ಸಾರಾಂಶ
ತರೀಕೆರೆ ತಾಲೂಕಿನ ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒ ಮತ್ತು ಆರ್‌ಡಿಎ ಅಧಿಕಾರಿಗಳನ್ನು ಬದಲಾಯಿಸಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಾರ್ವಜನಿಕರು ಅನಿರ್ಧಿಷ್ಠಾವಧಿ ಮುಷ್ಕರ ನಡೆಸಿದರು.
ಕನ್ನಡಪ್ರಭ ವಾರ್ತೆ ತರೀಕೆರೆ
ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆ ಕಾನೂನುಬದ್ಧವಾಗಿ ನಡೆಯುತ್ತಿಲ್ಲ ಎಂದು ಗ್ರಾ.ಪಂ. ಸದಸ್ಯ ಕುಮಾರಸ್ವಾಮಿ ಆರೋಪಿಸಿದರು.ಅವರು ತಾಲೂಕಿನ ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒ ಮತ್ತು ಆರ್‌ಡಿಎ ಅಧಿಕಾರಿಗಳನ್ನು ಬದಲಾಯಿಸಬೇಕೆಂದು ಗ್ರಾ.ಪಂ. ಸದಸ್ಯರು ಮತ್ತು ಸಾರ್ವಜನಿಕರು ಮಂಗಳವಾರ ನಡೆಸಿದ ಅನಿರ್ಧಿಷ್ಠಾವಧಿ ಮುಷ್ಕರದಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರಿಗಳ ಬೇಜವಾಬ್ದಾರಿತನದಿಂದ ಮಹಾತ್ಮ ಗಾಂಧೀ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿಗಳು ನಡೆಯುತ್ತಿಲ್ಲ. ಹಣ ಕೊಟ್ಟವರಿಗೆ, ಶಿಫಾರಸ್ಸು ತಂದವರಿಗೆ ಇ-ಸೊತ್ತು ನೀಡಲಾಗುತ್ತಿದೆ. ಜನಸಾಮಾನ್ಯರು ತಿಂಗಳಾನುಗಟ್ಟಲೆ ಅಲೆದಾಡಿದರೂ ಇ-ಸೊತ್ತು ಕೊಡದೆ ಅಲೆದಾಡಿಸುತ್ತಾರೆ. ಗ್ರಾ.ಪಂ. ವ್ಯಾಪ್ತಿ ಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ನರೇಗಾ ಯೋಜನೆಯಡಿ ಶೇ.10 ರಷ್ಟು ಕೂಡ ಕೆಲಸವಾಗುತ್ತಿಲ್ಲ. ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಬೋರ್‌ವೆಲ್‌ಗಳು ಬತ್ತಿಹೋಗಿವೆ. ಜಾನುವಾರುಗಳಿಗೆ ಕುಡಿಯಲು ಅಗತ್ಯತೆಯಿದ್ದ ಕೆರೆಯ ನೀರಿಗೆ ಮೋಟಾರ್ ಅಳವಡಿಸಿ ನೀರನ್ನು ತೋಟಗಳಿಗೆ ಸರಬರಾಜು ಮಾಡಿಕೊಳ್ಳುವುದನ್ನು ನಿಲ್ಲಿಸುವಂತೆ ಅರ್ಜಿ ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ಅಧಿಕಾರಿಗಳು ತಪ್ಪು ಮಾಡಿ ಚುನಾಯಿತ ಪ್ರತಿನಿಧಿಗಳಿಗೆ ತೊಂದರೆ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.ಗ್ರಾ.ಪಂ. ಮಾಜಿ ಉಪಾಧ್ಯಕ್ಷ ನಾಗರಾಜ್ ಅವರು ಮಾತನಾಡಿ, ಗ್ರಾ.ಪಂ. ಹಾಲಿ ಸದಸ್ಯರುಗಳಿಗೇ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ನೀಡುತ್ತಿಲ್ಲ. ಇನ್ನು ಜನಸಾಮಾನ್ಯರ ಗತಿ ಏನು? ಮನೆ ನಿರ್ಮಿಸಿಕೊಳ್ಳಲು ಎನ್.ಒ.ಸಿ. ಕೇಳಿದರೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಒತ್ತುವರಿಯಾಗಿರುವ ಗ್ರಾಮ ಪಂಚಾಯಿತಿ ದಾರಿಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನರೇಗಾ ಸಹಾಯಕ ನಿರ್ದೇಶಕ ಸಿ.ಟಿ.ಯೋಗೀಶ್ ಮಾತನಾಡಿ, ಬೇಲೇನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ನಿರ್ಮಾಣಕ್ಕೆ ನರೇಗಾ ಯೋಜನೆಯಡಿ 35 ಲಕ್ಷ ರು. ನೀಡಲಾಗಿದೆ. ಪಿ.ಡಿ.ಒ ಮತ್ತು ಆರ್.ಡಿ.ಎ. ಅಭಿವೃದ್ಧಿ ಕೆಲಸಗಳಿಗೆ ನಿರ್ಲಕ್ಷ್ಯ ವಹಿಸುತ್ತಿದ್ದರೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು. ಜಿಪಿಎಸ್ ಅಳವಡಿಸಿರುವ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಿದರೆ ಮಾತ್ರ ಬಿಲ್ಲನ್ನು ನೀಡಲು ಅವಕಾಶವಿದೆ. ಇ-ಸೊತ್ತು ನೀಡುವ ವಿಚಾರದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದು ಉತ್ತರಿಸಿದರು.ಬೇಲೇನಹಳ್ಳಿ ಗ್ರಾ.ಪಂ. ಅಧ್ಯಕ್ಷ ಕಾಂತಕುಮಾರ ನಾಯ್ಕ, ಮಾಜಿ ಅಧ್ಯಕ್ಷೆ ದೀಪಾ ಜಯಣ್ಣ, ಸದಸ್ಯರಾದ ಶೃತಿ, ನೇತ್ರಮ್ಮ, ದಿವ್ಯಾ, ಸುಮಿತ್ರಮ್ಮ, ಉಮೇಶ್ ಹಾಗೂ ಇತರರು ಇದ್ದರು.