳಿಂದ ಅಂಗಡಿಕಾರರು ಪಾವತಿಸಿಲ್ಲ, ಅಂತಹ ಅಂಗಡಿಕಾರರಿಗೆ ಕೂಡಲೇ ಬಾಡಿಗೆ ಬಾಕಿ ಹಣ ಪಾವತಿಸುವಂತೆ ನೋಟಿಸ್ ನೀಡಿ, ಸ್ಪಂದಿಸದಿದ್ದಲ್ಲಿ ಅಂಗಡಿ ಪರವಾನಗಿ ರದ್ದುಗೊಳಿಸಿ ಸೀಜ್ ಮಾಡುವಂತೆ ಬುಧವಾರ ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಸರ್ವಾನುಮತದಿಂದ ಠರಾವು ಮಾಡಲಾಯಿತು.

ಪಟ್ಟಣದ ಹಳೆ ಸಂತೆ ಬಜಾರದಲ್ಲಿ ಕೆನರಾ ಬ್ಯಾಂಕ್‌ ಎದುರಿಗಿರುವ ವಾಣಿಜ್ಯ ಮಳಿಗೆ, ಬಸ್ ನಿಲ್ದಾಣ ರಸ್ತೆ ಮತ್ತು ನವಲಗುಂದ ರಸ್ತೆಯಲ್ಲಿನ ಕೆರೆಗೆ ಹೊಂದಿಕೊಂಡ ವಾಣಿಜ್ಯ ಮಳಿಗೆ ಹಾಗೂ ವೀರಭದ್ರೇಶ್ವರ ದೇವಸ್ಥಾನ ಹತ್ತಿರದ ವಾಣಿಜ್ಯ ಮಳಿಗೆಗಳಲ್ಲಿನ ಬಹುತೇಕ ಅಂಗಡಿಕಾರರು ಪ್ರತಿ ತಿಂಗಳು ಕಟ್ಟಬೇಕಿದ್ದ ಬಾಡಿಗೆ ಹಣ ಕಳೆದ 10 ರಿಂದ 15 ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದು, ಅದನ್ನು ಸಮರ್ಪಕವಾಗಿ ವಸೂಲಿ ಮಾಡುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ ಏಕೆ? ಇದರಿಂದ ಪುರಸಭೆಗೆ ಬರಬೇಕಾಗಿರುವ ಆದಾಯ ಕಡಿಮೆಯಾಗುವುದಿಲ್ಲವೇ ? ಕೂಡಲೇ ಬಾಡಿಗೆ ಬಾಕಿ ಇಟ್ಟುಕೊಂಡಿರುವ ಎಲ್ಲರಿಗೂ ನೋಟಿಸ್ ನೀಡಿ ಬಾಡಿಗೆ ವಸೂಲಿ ಮಾಡಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯಾಧಿಕಾರಿ ರಮೇಶ ಹೊಸಮನಿ, ಶೀಘ್ರದಲ್ಲಿಯೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಪಟ್ಟಣದ 1ನೇ ವಾರ್ಡ್‌ನ ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ಹಲವು ದಿನ ಕಳೆದಿದ್ದು, ಅದನ್ನು ದುರಸ್ಥಿ ಮಾಡಿಲ್ಲ. ಅಲ್ಲಿನ ನಿವಾಸಿಗಳಿಗೆ ಕುಡಿವ ನೀರು ದೊರೆಯುತ್ತಿಲ್ಲ. ಅದನ್ನು ಸರಿಪಡಿಸದೇ ಹೊಸದಾಗಿ ಬಹಿರಂಗ ಲೀಲಾವ ಮಾಡುತ್ತಿದ್ದಿರಿ ಅದನ್ನು ಸರಿಪಡಿಸಿದ ನಂತರ ಶುದ್ಧ ಕುಡಿವ ನೀರಿನ ಘಟಕದ ಬಹಿರಂಗ ಲೀಲಾವ ಕರೆಯಿರಿ ಎಂದು ಸದಸ್ಯ ಮಲ್ಲಯ್ಯ ಮಹಾಪುರಷಮಠ ಆಕ್ರೋಶ ವ್ಯಕ್ತಪಡಿಸಿದರು.

ವಾರ್ಡ್‌ಗಳಲ್ಲಿನ ಗಟಾರ ಸ್ವಚ್ಛತೆಗೆ ಸಿಬ್ಬಂದಿಗಳ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ. ಸದಸ್ಯರ ಯಾವ ಮಾತಿಗೂ ಅಧಿಕಾರಿಗಳು ಬೆಲೆ ಕೊಡುವುದಿಲ್ಲ. ನಮ್ಮ ವಾರ್ಡ್‌ನಲ್ಲಿ ಚರಂಡಿ ಸ್ವಚ್ಛಗೊಳಿಸಲು ಹಲವು ಬಾರಿ ಅಧಿಕಾರಿಗಳಿಗೆ ಹೇಳಿದ್ದರೂ ಇದುವರೆಗೂ ಕ್ರಮಕೈಗೊಂಡಿಲ್ಲ. ಜನರು ಉತಾರ ಪಡೆಯಲು ಬಂದರೆ ಅಧಿಕಾರಿಗಳು ಅವರ ಬಳಿ ₹ 500 ಲಂಚ ಪಡೆದುಕೊಂಡು ಉತಾರ ಕೊಡುತ್ತಿದ್ದಾರೆ. ಲಾಭ ಸಿಕ್ಕರೇ ಮಾತ್ರ ಕೆಲಸ ಮಾಡುತ್ತಾರೆ. ಇಂತವರಿಗೆ ಹೇಳುವವರು ಕೇಳುವವರು ಯಾರು ಇಲ್ಲವೇ? ಎಂದು ಸದಸ್ಯ ವಿಜಯ ಗಡಗಿ ಅಧಿಕಾರಿಗಳ ನಡೆ ಖಂಡಿಸಿದರು.

ಕೆಲ ಲೇಔಟ್ ಗಳಿಗೆ ಸಮರ್ಪಕ ರಸ್ತೆ, ಚರಂಡಿ ವ್ಯವಸ್ಥೆ ಇಲ್ಲದಿದ್ದರೂ ಪರವಾನಗಿಯನ್ನು ಪುರಸಭೆ ಇಂಜಿನಿಯರ್ ನೀಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಅಲ್ಲಿ ಮನೆ ನಿರ್ಮಿಸಿಕೊಂಡವರು ಚರಂಡಿ ಹಾಗೂ ರಸ್ತೆ ನಿರ್ಮಾಣ ಮಾಡಿ ಕೊಡಿ ಎಂದು ನಮ್ಮನ್ನು ಕೇಳುತ್ತಾರೆ. ಅವರಿಗೆ ಏನು ಉತ್ತರ ಕೊಡಬೇಕು ಎಂದು ಸದಸ್ಯ ಸಂತೋಷ ಕಡಿವಾಲ ಪುರಸಭೆ ಇಂಜಿನಿಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯಲ್ಲಿ 25 ಕ್ಕೂ ಹೆಚ್ಚುವರಿ ಪೌರ ಕಾರ್ಮಿಕರು ಹಾಗೂ ವಾಹನ ಚಾಲಕರ ಅವಶ್ಯಕತೆ ಇದೆ. ಠರಾವು ಪಾಸ್ ಮಾಡಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸೋಣ ಎಂದು ಸದಸ್ಯ ಸಂಗಪ್ಪ ಜಿಡ್ಡಿಬಾಗಿಲು ಪ್ರಸ್ತಾಪಿಸಿದರು. ಇದಕ್ಕೆ ಸರ್ವ ಸದಸ್ಯರು ಒಮ್ಮತ ಸೂಚಿಸಿದರು.

ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರಗಪ್ಪ ಹಿರೇಮನಿ, ಸದಸ್ಯರಾದ ಮಿಥುನ.ಜಿ. ಪಾಟೀಲ, ಬಾವಾಸಾಬ್‌ ಬೇಟಗೇರಿ, ದಾವಲಸಾಬ್‌ ಬಾಡಿನ, ವಿದ್ಯಾ ದೊಡ್ಡಮನಿ, ವಿಜಯಲಕ್ಷ್ಮಿ ಕೊಟಗಿ, ರೇಣುಕಾ ರಂಗನಗೌಡ್ರ, ಶಕುಂತಲಾ ದೇಶಣ್ಣವರ, ಅಂದಪ್ಪ ಗಡಗಿ, ಬಸಮ್ಮ‌ಕೊಪ್ಪದ, ಚನ್ನಬಾಮ್ಮ ಹಿರೇಮಠ, ಪುರಸಭೆ ಮತ್ತಿತರರು ಉಪಸ್ಥಿತರಿದ್ದರು.