ಸಾರಾಂಶ
ಸೂರ್ಯಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು, ಬೆಂಗಳೂರಿನ ವೈಯಾಲಿ ಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ ೨೭ರಂದು ನಡೆಯಲಿದೆ
ಕನ್ನಡಪ್ರಭ ವಾರ್ತೆ ಮಣಿಪಾಲ
ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಬೆಸೆದು ಪ್ರಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಅಮೆರಿಕಾದ ರಿಚರ್ಡ್ ಹ್ಯಾನ್ಸೆನ್ ಅವರಿಗೆ ಇಲ್ಲಿನ ಸೆಲ್ಕೋ ಸಂಸ್ಥೆಯು ೨೦೨೩ನೇ ಸಾಲಿನ ಪ್ರತಿಷ್ಠಿತ ‘ಸೂರ್ಯಮಿತ್ರ’ ವಾರ್ಷಿಕ ಪ್ರಶಸ್ತಿ ಘೋಷಿಸಿದೆ.ರಿಚರ್ಡ್ ಹ್ಯಾನ್ಸೆನ್ ಅವರು ೧೯೮೪ರಿಂದ ಮೊದಲ ಬಾರಿಗೆ ಉತ್ತರ ಅಮೆರಿಕದ ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಮೈಕ್ರೋಫೈನಾನ್ಸ್ ಪರಿಹಾರಗಳೊಂದಿಗೆ ಪಿವಿ ತಂತ್ರಜ್ಞಾನವನ್ನು ಪರಿಚಯಿಸಲು ಲಾಭರಹಿತ ಕಾರ್ಯಕ್ರಮವನ್ನು ರೂಪಿಸಿದರು. ನಂತರ ಅವರು ೧೯೮೯ರಲ್ಲಿ ಇದೇ ಮಾದರಿಯನ್ನು ಹೊಂಡುರಾಸ್‌ನಲ್ಲಿ ಅಮೆರಿಕದ ಇಂಧನ ಇಲಾಖೆ ಜೊತೆಗೆ ಒಪ್ಪಂದ ಮಾಡಿಕೊಂಡು ಮುನ್ನಡೆಸಿದರು. ಈ ಕೆಲಸವು ಜಾಗತಿಕವಾಗಿ ಗಮನ ಸೆಳೆಯಿತು.
ಪ್ರಸ್ತುತ ಎನರ್ಜಿ ಅಕ್ಸೆಸ್ ಫೌಂಡೇಷನ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ರಿಚರ್ಡ್ ಹ್ಯಾನ್ಸೆನ್ ಅವರು, ಜಾಗತಿಕವಾಗಿ ಸುಸ್ಥಿರ ಶಕ್ತಿಯೆಡೆಗಿನ ಪರಿವರ್ತನೆಗೆ ಸಹಾಯ ಮಾಡುವ ಉದ್ದೇಶದಿಂದ ೧೯೯೩ರಲ್ಲಿ ರಿಚರ್ಡ್ ಸೋಲುಜ್ ಇಂಕ್ ಎಂಬ ಸಾಮಾಜಿಕ ಉದ್ಯಮವನ್ನು ಸ್ಥಾಪಿಸಿದರು. ಹ್ಯಾನ್ಸೆನ್ ಅವರು, ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ ಎಐಡಿ), ವಿಶ್ವ ಬ್ಯಾಂಕ್ ಮತ್ತು ಇಂಟರ್- ಅಮೆರಿಕನ್ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ಬಾಂಗ್ಲಾದೇಶ, ಬೊಲಿವಿಯಾ, ಡೊಮಿನಿಕನ್ ರಿಪಬ್ಲಿಕ್, ಇಥಿಯೋಪಿಯಾ, ಹೈಟಿ, ಭಾರತ, ನೇಪಾಳ, ನಿಕರಾಗುವಾ, ಫಿಲಿಪೈನ್ಸ್ ದೇಶಗಳು ಮತ್ತು ಪ್ರಮುಖ ಸಂಸ್ಥೆಗಳಿಗೆ ಸಲಹಾ ಸೇವೆಗಳನ್ನು ಒದಗಿಸಿದ್ದಾರೆ.ಪ್ರಶಸ್ತಿ ಪ್ರದಾನ: ಸೂರ್ಯಮಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು, ಬೆಂಗಳೂರಿನ ವೈಯಾಲಿ ಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ ೨೭ರಂದು ನಡೆಯಲಿದೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೂರ್ಯಮಿತ್ರ ಪ್ರಶಸ್ತಿಪ್ರತಿಷ್ಠಿತ ರಾಮೋನ್ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಡಾ.ಎಚ್. ಹರೀಶ್ ಹಂದೆ ಅವರು ಸ್ಥಾಪಿಸಿ ಮುನ್ನೆಡೆಸುತ್ತಿರುವ ಸೆಲ್ಕೋ ಸಂಸ್ಥೆಯು, ಪ್ರತಿಷ್ಠಿತ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಯನ್ನು ೨೦೧೨ರಿಂದ ಕೊಡಮಾಡುತ್ತಾ ಬಂದಿದೆ. ಈ ಪ್ರಶಸ್ತಿಯನ್ನು, ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಹರಿಕಾರರು ಮತ್ತು ಗ್ರಾಮೀಣ ಜನತೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದ ಅಸಾಧಾರಣ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ.
೧೯೯೫ರಲ್ಲಿ ಸ್ಥಾಪಿತವಾದ ಸೆಲ್ಕೋ ಇಂಡಿಯಾ ಸಂಸ್ಥೆಯು ಸಮಾಜದ ಸಮಗ್ರ ಅಭಿವೃದ್ಧಿಗಾಗಿ ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳ ಮೂಲಕ ಬಡತನ ನಿರ್ಮೂಲನೆಯಲ್ಲಿ ಕೆಲಸ ಮಾಡುತ್ತಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಲ್ಕೋ ದೇಶದ 7 ರಾಜ್ಯಗಳಲ್ಲಿ ಸೌರ ಇಂಧನದ ಮೂಲಕ ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಮತ್ತು ಗ್ರಾಮೀಣಾಭಿವೃದ್ಧಿಗೆ ಪೂರಕ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.